
ಮುಂಡಗೋಡ : ಮುಂಡಗೋಡ ನಗರದಲ್ಲಿ ಬುಧವಾರ ಹೋಳಿ ಹಬ್ಬದ ಅಂಗವಾಗಿ ಓಕುಳಿ, ಬಣ್ಣದಾಟ ಭರ್ಜರಿಯಾಗಿ ನಡೆಯಿತು.

ಮುಂಡಗೋಡ ಪಟ್ಟಣದ ಅರಣ್ಯ ಇಲಾಖೆಯ ಆವರಣ, ಹೆಸ್ಕಾಂ ಕಚೇರಿ ಆವರಣ, ನಂದೀಶ್ವರ ನಗರ, ಹೊಸ ಓಣಿ, ಬಸವನಬೀದಿ, ಆನಂದನಗರ, ಕಂಬಾರಗಟ್ಟಿ ಪ್ಲಾಟ, ಹಳೂರ ಓಣಿ, ನೆಹರುನಗರ ಸೇರಿದಂತೆ ವಿವಿಧೆಡೆಗಳಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಮಹಿಳೆಯರು, ಯುವಕರು ಸೇರಿದಂತೆ ಹಿರಿಯ ನಾಗರಿಕರು ಬಣ್ಣ ಎರಚಿ….. ಬಣ್ಣದಾಟದಲ್ಲಿ ಖುಷಿಪಟ್ಟರು.

ಬಿಸಿಲಿನ ನಡುವೆಯೂ ಯುವಕರು ರಂಗಿನಾಟ ರಂಗೇರಿತ್ತು. ಯುವಕರು ಬೈಕುಗಳಲ್ಲಿ ಸಂಚರಿಸುತ್ತಾ, ಓಣಿ ಕ್ರಾಸ್ ಗಳಲ್ಲಿ, ಧ್ವನಿವರ್ಧಕ ದ ಮೂಲಕ ಕೇಳಿ ಬರುತ್ತಿದ್ದ ಹಾಡುಗಳಿಗೆ ಕುಣಿಯುತ್ತಿದ್ದರು.
ಹಲಗೆ, ತಮಟೆ ಬಾರಿಸುತ್ತಾ, ಟ್ರ್ಯಾಕ್ಟರಗಳಲ್ಲಿ ಸುತ್ತಾಟ ಹೋಳಿಯ ಓಕುಳಿಗೆ ಮತ್ತಷ್ಟು ರಂಗು ತಂದಿತ್ತು. ಹೆಸ್ಕಾಂ ಕಚೇರಿ ಆವರಣ ಹಾಗೂ ಹೊಸ ಓಣಿಯಲ್ಲಿ ರೇನ್ ಡ್ಯಾನ್ಸ್ ಗೆ ವ್ಯವಸ್ಥೆ ಮಾಡಲಾಗಿತ್ತು.
ವಿವಿಧ ಕಡೆಗಳಲ್ಲಿ ಪ್ರತಿಷ್ಟಾಪಿಸಿದ್ದ ರತಿ-ಮನ್ಮಥರ ಮೂರ್ತಿಗಳನ್ನು ಸಂಜೆ ದಹನ ಮಾಡಲಾಯಿತು.
