ನವದೆಹಲಿ: ಪತಂಜಲಿ ಆಯುರ್ವೇದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ಕ್ಷಮೆಯಾಚಿಸಿರುವ ಯೋಗ ಗುರು ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈಬಿಟ್ಟಿರುವುದಾಗಿ ಸುಪ್ರೀಂಕೋರ್ಟ್(Supreme court) ಮಂಗಳವಾರ ಆದೇಶ ನೀಡಿದೆ.
ನ್ಯಾಯಾಂಗ ನಿಂದನೆ ಕೈಬಿಟ್ಟಿರುವ ಸುಪ್ರೀಂಕೋರ್ಟ್, ಒಂದು ವೇಳೆ ಆದೇಶ ಉಲ್ಲಂಘಿಸಿ ಯಾವುದೇ ನಿರ್ಧಾರ ಕೈಗೊಂಡರೇ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ನ್ಯಾಯಾಂಗ ನಿಂದನೆ ಕುರಿತು ಮೇ 14ರಂದು ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಹಿಮಾ ಕೊಹ್ಲಿ ಮತ್ತು ಜಸ್ಟೀಸ್ ಅಸಾದುದ್ದೀನ್ ಅಮಾನುಲ್ಲಾ ಆದೇಶವನ್ನು ಕಾಯ್ದಿರಿಸಿದ್ದರು.ಆಧುನಿಕ ವೈದ್ಯ ಪದ್ಧತಿ ಮತ್ತು ಕೋವಿಡ್ ಲಸಿಕೆ ವಿರುದ್ಧ ಪತಂಜಲಿ ಆಕ್ಷೇಪಾರ್ಹ ಪ್ರಚಾರ ಕೈಗೊಂಡಿತ್ತು. ಇದರ ವಿರುದ್ಧ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
2023ರ ನವೆಂಬರ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಬಾಬಾ ರಾಮ್ ದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ಇಂತಹ ಜಾಹೀರಾತು ನೀಡುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದರು.