Feng Shui

Spread the love

ಚೀನಾ ವಾಸ್ತುಶಾಸ್ತ್ರ `ಫೆಂಗ್ ಶುಯಿ’ 

~ ರಾಜಶೇಖರ ನಾಯ್ಕ ( ಫೆಂಗ್ ಶುಯಿ ವಿಶೇಷಜ್ಞರು)

ಚೀನಾ ವಾಸ್ತುಶಾಸ್ತ್ರವಾದ ಫೆಂಗ್ ಶುಯಿ ವಿಶ್ವದೆಲ್ಲೆಡೆ ಪ್ರಸಿದ್ದಿಯನ್ನು ಪಡೆದಿದೆ. ಅಮೇರಿಕಾದಲ್ಲಂತೂ ಈ ವಾಸ್ತು ಅಪಾರ ಮನ್ನಣೆ ಪಡೆದಿದೆ. ಭಾರತದಲ್ಲೂ ಈ ವಾಸ್ತು ದಿನೇ ದಿನೇ ಜನಪ್ರಿಯವಾಗುತ್ತಿದೆ.

ಫೆಂಗ್ ಶುಯಿ ವಾಸ್ತುವಿನಲ್ಲಿ ಸರಳತೆ ಮತ್ತು ಅದ್ಭುತ ಪರಿಣಾಮವಿದೆ. ಅಧಿಕ ಸಾಮರ್ಥ್ಯವುಳ್ಳ ಈ ಚೀನಾ ವಾಸ್ತುವನ್ನು ಮನೆ ಹಾಗೂ ಕಚೇರಿ, ‍ಕಾರ್ಯಾಲಯದಲ್ಲಿ ಅಳವಡಿಸಿಕೊಳ್ಳಬಹುದು. ಹೆಚ್ಚು ಹಣ ವಿನಿಯೋಗಿಸದೇ ಸಣ್ಣಪುಟ್ಟ ಬದಲಾವಣೆಯಿಂದ ಆಶ್ಚರ್ಯಚಕಿತರಾಗುವಷ್ಟು ಉತ್ತಮ ಪರಿಣಾಮವನ್ನು ಪಡೆಯಬಹುದಾದ ಫೆಂಗ್ ಶುಯಿ ವಾಸ್ತುವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತಿ ಸುಲಭ.

ಈ ವಾಸ್ತು ಶಾಸ್ತ್ರದ ವಿಶೇಷತೆಯೇನೆಂದರೆ ವಾಸ್ತುದಲ್ಲಿ ದೋಷ ಕಂಡು ಬಂದಂತಹ ಕಟ್ಟಡದ ಬಾಗಿಲು, ಕಿಟಕಿ ಇತ್ಯಾದಿ ಕೆಡವದೇ ಪರಿಹಾರ ಕಂಡುಕೊಳ್ಳಬಹುದು. ಚೀನಾದಲ್ಲಿ ಈ ವಾಸ್ತು ಶಾಸ್ತ್ರವನ್ನು ಫುಂಗ್ ಶ್ವೆ ಎಂದು ಕರೆಯಲಾಗುತ್ತಿದೆ. ಇಂಗ್ಲಿಷರಿಗೆ ಈ ಉಚ್ಚಾರದ ತೊಂದರೆಯಿಂದ ಫೆಂಗ್ ಶುಯಿ ಎಂದು ಕರೆದರು. ಫುಂಗ್ ಶ್ವೆಗಿಂತ ಹೆಚ್ಚಾಗಿ ಫೆಂಗ್ ಶುಯಿ ಎಂಬ ನಾಮಕರಣದಿಂದಲೇ ಈ ವಾಸ್ತು ಹೆಚ್ಚು ಪ್ರಸಿದ್ದಿಗೆ ಬಂದಿದೆ.

ಫೆಂಗ್(ಫುಂಗ್) ಎಂದರೆ ಗಾಳಿ, ಶುಯಿ(ಶ್ವೆ) ಎಂದರೆ ನೀರು. ಫೆಂಗ್ ಶುಯಿ(ಫುಂಗ್ ಶ್ವೆ) ಎಂದರೆ ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಗಾಳಿಯನ್ನು ದಿಕ್ಕುಗಳಿಗೆ ಪರ್ಯಯವಾಗಿ, ನೀರನ್ನು ಐಶ್ವರ್ಯಕ್ಕೆ ಪರ್ಯಾಯವಾಗಿ ಪರಿಗಣಿಸಲಾಗುವುದು.

ಫೆಂಗ್ ಶುಯಿಯನ್ನು ಚೀನಾದಲ್ಲಿ ಸುಮಾರು ೫ ಸಾವಿರ ವರ್ಷ ಹಿಂದಿನಿಂದಲೂ ರಾಜರ ಸಂಪತ್ತು, ಸಮೃದ್ಧಿ ಸಂಸಾರ ಮತ್ತು ರಾಜ್ಯದ ರಕ್ಷಣೆಗೆ ಅತ್ಯಂತ ಗೌಪ್ಯವಾಗಿ ಬಳಸಲಾಗುತ್ತಿತ್ತು.

ಪೂಸಿ ಮುನಿಯು ಇದರ ಜನಕ. ೧೯ನೇ ಶತಮಾನದವರೆಗೂ ಇದು ಬಹಳ ಗುಟ್ಟಿನಲ್ಲೇ ಇತ್ತು. ಜನಸಾಮಾನ್ಯರಿಗೆ ನಿಲುಕದ ಶಕ್ತಿ ವಾಸ್ತುವಾಗಿತ್ತು. ಆದರೆ ಕಾಲಕ್ರಮೇಣ ಹೆಚ್ಚಿನ ಹಣದ ಆಸೆಗಾಗಿ ಶ್ರೀಮಂತ ವ್ಯಾಪಾರಿಗಳಿಗೆ, ಧನಿಕರಿಗೆ ಗುಟ್ಟಿನಲ್ಲಿ ಈ ಶಾಸ್ತ್ರದ ಅನುಸರಣೆಯನ್ನು ಹೇಳಿಕೊಡಲು ತೊಡಗಿದರು. ಆ ವ್ಯಕ್ತಿಗಳು ಕಾಲಕ್ರಮೇಣ ತಮ್ಮ ಬಂಧುಗಳಿಗೆ, ಆಪ್ತರಿಗೆ ತಿಳಿಸಲು ತೊಡಗಿದರು.

ನಂತರ ನಿಧಾನವಾಗಿ ಅದು ಜನಸಾಮಾನ್ಯರನ್ನು ತಲುಪಿತು. ವಾಸಸ್ಥಳದಲ್ಲಿ ಅಶುಭವಾದರೆ, ಅಶುಭಕಾರಕ ಶಕ್ತಿಗಳಿದ್ದರೆ ಈ ವಾಸ್ತುಶಾಸ್ತ್ರದ ಸಹಾಯದಿಂದ ನಾವು ನಮ್ಮ ಮನೆಯ ಅಥವಾ ಕಚೇರಿಯ ಬಣ್ಣ, ಪ್ರತಿಮೆ, ಚಿತ್ರಪಟಗಳನ್ನು, ನಿರ್ದಿಷ್ಟ ಸಲಕರಣೆಯನ್ನು ಫೆಂಗ್ ಶುಯಿ ಸೂಚನೆಯಂತೆ ಬಳಸಿದರೆ ಅಶುಭಕಾರಕ ಶಕ್ತಿ ನಾಶ ಹೊಂದಿ ಶುಭವಾಗಲಿದೆ.

ಫೆಂಗ್ ಶುಯಿಯಲ್ಲಿ ೪ ಸ್ವರ್ಗೀಯ ಪ್ರಾಣಿಗಳಿವೆ. ಅವುಗಳೆಂದರೆ : ಡ್ರ್ಯಾಗನ್(ಪೂರ್ವ ದಿಕ್ಕು), ಬಿಳಿಹುಲಿ(ಪಶ್ಚಿಮ ದಿಕ್ಕು), ಫಿನಿಕ್ಸ್ (ದಕ್ಷಿಣ ದಿಕ್ಕು), ಕಪ್ಪು ಆಮೆ(ಉತ್ತರ ದಿಕ್ಕು) ಈ ನಾಲ್ಕು ಸ್ವರ್ಗೀಯ ಪ್ರಾಣಿಗಳು ನಾಲ್ಕು ದಿಕ್ಕುಗಳ ತರಹ ಕಾರ್ಯ ನಿರ್ವಹಿಸುತ್ತದೆ. ಗಂಟೆಗಳು, ಗಾಳಿಗಂಟೆಗಳು ಫೆಂಗ್ ಶುಯಿ ಶಾಸ್ತ್ರದಲ್ಲಿ ಮಹತ್ತರ ಪಾತ್ರವಹಿಸುತ್ತದೆ.

ಫೆಂಗ್ ಶುಯಿಯಲ್ಲಿ ನಗುವ ಬುದ್ಧನನ್ನು ಐಶ್ವರ್ಯ ದೇವತೆ ಎಂದು ಕರೆಯುವರು. ಅನೇಕ ರೂಪದಲ್ಲಿ ಈ ನಗುವ ಬುದ್ಧನನ್ನು ಕಾಣಬಹುದಾಗಿದೆ. ಈ ನಗುವ ಬುದ್ಧನ ಪ್ರತಿಮೆಯನ್ನು ಮನೆ, ಕಚೇರಿಯಲ್ಲಿ ಇಟ್ಟುಕೊಂಡರೆ ಅದೃಷ್ಟ ಒಲಿದು ಬರಲಿದೆ.

ಫೆಂಗ್ ಶುಯಿ ಅನುಸರಣೆಯಿಂದ ಮನೆಗೆ ಅದೃಷ್ಟ ಒಲಿದು ಬರಲಿದೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. ಕುಟುಂಬದ ಸದಸ್ಯರ ನಡುವೆ ಪ್ರೇಮ, ಸಾಮರಸ್ಯ, ವಿಶ್ವಾಸಭಾವಗಳು ವೃದ್ದಿಸುತ್ತದೆ ಎನ್ನುವ ನಂಬಿಕೆ ಇದೆ.

ಕೆಲವು ಫೆಂಗ್ ಶುಯಿ ಟಿಪ್ಸ್ :

~ ಅಡುಗೆ ಮನೆಯಲ್ಲಿ ಸ್ಟೋವ್ ಹಾಗೂ ಪಾತ್ರೆ ತೊಳೆಯುವ ವಾಶ್‌ಬೇಸಿನ್ ಒಂದರ ಪಕ್ಕ ಮತ್ತೊಂದು ಇರಕೂಡದು. ಇದರಿಂದ ಕುಟುಂಬದಲ್ಲಿ ವೈಮನಸ್ಸು, ಜಗಳ ಉಂಟಾಗುತ್ತದೆ.

~ ದಂಪತಿಗಳು ಮಲಗುವ ಮಂಚಕ್ಕೆ(ಹಾಸಿಗೆಗೆ) ವಿರುದ್ದ ಕನ್ನಡಿ ಇಡಬಾರದು. ಇದರಿಂದ ದಂಪತಿಗಳಲ್ಲಿ ವೈಮನಸ್ಸು ಉಂಟಾಗಿ ಮೂರನೇಯವರ ಪ್ರವೇಶಕ್ಕೆ ಏಡೆಮಾಡಿಕೊಡುತ್ತದೆ.

~ ಮನೆಯ ಮುಂಬಾಗಿಲಿನ ಮುಂದೆ ಚಪ್ಪಲಿ, ಬೂಟು ಇರಿಸದೇ ಅವುಗಳನ್ನು ಪಕ್ಕದಲ್ಲಿ ಇಡಿ.

~ ಮನೆಯಲ್ಲಿ ಪಕ್ಷಿಗಳನ್ನು ಎಂದೂ ಪಂಜರದಲ್ಲಿಡಬೇಡಿ.

~ ಎಲ್ಲಾ ದಿಕ್ಕುಗಳಲ್ಲಿ ದಕ್ಷಿಣ ದಿಕ್ಕು ಅತ್ಯಂತ ಪ್ರೌಢವಾಗಿರುವುದು.

~ ಯಾವಾಗಲೂ ಬಚ್ಚಲುಮನೆ(ಬಾಥರೂಂ)/ಶೌಚಾಲಯದ ಬಾಗಿಲುಗಳನ್ನು ಹಾಕಿಡಿ. ಬಾಥರೂಂ/ಶೌಚಾಲಯದ ಕಿಡಕಿಗಳನ್ನು ತೆರೆದಿಡಿ.

~ ಬಿದಿರಿನ ಗಿಡಗಳು ದೀರ್ಘಾಯುಷ್ಯದ ಸಂಕೇತ. ಇದನ್ನು ಪೂರ್ವದಲ್ಲಿಡಬೇಕು. ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಬೇಡ.

~ ಪ್ರೇಮಿಗಳ, ದಂಪತಿಗಳ ಚಿತ್ರವನ್ನು ಇಡಲು ನೈಋತ್ಯ ಭಾಗ ಸೂಕ್ತ ಸ್ಥಳ.

~ ದಾಂಪತ್ಯದಲ್ಲಿ ವಿರಸ ಉಂಟಾಗಿದ್ದರೆ ಮಲಗುವ ಕೋಣೆಯ ನೈಋತ್ಯದಲ್ಲಿ ಮದುವೆಯ ಹೊಸದರಲ್ಲಿ ತೆಗೆಸಿಕೊಂಡ ಭಾವಚಿತ್ರ ಇಡಬೇಕು.

~ ನಿಮ್ಮ ಹಣ, ಆಭರಣಗಳನ್ನು ಕೆಂಪು ಬಣ್ಣದ ಚೀಲದಲ್ಲಿಡಿರಿ. ಇದರಿಂದ ಸಿರಿ ದ್ವಿಗುಣಿಸುತ್ತದೆ.

~ ಮುಂಬಾಗಿಲಿಗೆ ಕಾಲು ಮಾಡಿ ಮಲಗದಿರಿ.

~ ಪತಿ ಇಲ್ಲವೆ ಪತ್ನಿ ವಿನಾಕಾರಣ ಜಗಳ ಮಾಡುತ್ತಿದ್ದರೆ ವಾಯುವ್ಯದಲ್ಲಿ ಕಾಡುಮೃಗಗಳ ಚಿತ್ರ/ಮೂರ್ತಿ ಇರುವುದೋ ಎಂದು ಪರೀಕ್ಷಿಸಿ.

~ ಅಳುವ ಮಗುವಿನ ಚಿತ್ರ, ಕೋಪಗೊಂಡಿರುವ ವ್ಯಕ್ತಿ, ಕ್ರೂರ ಮುಖದ ಪಕ್ಷಿ, ಪ್ರಾಣಿಗಳ ಚಿತ್ರವನ್ನು ಮನೆಯ ಗೋಡೆ ಮೇಲೆ ಹಚ್ಚಬೇಡಿ, ತೂಗು ಹಾಕಬೇಡಿ.

~ ಮನೆಯೊಳಗೆ ಈಗಾಗಲೇ ಅಕ್ವೇರಿಯಂ ಇದ್ದರೆ ಎಚ್ಚರವಾಗಿರಿ. ಅಕ್ವೇರಿಯಂ ಸರಿಯಾದ ಸ್ಥಳದಲ್ಲಿ ಸ್ಥಾಪಿತವಾದರೆ ಅದು ದೊಡ್ಡ ಅದೃಷ್ಟ ತರುತ್ತದೆ. ಅದು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ ನಿಮಗೆ ದುರಾದೃಷ್ಟ, ಹಾನಿ ತರಲಿದೆ. 

~ ನಿಮ್ಮ ಪ್ರಣಯವು ಸಫಲವಾಬೇಕಾದರೆ ಡ್ರ್ಯಾಗನ್ ಮುಖವಿರುವ ಆಮೆಯ ಪ್ರತಿಮೆಯ ಬಾಯಿಗೆ ಕೆಂಪು ರಿಬ್ಬನ್ ತುಂಡನ್ನಿರಿಸಬೇಕು.

~ ಮಕ್ಕಳನ್ನು ಬಯಸಿದರೆ ಮಲಗುವ ಕೋಣೆಯಲ್ಲಿ ಹೂವುಗಳನ್ನು ಇರಿಸಬಾರದು.

~ ಮೂರು ಚೀನಾ ನಾಣ್ಯಗಳನ್ನು ಕೆಂಪು ರಿಬ್ಬನ್‌ನಲ್ಲಿ ಸುತ್ತಿ ಅದನ್ನು ನಿಮ್ಮ ಮನೆ ಮುಂಬಾಗಿಲಿನ ಹಿಂದುಗಡೆಯ ಹ್ಯಾಂಡಲ್‌ಗೆ ನೇತು ಹಾಕಿ ನಿಮಗೆ ಸಿರಿಯ ಅದೃಷ್ಟ ತಂದುಕೊಡುತ್ತದೆ.

~ ಪ್ರತಿದಿನ ಬೆಳಿಗ್ಗೆ ಮನೆಯ ಮುಂದೆ ನೀರಿನಿಂದ ಸ್ವಚ್ಛಗೊಳಿಸಿ ರಂಗೋಲಿ ಹಾಕುವುದರಿಂದ ಆಹ್ಲಾದಕರ ಶಕ್ತಿಯನ್ನು ಆಹ್ವಾನಿಸಿದಂತಾಗುತ್ತದೆ. ಮನೆಯಲ್ಲಿ ಪ್ರತಿದಿನ ಧೂಪ ಹಾಕಿ. ಇದು ಮನೆಯ ವಾತಾವರಣವನ್ನು ಶುದ್ದಗೊಳಿಸುತ್ತದೆ.

~ ಬಾಗಿಲಿಗೆ ಹಾಕಿದ ತೋರಣ, ಹೂಮಾಲೆ ಒಣಗಿದ ತಕ್ಷಣ ಹೊರಗೆ ಹಾಕಿರಿ.

~ ಮನೆಯ ಪ್ರವೇಶ ದ್ವಾರವು ಸಂತಾನ ಭಾಗ್ಯಕ್ಕೆ ನೇರ ಸಂಬಂಧವನ್ನು ಹೊಂದಿದೆ.

~ ನೈಋತ್ಯ ಭಾಗ್ಯದಲ್ಲಿ ನೀರಿನ ಹೂಜಿ ಇಡುವುದರಿಂದ ಪ್ರೇಮ ಸಂಬಂಧ ಪಕ್ವವಾಗುತ್ತದೆ.