Variety

Spread the love

91 ದೇಶಗಳ ರಾಷ್ಟ್ರಗೀತೆ ಕಂಠಪಾಠ ಮಾಡಿ ದಾಖಲೆ ಬರೆದ ಗುಜರಾತ್ ಯುವಕ

ವಡೋದರಾ : ಗುಜರಾತ್‌ ನ ಹದಿಹರೆಯದ ಯುವಕನೋರ್ವ ತನೆಗೆ 91 ದೇಶಗಳ ರಾಷ್ಟ್ರಗೀತೆಗಳನ್ನು ಕಂಠಪಾಠ ಮಾಡಿದ್ದಾನೆ.

ವಡೋದರಾ ಮೂಲದ ಅಥರ್ವ ಅಮಿತ್ ಮುಲೆ ಎಂಬಾತ, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬ್ರಿಟನ್ ಸೇರಿದಂತೆ 91 ದೇಶಗಳ ರಾಷ್ಟ್ರಗೀತೆಗಳನ್ನು ನಾನು ಕಂಠಪಾಠ ಮಾಡಿದ್ದೇನೆ ಎಂದು ಹೇಳಿದ್ದಾನೆ.

ಪ್ರಸ್ತುತ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿರುವ 18 ವರ್ಷದ ಅಥರ್ವ ಅಮಿತ್, “ನಾವು ವಾಸುದೈವ ಕುಟುಂಬಕಂ ಅನ್ನು ನಂಬಿದ್ದರಿಂದ, ಇತರೆ ದೇಶಗಳ ರಾಷ್ಟ್ರಗೀತೆಗಳನ್ನು ಸಹ ಕಂಠಪಾಠ ಮಾಡಬೇಕೆಂದು ನಾನು ಭಾವಿಸಿದೆ. ಇದಕ್ಕಾಗಿ ಹಲವು ದೇಶಗಳ ರಾಷ್ಟ್ರಗೀತೆಗಳನ್ನು ಕಲಿತೆ. ಕತಾರ್, ಸಿರಿಯಾ, ಥೈಲ್ಯಾಂಡ್, ಯೆಮೆನ್, ನ್ಯೂಜಿಲೆಂಡ್ ಸೇರಿದಂತೆ 69 ರಾಷ್ಟ್ರಗಳ ರಾಷ್ಟ್ರಗೀತೆಗಳನ್ನು ಪಠಿಸಲು ಸಾಧ್ಯವಾಗಿದ್ದಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತಮಗೆ ಮಾರ್ಚ್ 6, 2021 ರಂದು ಪ್ರಮಾಣಪತ್ರವನ್ನು ನೀಡಿತು. ಈಗ ಒಟ್ಟು 91 ರಾಷ್ಟ್ರಗೀತೆಗಳನ್ನು ಕಂಠಪಾಠ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

“ನನ್ನ ಕುಟುಂಬ ಸದಸ್ಯರು ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಾರೆ. ನನ್ನ ತಾಯಿ, ಅಜ್ಜಿಯರು ಮತ್ತು ತಾಯಿಯ ಸಹೋದರರು ವೃತ್ತಿಪರವಾಗಿ ಶಾಸ್ತ್ರೀಯ ಸಂಗೀತದಲ್ಲಿದ್ದಾರೆ. ನಾನು ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದೇನೆ ಮತ್ತು ವೀಣೆ ನುಡಿಸುತ್ತಿದ್ದೇನೆ. ಕುತೂಹಲದಿಂದ, ವಿವಿಧ ದೇಶಗಳ ಸಂಗೀತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾನು ರಾಷ್ಟ್ರಗೀತೆಗಳನ್ನು ಕಲಿಯಲು ಪ್ರಾರಂಭಿಸಿದೆ. ಆದ್ದರಿಂದ ಕ್ರಮೇಣ, ನಾನು ವಿವಿಧ ದೇಶಗಳ ರಾಷ್ಟ್ರಗೀತೆಗಳನ್ನು ಕಲಿತಿದ್ದೇನೆ “ಎಂದು ಅವರು ಹೇಳಿದರು.

@ @ @

ಮನುಷ್ಯರಂತೆ ಬಾಯುಳ್ಳ ಮೀನು!

ಮನುಷ್ಯರಂತೆ ಮೇಲ್ದವಡೆ, ಕೆಳದವಡೆ, ಸಾಲು ಹಳ್ಳುಗಳಿರುವ ಮೀನೊಂದು ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಮೀನುಗಾರ ನೊಬ್ಬನಿಗೆ ಸಿಕ್ಕಿದೆ.

ಈ ಅಪರೂಪದ ಮೀನನ್ನು ಶೀಪ್‌ ಶೆಡ್‌ ಫಿಶ್‌ ಎಂದು ಕರೆಯಲಾಗುತ್ತದೆ. ಮೀನಿನ ಮೂತಿ ಕುರಿಗಳ ಮೂತಿಯಂತೆಯೇ ಕಾಣುವುದರಿಂದಾಗಿ ಈ ಹೆಸರು ಬಂದಿದೆ. ಈ ಮೀನು ಸುಮಾರು 10-20 ಇಂಚು ಉದ್ದ ಬೆಳೆಯಬಲ್ಲದು.

ಮೀನಿನ ಫೋಟೊವನ್ನು ಜೆನೆಟ್‌ ಪಿಯರ್‌ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅದನ್ನು ಕೊಲ್ಲದೆ ನೀರಿಗೆ ವಾಪಸು ಬಿಡಿ ಎಂದು ಅನೇಕರು ಮನವಿ
ಮಾಡಿದ್ದರೆ, ಇದೊಂದು ಎಡಿಟೆಡ್‌ ಫೋಟೋ ಎಂದು ಕೆಲವರು ದೂರಿದ್ದಾರೆ.

@ @ @

ಮೂಗಿನಿಂದ ಟೈಪಿಂಗ್ ಮಾಡಿ 9 ಗಿನ್ನೆಸ್ ದಾಖಲೆ ನಿರ್ಮಿಸಿದ ಕಂಪ್ಯೂಟರ್ ಆಪರೇಟರ್ ವಿನೋದ್​ ಕುಮಾರ್​ ಚೌಧರಿ

ನವದೆಹಲಿ : ಆಧುನಿಕ ಯುಗದಲ್ಲಿ ಕಂಪ್ಯೂಟರ್ ಎಲ್ಲ ಕ್ಷೇತ್ರಗಳಿಗೆ ಕಾಲಿಟ್ಟಿದೆ. ಇದೀಗ ಇದೇ ಕಂಪ್ಯೂಟರ್ ನಲ್ಲಿ ಜವಾಹರ್ ​ಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ತಮ್ಮ ವಿನೂತನ ಕೌಶಲ್ಯದ ಮೂಲಕ 9 ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ಕೈಗಳಿಂದ ಟೈಪ್​ ಮಾಡುತ್ತಾರೆ. ಆದರೆ ಜವಾಹರ್ ​ಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿನೋದ್ ಕುಮಾರ್ ಚೌದರಿ ಅವರು ಮೂಗಿನ ಸಹಾಯದಿಂದ ಟೈಪಿಂಗ್​ ಮಾಡುತ್ತಾರೆ. ತಮ್ಮ ಈ ವಿನೂತನ ಶೈಲಿಯ ಟೈಪಿಂಗ್ ಮುಖಾಂತರವೇ ಅವರು ಬರೊಬ್ಬರಿ 9 ಗಿನ್ನೆಸ್ ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜವಹರ್​ಲಾಲ್​ ನೆಹರು ವಿಶ್ವ ವಿದ್ಯಾಲಯದಲ್ಲಿ ಕಂಪ್ಯೂಟರ್​ ಆಪರೇಟರ್​ ಆಗಿ ಕೆಲಸ ನಿರ್ವಹಿಸುತ್ತಿರುವ 41 ವರ್ಷದ ವಿನೋದ್​ ಕುಮಾರ್​ ಚೌಧರಿ 2014ರಲ್ಲಿ ಮೂಗಿನಲ್ಲಿ ಅತಿ ವೇಗದಲ್ಲಿ ಕಣ್ಮುಚ್ಚಿಕೊಂಡು ಟೈಪ್​ ಮಾಡಿ ಗಿನ್ನಿಸ್​ ದಾಖಲೆ ಸೃಷ್ಟಿಸಿದ್ದಾರೆ. ಅಲ್ಲದೆ ಬಾಯಿಯಲ್ಲಿ ಕೋಲು ಹಿಡಿದು ಟೈಪಿಂಗ್​ ಮಾಡುವುದು, ಕಣ್ಮುಚ್ಚಿಕೊಂಡು ಟೈಪಿಂಗ್​ ಮಾಡುವುದು ಜತೆಗೆ ವೇಗವಾಗಿ ಟೈಪಿಂಗ್​ ಮಾಡುವುದರ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಇದರ ಜತೆಗೆ ತನ್ನ ವಿಶಿಷ್ಟ ಕಲೆಯನ್ನು ಬಡ ಮಕ್ಕಳಿಗೆ ಹಾಗೂ ಅಂಗವಿಕಲ ಮಕ್ಕಳಿಗೆ ಮನೆಯಲ್ಲಿಯೇ ಪಾಠ ಮಾಡುತ್ತಿದ್ದಾರೆ. ತಮ್ಮ ಸಾಧನೆಯ ಮೂಲಕ ಗಿನ್ನಿಸ್​ ದಾಖಲೆ ಸೃಷ್ಟಿಸಿ ಜನಪ್ರಿಯತೆ ಪಡೆದಿದ್ದಾರೆ.

ತಮ್ಮ ವಿಶಿಷ್ಟ ಕೌಶಲ್ಯದ ಬಗ್ಗೆ ಮಾತನಾಡಿರುವ ವಿನೋದ್​ ಕುಮಾರ್​ ಚೌಧರಿ, ‘ಬಾಲ್ಯದಲ್ಲಿರುವಾಗ ನನಗೆ ಕ್ರೀಡೆಯ ಬಗ್ಗೆ ತುಂಬಾ ಆಸಕ್ತಿ ಇತ್ತು. ಆದರೆ ನಾನು ದೊಡ್ಡವನಾಗುತ್ತಿದ್ದಂತೆಯೇ ನನ್ನ ಆರೋಗ್ಯ ಸಮಸ್ಯೆಯಿಂದಾಗಿ ಕ್ರೀಡೆಗಳನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆ ಬಳಿಕ, 2014ರ ಸಮಯದಲ್ಲಿ ನನ್ನ ಮೂಗಿನ ಸಹಾಯದಿಂದ 46.30 ಸೆಕೆಂಡುಗಳಲ್ಲಿ 103 ಅಕ್ಷರಗಳನ್ನು ಟೈಪ್​ ಮಾಡುವ ಮೂಲಕ ಮೊದಲ ದಾಖಲೆಯನ್ನು ಸೃಷ್ಟಿಸಿದೆ. ಇದುವರೆಗೆ, ಟೈಪಿಂಗ್​ ಮಾಡಲು ತೆಗೆದುಕೊಂಡ ಕಡಿಮೆ ಸಮಯ ಇದಾಗಿತ್ತು. ಈ ಸಾಧನೆಯ ಸಾಕ್ಷಿಯಾಗಿ ಗಿನ್ನೆಸ್ ವಿಶ್ವದಾಖಲೆ ಪ್ರಮಾಣ ಪತ್ರವನ್ನು ಸ್ವೀಕರಿಸಿದೆ. ಇದು ನನ್ನ ಉತ್ಸುಕತೆಯನ್ನು ಹೆಚ್ಚಿಸಿತು. ಆ ಬಳಿಕ ಇನ್ನೂ ಹೆಚ್ಚಿನ ಅಭ್ಯಾಸವನ್ನು ಮಾಡಲು ಪ್ರಾರಂಭಿಸಿದೆ. 2016ರಲ್ಲಿ ನಾನು ಎರಡು ಹೊಸ ದಾಖಲೆಗಳನ್ನು ಮಾಡಿದೆ. 2016ರಲ್ಲಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು 6.09 ಸೆಕೆಂಡುಗಳಲ್ಲಿ ಎಲ್ಲಾ ವರ್ಣಾಕ್ಷರಗಳನ್ನು ಅತಿ ವೇಗದಲ್ಲಿ ಟೈಪ್ ಮಾಡಿ ದಾಖಲೆ ಬರೆದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಚೌಧರಿ, 2017 ರಲ್ಲಿ ಬಾಯಿಯಲ್ಲಿ ಕೋಲು ಹಿಡಿದು ಎಲ್ಲಾ ಅಕ್ಷರಗಳನ್ನು 18.65 ಸೆಕೆಂಡುಗಳಲ್ಲಿ ಟೈಪ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಇದೇ ಸಾಧನೆಯನ್ನು 17.69 ಸೆಕೆಂಡುಗಳಲ್ಲಿ ಮತ್ತು ನಂತರ 2019 ರಲ್ಲಿ 17.01 ಸೆಕೆಂಡುಗಳಲ್ಲಿ ಸಾಧಿಸುವ ಮೂಲಕ ಅವರು 2018 ರಲ್ಲಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2019 ರಲ್ಲಿ, ಚೌಧರಿ ಒಂದು ಬೆರಳಿನಿಂದ ವೇಗವಾಗಿ ಟೈಪ್ ಮಾಡಿ ಅಂದರೆ ಎಲ್ಲಾ ವರ್ಣಮಾಲೆಗಳನ್ನು ಕೇವಲ 29.53 ಸೆಕೆಂಡುಗಳಲ್ಲಿ ಟೈಪ್ ಮಾಡಿ ಗಿನ್ನೆಸ್ ಪುಸ್ತಕದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು.

ಸಚಿನ್ ಸ್ಪೂರ್ತಿ
ಅಂತೆಯೇ ಹಿರಿಯ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಅವರಂತೆ ಗಿನ್ನಿಸ್​ ಪುಸ್ತಕದಲ್ಲಿ 19 ದಾಖಲೆಗಳನ್ನು ಸೃಷ್ಟಿಸುವ ಆಸೆ ಹೊಂದಿದ್ದೇನೆ. ಇದಕ್ಕಾಗಿ ನಾನು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇನೆ ಮತ್ತು ಯಾವಾಗಲೂ ಅಭ್ಯಾಸದಲ್ಲಿ ತೊಡಗಿರುತ್ತೇನೆ. ಯಾವುದೇ ಮೂಲಸೌಕರ್ಯಗಳನ್ನು ಹೊಂದಿರದ ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ತರಬೇತಿಯನ್ನು ನೀಡುವ ಕಂಪ್ಯೂಟರ್​ ಸಂಸ್ಥೆಯನ್ನು ನಡೆಸಲು ನಾನು ಬಯಸುತ್ತೇನೆ. ಇದೀಗ ನನ್ನ ಆರ್ಥಿಕ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಅಭ್ಯಾಸ ಹೇಳಿಕೊಡುತ್ತಿದ್ದೇನೆ. ವಿದ್ಯಾರ್ಥಿಗಳು ಅಭ್ಯಾಸ ಮಾಡಬಹುದಾದ ಕೆಲವು ಕಂಪ್ಯೂಟರ್​ಗಳು ನನ್ನಲ್ಲಿವೆ ಎಂದು ದೆಹಲಿಯ ನಂಗ್ಲೋಯಿ ನಿವಾಸಿ ಚೌದರಿ ಹೇಳಿದ್ದಾರೆ.

ಟೆನ್ನಿಸ್ ಚೆಂಡಿನ ದಾಖಲೆ
ಅಂತೆಯೇ ವಿನೋದ್ ಕುಮಾರ್ ಚೌದರಿ ಮತ್ತೊಂದು ದಾಖಲೆ ಕೂಡ ನಿರ್ಮಿಸಿದ್ದು, ಅವರೇ ಹೇಳಿಕೊಂಡಿರುವಂತೆ ಒಂದು ನಿಮಿಷದೊಳಗೆ ಟೆನಿಸ್​ ಚೆಂಡನ್ನು 205 ಬಾರಿ ಮುಟ್ಟಿರುವ ಕುರಿತು ದಾಖಲೆ ನಿರ್ಮಾಣ ಮಾಡಿದ್ದಾರೆ. ಗಿನ್ನೆಸ್​ ಪುಸ್ತಕದಲ್ಲಿ ಇದು ಹೊಸ ದಾಖಲೆ ಎಂದು ಚೌದರಿ ಹೇಳಿದ್ದಾರೆ.

@@@@@@

ರಾಜಮನೆತನದ ಮದುವೆಗಿಂತ ಹೆಚ್ಚಾಗಿ ಈ ಬಿಸ್ಕತ್ತು ಸದ್ದು ಮಾಡಿತು…..

ಅದು 1874ನೆಯ ಇಸವಿ. ಬ್ರಿಟನ್ನಿನ ಜನತೆ ಅಲ್ಲಿಯ ರಾಜಮನೆತನದ ಅತ್ಯಂತ ಅದ್ಧೂರಿ ಮದುವೆಯೊಂದನ್ನು ಸಾಕ್ಷೀಕರಿಸುತ್ತಿತ್ತು. ವಿಕ್ಟೋರಿಯಾ ರಾಣಿಯ ದ್ವಿತೀಯ ಪುತ್ರ, ಎಡಿನ್‌ಬರೊದ ಡ್ಯೂಕ್‌ ಆಗಿದ್ದ ಆಲ್ಫ್ರೆಡ್, ರಷ್ಯಾದ ರಾಜಕುಮಾರಿ ಮಾರಿಯಾ ಅಲೆಕ್ಸಾಂಡ್ರೋವ್ನಾ ಅವರನ್ನು ವರಿಸಿದ ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ವಿಶ್ವದ ಎಲ್ಲೆಡೆಯಿಂದ ಅತಿಗಣ್ಯರು ಅಲ್ಲಿ ನೆರೆದಿದ್ದರು. ರಾಜಮನೆತನದ ಮದುವೆಯೆಂದರೆ ಕೇಳಬೇಕೇ? ಒಂದರ್ಥದಲ್ಲಿ ರಾಷ್ಟ್ರೀಯ ಉತ್ಸವದಂತಿದ್ದ ಮದುವೆಗೆ ನವವಧುವನ್ನು ಸ್ವಾಗತಿಸಲು ರಸ್ತೆಗಳಿಗೆಲ್ಲ ಸುಣ್ಣಬಣ್ಣ ಬಳಿಯಲಾಗಿತ್ತು. ಜನ ತಮ್ಮ ಮನೆಯಲ್ಲಿ ಸಿಹಿತಿಂಡಿಗಳನ್ನು ಮಾಡಿ ಸಂಭ್ರಮಿಸುತ್ತಿದ್ದರು.

ಲಂಡನ್ನಿನ ಪೀಕ್ ಫ್ರಿಯಾನ್ಸ್‌ ಎಂಬ ಬೇಕರಿಯ ಮುಖ್ಯ ಶೆಫ್ ಒಬ್ಬ ವಿಶೇಷ ಬಿಸ್ಕತ್ತೊಂದನ್ನು ತಯಾರಿಸಿದ. ಗೋಧಿಹಿಟ್ಟು, ಸ್ವಲ್ಪ ಸಕ್ಕರೆಯ ಪಾಕ, ತುಸು ವೆನಿಲಾ ಸೇರಿಸಿ ತಯಾರಿಸಲಾದ ಆ ಬಿಸ್ಕತ್ತು ಸಾಂಪ್ರದಾಯಿಕ ಬಿಸ್ಕತ್ತಿನಂತಿರದೇ ಚಪ್ಪಟೆಯಾಗಿ ಗೋಳಾಕಾರದಲ್ಲಿದ್ದು ತನ್ನ ಪರಿಧಿಯಾದ್ಯಂತ ಗಡಿಯಾರದ ಸೆಕೆಂಡಿನ ಗುರುತುಗಳಂತೆಯೇ ಸಣ್ಣ ಪಟ್ಟಿಗಳನ್ನು ಹೊಂದಿತ್ತು. ಮಧ್ಯ ಮೇಲ್ಮೈಯಲ್ಲಿ ತೂತುಗಳಿದ್ದು ಮಧ್ಯಭಾಗದಲ್ಲಿ ಮಾರಿಯಾ ಎಂದು ವಧುವಿನ ಹೆಸರನ್ನು ಕೆತ್ತಿ ಈ ಬಿಸ್ಕತ್ತನ್ನು ರೂಪಿಸಲಾಗಿತ್ತು. ಬೇಕರಿಯವರು ರಾಜಮನೆತನದವರಿಗೂ ಈ ಬಿಸ್ಕತ್ತುಗಳನ್ನು ಉಡುಗೊರೆಯಾಗಿ ಸಮರ್ಪಿಸಿದರು.

ಬ್ರಿಟನ್ನಿನ ರಾಜಮನೆತನದ ಅತ್ಯಂತ ಚಿರಸ್ಮರಣೀಯ ಗಳಿಗೆಯೊಂದರ ಸ್ಮರಣಿಕೆಯೆಂದು ಬಿಂಬಿಸಲ್ಪಟ್ಟ ಆ ಬಿಸ್ಕತ್ತು, ಇದೇ ಕಾರಣಕ್ಕೆ ದೇಶದಾದ್ಯಂತ ಹವಾ ಎಬ್ಬಿಸಿತು. ರಾಜಮನೆತನದ ಮದುವೆಗಿಂತ ಹೆಚ್ಚಾಗಿ ಈ ಬಿಸ್ಕತ್ತು ಸದ್ದು ಮಾಡಿತು. ಒಳ್ಳೆಯ ಮಾರ್ಕೆಟಿಂಗ್ ತಂತ್ರವನ್ನು ಬಳಸಿ ಚಾಣಾಕ್ಷತೆಯನ್ನು ಮೆರೆದ ಪೀಕ್ ಫ್ರಿಯಾನ್ಸ್‌ ಬೇಕರಿ ಯಶ ಸಾಧಿಸಿತ್ತು. ಕುತೂಹಲಕ್ಕಾಗಿ ಬೇಕರಿಗೆ ಭೇಟಿ ನೀಡಿ ಮಾರಿಯಾ ಬಿಸ್ಕತ್ತನ್ನು ಸವಿದ ಜನ ಮತ್ತೆ ಮತ್ತೆ ಬರತೊಡಗಿದರು. ದಿನದಿಂದ ದಿನಕ್ಕೆ ಈ ಬಿಸ್ಕತ್ತು ಜನಪ್ರಿಯವಾಗುವುದನ್ನು ಗಮನಿಸಿದ ಬ್ರಿಟನ್ನಿನ ದೊಡ್ಡ ಬಿಸ್ಕತ್ತು ತಯಾರಕ ಕಂಪನಿಗಳು ಈ ವಿನ್ಯಾಸವನ್ನು ಕಾಪಿ ಹೊಡೆದು ತಮ್ಮ ಕಂಪನಿಯ ಬ್ರ್ಯಾಂಡ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸನ್ನು ಪಡೆದವು. ಹೀಗೆ ನಕಲಿಸುವಾಗ ಮಾರಿಯಾ ಎಂಬ ಹೆಸರು ಕೊಂಚ ಮಾರ್ಪಾಡುಗೊಂಡು ಮಾರಿ ಎಂದಾಯಿತು.

ವಿಷಯ ಅಷ್ಟಕ್ಕೇ ನಿಲ್ಲಲಿಲ್ಲ. ಬ್ರಿಟನ್ನಿನ ಬಿಸ್ಕತ್ತು ತಯಾರಕರು ಈ ಮಾರಿ ಬಿಸ್ಕತ್ತನ್ನು ಹೊರ ದೇಶಗಳಿಗೆ ರಫ್ತು ಮಾಡಲೂ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾದರು. ಆದರೆ, ಈ ಬಿಸ್ಕತ್ತುಗಳು ತೆಳುವಾಗಿದ್ದು ಹೆಚ್ಚು ಒಣಗಿರುವುದರಿಂದ ಸಾಗಾಣಿಕೆಯಲ್ಲಿ ಚೂರಾಗುವ ಮತ್ತು ಹೊರಗಿನ ವಾತಾವರಣದ ತೇವಾಂಶದ ಸಂಪರ್ಕಕ್ಕೆ ಬಂದರೆ ತನ್ನ ಕುರುಕಲುತನವನ್ನು ಕಳೆದುಕೊಳ್ಳುವ ಅಪಾಯವಿತ್ತು. ಆ ಕಾರಣಕ್ಕೆ ಅವುಗಳಿಗಾಗಿಯೇ ವಿಶೇಷ ಗಾಳಿಯಾಡದ ಡಬ್ಬಗಳನ್ನು ತಯಾರಿಸಿ ಹಡಗು ಮತ್ತು ರೈಲಿನ ಮೂಲಕ ರಫ್ತು ಮಾಡಲಾಯಿತು.

ಹೀಗೆ ವಿದೇಶಗಳಿಗೆ ರಫ್ತುಗೊಂಡ ಮಾರಿ ಬಿಸ್ಕತ್ತುಗಳು ಅಲ್ಲಿಯೂ ಜನಪ್ರಿಯತೆ ಗಳಿಸಿ ಸ್ಥಳೀಯವಾಗಿ ತಯಾರಾಗತೊಡಗಿದವು. ಕಾಲಕ್ರಮೇಣ ದೇಶದಿಂದ ದೇಶಕ್ಕೆ ತನ್ನ ರುಚಿಯ ಜಾದೂ ಮಾಡುತ್ತ, ಸ್ಥಳೀಯ ಬಿಸ್ಕತ್ತು ತಯಾರಕರ ವ್ಯಾಪಾರ ವಹಿವಾಟನ್ನು ಹೆಚ್ಚಿಸಿದ ಜಗತ್ತಿನ ಅತ್ಯಂತ ಜನಪ್ರಿಯ ಬಿಸ್ಕತ್ತುಗಳ ವಿಧಗಳಲ್ಲೊಂದೆಂಬ ಖ್ಯಾತಿಗಳಿಸಿತು.

ಮಾರಿ ಬಿಸ್ಕತ್ತುಗಳ ಜನಪ್ರಿಯತೆಯ ಹಿಂದೆ ಹಲವು ಕಾರಣಗಳಿವೆ. ಈ ಬಿಸ್ಕತ್ತು ಪರಿಚಯವಾದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಎರಡು ತರಹದ ಬಿಸ್ಕತ್ತುಗಳು ತಯಾರಾಗುತ್ತಿದ್ದವು. ಒಂದೆರಡು ದಿನಗಳಲ್ಲಿಯೇ ಕೆಡುವ, ಬೇಕರಿಯಲ್ಲಿ ದೊರಕುವ ಬಿಸ್ಕತ್ತುಗಳು ಒಂದೆಡೆಯಾದರೆ, ಎರಡನೆಯವು ಹಡಗುಗಳಲ್ಲಿ ಬಳಕೆಯಾಗುವಂಥವುಗಳು. ಈ ಎರಡನೆಯ ವಿಧದ ಬಿಸ್ಕತ್ತುಗಳು ಹಡಗುಗಳಲ್ಲಿ ದೂರ ಪಯಣಕ್ಕೆ ಸಾಗುವ ಕಾರ್ಮಿಕರಿಗಾಗಿಯೇ ತಯಾರಿಸಲ್ಪಡುತ್ತಿದ್ದು ರುಚಿಯಲ್ಲಿ ಸಪ್ಪೆಯಾಗಿರುತ್ತಿದ್ದವು. ಸಂಗ್ರಹಣೆಯ ಅನುಕೂಲ ಮತ್ತು ಕಡಿಮೆ ವೆಚ್ಚದ ದೃಷ್ಟಿಯಿಂದಷ್ಟೇ ತಯಾರಿಸಲ್ಪಡುತ್ತಿದ್ದ ಇವುಗಳಿಗೆ ಹೊರಗಡೆ ಮಾರುಕಟ್ಟೆಯಲ್ಲಿ ಬೇಡಿಕೆ ಇರಲಿಲ್ಲ.

ಅದು ಔದ್ಯೋಗಿಕ ಕ್ರಾಂತಿಯ ಸಮಯ. ಜನರ ಕೆಲಸ ಮಾಡುವ ಸಮಯ ಬದಲಾಗಿ ಕೆಲಸದ ಮಧ್ಯೆ ಚಹಾ ವಿರಾಮ ತೆಗೆದುಕೊಳ್ಳುವ ಹೊಸ ಪ್ರವೃತ್ತಿ ಹುಟ್ಟಿಕೊಂಡಿತು. ಈ ಚಹಾದ ಜೊತೆಗೆ ಕುರುಕಲು ತಿಂಡಿಗಳನ್ನು ತಿನ್ನುವ ಹೊಸ ಹವ್ಯಾಸ ಕೂಡ ಜನಪ್ರಿಯವಾಗುತ್ತ ಬಂದು, ಕುರುಕಲುಗಳ ತಿಂಡಿಗಳ ಪಟ್ಟಿಯಲ್ಲಿ ಬಿಸ್ಕತ್ತು ಮುಂಚೂಣಿಯಲ್ಲಿತ್ತು. ಈ ಸಮಯದಲ್ಲಿ ರಾಣಿಯ ಮದುವೆಗೆಂದು ತಯಾರಾದ ವಿಶೇಷ ಬಿಸ್ಕತ್ತೆನ್ನುವ ಹಣೆಪಟ್ಟಿ ಹೊತ್ತುಕೊಂಡು ಬಂದ ಈ ಮಾರಿ ಜನರ ಗಮನ ಸೆಳೆಯಿತು. ಇನ್ನು ಗೋಧಿಯನ್ನು ಹೆಚ್ಚು ಬೆಳೆದು ಅದನ್ನು ರಫ್ತುಮಾಡಲು ಪರದಾಡುತ್ತಿದ್ದ ಸ್ಪೇನ್‌ನಂತಹ ದೇಶಗಳಿಗೆ ಗೋಧಿ ಹಿಟ್ಟನ್ನೇ ಪ್ರಮುಖವಾಗಿ ಬಳಸಿ ತಯಾರಾಗುವ ಈ ಬಿಸ್ಕತ್ತು, ಗೋಧಿಯನ್ನು ಹೊಸರೂಪದಲ್ಲಿ ಸ್ಥಳೀಯ ಬಳಸುವ ಜೊತೆಜೊತೆಗೆ ರಫ್ತನ್ನೂ ಮಾಡಲು ಹೊಸ ದಾರಿ ತೋರಿತು.

ಕಡಿಮೆ ಪ್ರಮಾಣದ ಸಕ್ಕರೆಯ ಅಂಶದ ಕಾರಣಕ್ಕೆ ಡಯಟ್ ಬಗ್ಗೆ ಹೆಚ್ಚು ಯೋಚಿಸುವ ಜನರಿಗೆ ಹೆಚ್ಚು ಆಪ್ತವಾಗಿರುವ ಈ ಮಾರಿ ಬಿಸ್ಕತ್ತುಗಳನ್ನು ಕೆಲವೆಡೆ ಚೀಸ್, ಕ್ರೀಮ್‌ಗಳ ಫಿಲ್ಲಿಂಗ್ಸ್‌ ಬಳಸಿಯೂ ಸೇವಿಸುವುದುಂಟು. ಮಾರಿ ಬಿಸ್ಕತ್ತಿನ ಹಿಟ್ಟನ್ನು ಬಳಸಿ ಫುಡ್ಡಿಂಗನ್ನೂ ತಯಾರಿಸಲಾಗುತ್ತದೆ.

ವಿಪರ್ಯಾಸವೆಂದರೆ ಜಗತ್ತಿನಾದ್ಯಂತ ಬಿಸ್ಕತ್ತು ಪ್ರೇಮಿಗಳಿಗೆ ಅವರ ಅರಿವಿಲ್ಲದಂತೆಯೇ ತನ್ನ ಹೆಸರಿನ ಬಲದಿಂದಲೇ ಖ್ಯಾತಿಗಳಿಸಿ ಹೊಟ್ಟೆ ಪೂಜೆಯ ಸಾಧನವಾಗಿರುವ ಈ ಬಿಸ್ಕತ್ತಿನ ಮೂಲ ಮಹಿಳೆ ಮಾರಿಯಾ ಅಲೆಕ್ಸಾಂಡ್ರೋವ್ನಾ ಜೀವನ ಮಾತ್ರ ಅಷ್ಟೇನೂ ಸಿಹಿಯಾಗಿರಲಿಲ್ಲ. ರಷ್ಯಾದ ಕ್ರಾಂತಿಯಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆಕೆ ನಂತರ ಮೊದಲ ವಿಶ್ವಯುದ್ಧದಲ್ಲಿ ತನ್ನ ಗಂಡ ಅರಸೊತ್ತಿಗೆಯನ್ನೂ ಕಳೆದುಕೊಳ್ಳುವ ದುರಂತಕ್ಕೆ ಸಾಕ್ಷಿಯಾದಳು. ತನ್ನ ಕೊನೆಯ ದಿನಗಳನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಹೆಚ್ಚುಕಡಿಮೆ ಒಂಟಿಯಾಗಿಯೇ ಕಳೆದು 1920ರಲ್ಲಿ ಸಾವನ್ನಪ್ಪಿದಾಗ ಅದು ಎಲ್ಲೂ ಸುದ್ದಿಯಾಗಲೇ ಇಲ್ಲ.

@@@@@

ಎಲ್ಲಿ ಹೋದರು ಸುಡುಗಾಡು ಸಿದ್ಧರು?

‘ಜ … ಜ… ಜ… ಗಾಳಿ ವಿದ್ಯ, ಬಯಲು ವಿದ್ಯ, ಲೋಕದ ವಿದ್ಯ. ವಿದ್ಯ ಅಂದ್ರ ಚಮತ್ಕಾರ. ಅದು ಭಾಳ ದೊಡ್ಡದಿರತೈತಿ. ಇಲ್ಲೊಂದ್ ಬೀಜ ಐತ್ರಿ. ಈ ಬೀಜಕ್ಕ ಮೂರ ಮಂತ್ರ-ಮೂರು ತಂತ್ರ. ಹ್ಞೂತ್… ಹರ ಹರ ಹರ ಹರ…’

ಮಂತ್ರದ ರೀತಿಯಲ್ಲಿ ಈ ಸಾಲುಗಳು ಕಿವಿಯ ಮೇಲೆ ಬಿದ್ದವು. ಇದೇನಪ್ಪ ಹೊಸ ಮಂತ್ರ, ಏನಿದರ ಮಜಕೂರು ಎನ್ನುತ್ತಾ ಆ ಧ್ವನಿ ಕೇಳಿಬರುತ್ತಿದ್ದ ಗುಂಪಿನ ಕಡೆಗೆ ಹೆಜ್ಜೆ ಹಾಕಿದೆ. ದಾರಿ ಪಕ್ಕದ ಮರದ ಅಡಿಯಲ್ಲಿ ಏನೋ ಗಡಿಬಿಡಿ ನಡೆದಿತ್ತು. ಮಕ್ಕಳು ಹಾಗೂ ಮಹಿಳೆಯರ ಗುಂಪುಗೂಡಿತ್ತು. ಆ ಗುಂಪಿನೊಳಗಿನಿಂದ ಚಿಂವ್‌ ಎನ್ನುವ ಸದ್ದು. ಥರಾವರಿ ಮಂತ್ರಗಳ ಉಚ್ಚಾರ. ಮರುಕ್ಷಣವೇ ನಗೆಯ ಅಲೆ. ಏನಿದರ ಮಜಕೂರು ಎಂದು ಕುತೂಹಲ. ಗುಂಪಿನ ಮಧ್ಯೆ ವ್ಯಕ್ತಿಯೊಬ್ಬರು ಒಂದು ಗಂಟಿನ ಚೀಲದೊಂದಿಗೆ ವಿರಾಜಮಾನರಾಗಿದ್ದರು. ಮಂತ್ರ ಪಠಣ ಮಾಡುತ್ತಿದ್ದುದು ಅವರೇ. ‘ಈ ಬೀಜಕ್ಕ ಮೂರ ಮಂತ್ರ-ಮೂರು ತಂತ್ರ. ಹ್ಞೂತ್… ಹರ ಹರ ಹರ ಹರ…’ ಎನ್ನುತ್ತಲೇ ಆ ಬೀಜವನ್ನು ಬಾಯಲ್ಲಿಟ್ಟುಕೊಂಡು ಬಸವಣ್ಣನ ಚಿಕ್ಕ ಮೂರ್ತಿಯನ್ನು ಹೊರತೆಗೆದುಬಿಟ್ಟರು. ನೆರೆದವರೆಲ್ಲ ಅವಾಕ್ಕಾಗಿ ನೋಡುತ್ತಿದ್ದರು.

ಹ್ಞೂತ್… ಹರ ಹರ ಹರ ಹರ… ನೋಡ್ರಿ ಗಣಪ

ಆ ವ್ಯಕ್ತಿ ಮುಖಕ್ಕೆ ಕುಂಕುಮ ಮತ್ತು ವಿಭೂತಿ ಬಳಿದುಕೊಂಡಿದ್ದರು. ಲಿಂಗದಕಾಯಿ, ರುದ್ರಾಕ್ಷಿ ಮಾಲೆ ಕೊರಳು ತುಂಬಿದ್ದವು. ತಲೆಗೆ ಸುತ್ತಿರುವ ರುಮಾಲಿಗೆ ಮುತ್ತಿನ ಮಣಿಗಳ ಹಾರದಿಂದ ಸಿಂಗಾರ, ತುದಿಯಲ್ಲಿ ನವಿಲುಗರಿಗಳ ಅಲಂಕಾರ ಸಹ ಇತ್ತು. ಅಲ್ಲದೆ, ಬಣ್ಣದ ಬಟ್ಟೆಗಳಿಂದ ಮಾಡಿದ ಪೋಷಾಕು ಧರಿಸಿದ್ದ ಅವರು ಆಕರ್ಷಕವಾಗಿ ಕಾಣುತ್ತಿದ್ದರು. ತಮ್ಮದೇ ಆದ ಶೈಲಿಯಲ್ಲಿ ಮಾತನಾಡುತ್ತ, ಚಮತ್ಕಾರಗಳನ್ನು ಮಾಡುತ್ತ ಗುಂಪಿನ ಕೇಂದ್ರಬಿಂದುವಾಗಿದ್ದರು.

ತಮ್ಮ ಕೈಚಳಕದಿಂದ ಒಂದಾದ ಮೇಲೊಂದರಂತೆ ಲಾಡು ಗಾತ್ರದ ಸುಮಾರು 10 ಕಲ್ಲುಗಳನ್ನು ನುಂಗಿ, ನಮ್ಮೊಂದಿಗೆ ಮಾತನಾಡುತ್ತಲೇ ಅದೇ ಕಲ್ಲುಗಳನ್ನು ಒಂದೊಂದಾಗಿ ಗಂಟಲಿನಿಂದ ಹೊರತೆಗೆದು ಎಲ್ಲರನ್ನು ಚಕಿತಗೊಳಿಸಿದರು. ತೆಂಗಿನ ಕಾಯಿ (ಗಿಟಗ) ದಾರದ ಅಂತರದಲ್ಲಿ ಅವರು ಹೇಳಿದಂತೆಯೇ ಸಂಚರಿಸುತ್ತಿತ್ತು. ಜೋಳಿಗೆಯಿಂದ ಆಗಾಗ ವಿಧವಿಧ ಗೊಂಬೆಗಳನ್ನು ಹೊರತೆಗೆದು ಚಿಕ್ಕ ಮಕ್ಕಳನ್ನು ಆಕರ್ಷಿಸುತ್ತಿದ್ದರು. ಹಾವು, ಚೇಳು, ಕಪ್ಪೆಗಳನ್ನು ತೆಗೆದು ಭಯಭೀತಗೊಳಿಸುತ್ತಿದ್ದರು. ಆಗಾಗ ನಗೆ ಚಟಾಕಿ ಸಿಡಿಸಿ ಹೊಟ್ಟೆ ಹುಣ್ಣಾಗುವಂತೆ ಜನರನ್ನು ನಗಿಸುತ್ತಿದ್ದರು. ಅವರ ಮೋಡಿ ಆಟಕ್ಕೆ ಮನಸೋತ ಮಕ್ಕಳು ಚಪ್ಪಾಳೆ ಬಾರಿಸಿ ಸಂಭ್ರಮಿಸುತ್ತಿದ್ದರು.

ಎಷ್ಟು ನೋಡಿದರೂ ಸಾಲದು, ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ಚಮತ್ಕಾರವನ್ನು ಪ್ರದರ್ಶಿಸುವವರು ಬೇರಾರೂ ಅಲ್ಲ; ‘ಸುಡುಗಾಡು ಸಿದ್ಧರು’. ಅವರ ಮಾತು, ಚಮತ್ಕಾರ ಕೂಡ ಅವರ ವೇಷಭೂಷಣಗಳಷ್ಟೇ ಆಕರ್ಷಕವಾಗಿರುತ್ತವೆ. 15ರಿಂದ 20 ನಿಮಿಷಗಳ ಕಾಲ ನಡೆಯುವ ಈ ಚಮತ್ಕಾರವನ್ನು ಒಮ್ಮೆ ನೋಡಿದರೆ ಸಾಕು, ಅದು ಜೀವನದುದ್ದಕ್ಕೂ ನೆನಪಿನಲ್ಲಿ ಉಳಿದುಬಿಡುತ್ತದೆ. ಹಿಂದೆ ರಾಜ ಮಹಾರಾಜರೂ ಇವರನ್ನು ಆಸ್ಥಾನಕ್ಕೆ ಕರೆಸಿ, ಇವರ ಚಮತ್ಕಾರಗಳನ್ನು ವೀಕ್ಷಿಸುತ್ತಿದ್ದರು ಎನ್ನುವ ಮಾತಿದೆ.

ಇಂತಹ ಆಕರ್ಷಕ, ಐತಿಹಾಸಿಕ, ಜನಪದ ಸೊಗಡಿನ ‘ಸುಡುಗಾಡು ಸಿದ್ಧರ ಆಟ’ ಇಂದು ಕ್ಷೀಣಿಸುತ್ತಿದೆ. ಇದನ್ನು ಪ್ರದರ್ಶಿಸುವವರ ಸಂಖ್ಯೆ ನಾಡಿನಾದ್ಯಂತ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಯುತ್ತಿದೆ. ಇಂದಿನ ಪೀಳಿಗೆಯ ನಿರಾಸಕ್ತಿಯಿಂದಾಗಿ ಅಪರೂಪದ ಈ ಸಾಂಪ್ರದಾಯಿಕ ಆಟ ಅವನತಿಯತ್ತ ಸಾಗುತ್ತಿದೆ. ಹೀಗೇ ಆದಲ್ಲಿ ಕೆಲ ವರ್ಷಗಳಲ್ಲಿಯೇ ‘ಸುಡುಗಾಡು ಸಿದ್ಧರ ಆಟ’ ಇತಿಹಾಸದ ಪುಟ ಸೇರುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಸಿದ್ಧರು ಹೇಳಿದಂತೆ ಮಾತು ಕೇಳುವ ಒಣಕೊಬ್ಬರಿ

ಪರಿಶಿಷ್ಟ ಜಾತಿಗೆ ಸೇರುವ ಸುಡುಗಾಡು ಸಿದ್ಧರ 53 ಕುಟುಂಬಗಳು ಪ್ರಸ್ತುತ ಕೊಪ್ಪಳದ ಕಲಕೇರಿ ಗ್ರಾಮದಲ್ಲಿವೆ. ತಾಲ್ಲೂಕಿನಲ್ಲಿರುವ ಸುಡುಗಾಡು ಸಿದ್ಧರ ಒಟ್ಟು ಕುಟುಂಬಗಳ ಸಂಖ್ಯೆಯೂ ಇದೇ ಆಗಿದೆ. ಆದರೆ, ಅದರಲ್ಲಿ ಗುರಪ್ಪ ಗಂಟಿ, ಯಲ್ಲಪ್ಪ ಗಂಟಿ, ಚಂದ್ರಪ್ಪ ಒಂಟೆತ್ತಿನವರ, ರಾಮಣ್ಣ ಗಂಟಿ, ಹುಲುಗಪ್ಪ ಗಂಟಿ, ಸಾಬಣ್ಣ ಒಂಟೆತ್ತಿನವರ ಮತ್ತು ಹನುಮಂತ ಗಂಟಿ ಎಂಬುವವರ ಕುಟುಂಬಗಳು ಮಾತ್ರ ಈ ವೃತ್ತಿಯಲ್ಲಿ ತೊಡಗಿವೆ. ಉಳಿದವರು ಬೇರೆ ಬೇರೆ ವೃತ್ತಿಗಳನ್ನು ಆಯ್ದುಕೊಂಡುಬಿಟ್ಟಿದ್ದಾರೆ. ಕೆಲವರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿದ್ದಾರೆ. ಈ ಸಮುದಾಯದ ರುದ್ರೇಶ್ ಎನ್ನುವವರು ಈಗ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯ 50 ಜನ ಮಾತ್ರ ಈ ವೃತ್ತಿ ನಡೆಸುತ್ತಿದ್ದಾರೆ.

ಸುಡುಗಾಡು ಕಾಯುವುದು ಈ ಸಮುದಾಯದ ಮೂಲ ವೃತ್ತಿ. ಕೆಟ್ಟ ಗಳಿಗೆಗಳಲ್ಲಿ ಇವರು ಇಡೀ ಊರಿಗೆ ದಿಗ್ಬಂಧನ ಹಾಕಿ ಜನರನ್ನು ರಕ್ಷಿಸುತ್ತಿದ್ದರು ಎಂದೂ ಹೇಳಲಾಗುತ್ತದೆ. ಊರಲ್ಲಿ ಯಾವುದೇ ಸಮುದಾಯದ ವ್ಯಕ್ತಿ ಮರಣ ಹೊಂದಿದರೂ ಇವರಿಗೆ ಕಾಣಿಕೆ ನೀಡಿಯೇ ಮುಂದಿನ ವಿಧಿವಿಧಾನಗಳನ್ನು ನೇರವೇರಿಸುವ ಪದ್ಧತಿ ಈಗಲೂ ಇದೆ. ಹೆಣ ಹೂಳಲು ತೋಡಿದ ಗುಂಡಿಯಲ್ಲಿ ಇವರು ಕುಳಿತು ಹೊರಬಂದ ನಂತರವೇ ಅದರಲ್ಲಿ ಶವ ಇಡುತ್ತಾರೆ. ಈ ಸಮುದಾಯದ ಕೆಲ ಜನ ಕಾವಿ ಬಟ್ಟೆಯನ್ನು ಧರಿಸುತ್ತಾರೆ.

ಅಳಿವಿನ ಅಂಚಿನಲ್ಲಿರುವ ಈ ಸಮುದಾಯದ ಕಲೆಯನ್ನು ಉಳಿಸುವ ಸಲುವಾಗಿ ಕೆಲ ವರ್ಷಗಳ ಹಿಂದೆ ಜಾತ್ರೆ, ಉತ್ಸವಗಳಿಗೆ ಕರೆದು ಪ್ರದರ್ಶನ ಕೊಡಿಸಲಾಗುತ್ತಿತ್ತು. ಕೆಲ ಶಾಲೆಗಳಲ್ಲೂ ಇವರ ಪ್ರದರ್ಶನ ನಡೆಯುತ್ತಿತ್ತು. ಆದರೆ ಪ್ರಸ್ತುತ ಕೋವಿಡ್ ಕಾರಣದಿಂದ ಯಾವ ಜಾತ್ರೆಯೂ ಇಲ್ಲ, ಯಾವ ಉತ್ಸವವೂ ಇಲ್ಲ. ಶಾಲೆಗಳು ಬಾಗಿಲು ಹಾಕಿಯೇ ವರ್ಷ ಕಳೆದಿದೆ. ಇಂತಹ ಸಂದರ್ಭದಲ್ಲಿ ಈ ಸಮುದಾಯ ಹೆಚ್ಚೇ ಪರಿತಪಿಸಿದೆ.

ತಲೆಯಿಂದ ತಲೆಗೆ ಸಾಗಿ ಬಂದಿರುವ ‘ಸುಡುಗಾಡು ಸಿದ್ಧರ ಆಟ’ವನ್ನು ಅವರದೇ ಸಮುದಾಯದ ಇಂದಿನ ಯುವಜನರು ಯಾಕೋ ಕಡೆಗಣಿಸಿದ್ದಾರೆ. ಈ ವಿದ್ಯೆ ಕಲಿಯಲು ಸಾಕಷ್ಟು ಏಕಾಗ್ರತೆ, ಶ್ರಮ ಬೇಕು. ಇದು ಪುಸ್ತಕದಲ್ಲಿ ನೋಡಿ ಕಲಿಯುವ ವಿದ್ಯೆ ಅಲ್ಲ. ಕಲಿಯುವೆನೆಂದು ಮುಂದೆ ಬರುವ ಅಲ್ಲೊಬ್ಬ, ಇಲ್ಲೊಬ್ಬ ಯುವಕರು ಕೆಲ ದಿನಗಳಲ್ಲೇ ಪಲಾಯನ ಮಾಡಿಬಿಡುತ್ತಿದ್ದಾರೆ ಎನ್ನುವುದು ಈ ಕಲೆಯನ್ನು ದಾಟಿಸಲು ಕಾಯುತ್ತಿರುವ ಹಿರಿಯ ಜೀವಗಳ ಅಳಲು. ತಮ್ಮ ಈ ವಿದ್ಯೆಯನ್ನು ಮರೆಯಾಗದಂತೆ ಕಾಪಿಡಲು ಸರ್ಕಾರದಿಂದ ಏನಾದರೂ ನೆರವಿನಹಸ್ತ ಸಿಕ್ಕೀತೇ ಎನ್ನುವ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ.

@@@@@

ಲಾಕ್ಡೌನ್ ಸಮಯ ಸದ್ಭಳಕೆ: 61 ಕವಿತೆಗಳ ಪುಸ್ತಕ ಬರೆದು ‘ಅತಿ ಕಿರಿಯ ಕವಯಿತ್ರಿ’ ಎಂಬ ಹೆಗ್ಗಳಿಕೆ ಪಡೆದ ವಿದ್ಯಾರ್ಥಿನಿ ಅಮಾನಾ!

ಬೆಂಗಳೂರು: ಸಾಂಕ್ರಾಮಿಕ ರೋಗದಿಂದಾಗಿ ಆರಂಭವಾದ ಲಾಕ್ಡೌನ್ ಅವಧಿ ಸಾಕಷ್ಟು ಮಕ್ಕಳಿಗೆ ತಮ್ಮ ಸೃಜನಶೀಲ ಕೌಶಲ್ಯಗಳ ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ನೀಡಿದೆ. ಇದೇ ರೀತಿ ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಅಮಾನಾ ಕೂಡ ಈ ಅವಧಿಯನ್ನು ಸದ್ಭಳಕೆ ಮಾಡಿಕೊಂಡಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಅತ್ಯಂತ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಕವಿತೆಗಳನ್ನು ಬರೆದಿರುವುದಕ್ಕೆ – ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ‘ಗ್ರ್ಯಾಂಡ್ ಮಾಸ್ಟರ್’ ಎಂದು ದಾಖಲೆಗೆ ಸೇರ್ಪಡೆಗೊಂಡಿದ್ದಾಳೆ. ವಿದ್ಯಾರ್ಥಿನಿ ಅಮಾನಾ ತನ್ನ ಪದಗಳನ್ನು ಪದ್ಯಗಳನ್ನಾಗಿ ಹೇಳುವ ಸೃಜನಶೀಲತೆಯನ್ನು ಹೊಂದಿದ್ದಾಳೆ. ಈಕೆಯ ಈ ಪ್ರತಿಭೆಯನ್ನು 6ನೇ ತರಗತಿಯಲ್ಲಿ ಆಕೆಯ ಶಿಕ್ಷಕರು ಗುರುತಿಸಿದ್ದರು. ಬಳಿಕ ಹಲವಾರು ವಿಷಯಗಳನ್ನು ನೀಡಿ ಕವನಗಳನ್ನು ಬರೆಯಲು ಅವಕಾಶ ನೀಡುತ್ತಿದ್ದರು.

2020ರ ಏಪ್ರಿಲ್ ತಿಂಗಳಿನಲ್ಲಿ ಮಾಡಲಾದ ಲಾಕ್ಡೌನ್ ಸಮಯ ಬಹಳ ಬೇಸರ ತರಿಸಿತ್ತು. ಈ ವೇಳೆ ಕೋವಿಡ್-19 ಬಗ್ಗೆಯೇ ಕವಿತೆಗಳ ಬರೆಯಲು ಆರಂಭಿಸಿದ್ದೆ. ಜನರ ನೋವು, ಅವರ ಆಕ್ರಂದನಗಳನ್ನು ನಾನು ನೋಡಿದ್ದೆ. ಇದು ಭಯ ಹುಟ್ಟಿಸಿತ್ತು. ಋಣಾತ್ಮಕತೆಯನ್ನು ತೊಡೆದುಹಾಕಲು ಮತ್ತು ಓದುಗರಲ್ಲಿ ಭರವಸೆಯ ಭಾವವನ್ನು ವ್ಯಕ್ತಪಡಿಸಲು ನಾನು ಕವಿತೆಯನ್ನು ಬರೆದಿದ್ದೆ. 60ಕ್ಕೂ ಹೆಚ್ಚು ಕವಿತೆಗಳ ಬಳಿಕ ಎಲ್ಲವನ್ನು ಒಟ್ಟಾಗಿಸಿ ಪುಸ್ತಕವಾಗಿ ಪ್ರಕಟಿಸಲಾಯಿತು ಎಂದು ವಿದ್ಯಾರ್ಥಿನಿ ಅಮಾನಾ ಹೇಳಿದ್ದಾರೆ.

ಅಮಾನಾ ಈವರೆಗೂ ಒಟ್ಟು 275 ಕವಿತೆಗಳನ್ನು ಬರೆದಿದ್ದು, ಇದರಲ್ಲಿ 25 ಕವಿತೆಗಳು ಹಿಂದಿಯಲ್ಲಿವೆ. ವಿದ್ಯಾರ್ಥಿನಿಯ ಸಾಕಷ್ಟು ಕವಿತೆಗಳು ಶಾಂತಿ, ಕೃತಜ್ಞತೆ, ಬಡತನ, ಪರಿಸರ, ವನ್ಯಜೀವಿ, ಬಾಲ್ಯದ ಕನಸುಗಳು, ರೈತರು, ಕುಟುಂಬ ಕುರಿತಾಗಿಯೇ ಇವೆ.

ಆರಂಭದಲ್ಲಿ ಒಂದು ವಿಷಯವನ್ನು ತೆಗೆದುಕೊಂಡು ಕವಿತೆಗಳ ಬರೆಯುತ್ತಿದ್ದೆ. ಮತ್ತೆ ಕವಿತೆಗಳ ಸಂಗ್ರಹವಾಗಿದ್ದು, ಎರಡನೇ ಪುಸ್ತಕ ಬಿಡುಗಡೆ ಮಾಡಲು ಸಿದ್ಧತೆ ಆರಂಭಿಸಿದ್ದೇನೆ. ಆದರೆ, ಈ ಕಥೆಗಳೆಲ್ಲವೂ ನೈಜ ಘಟನೆಗಳು, ವೈಯಕ್ತಿಕ ಅನುಭವಗಳೇ ಆಗಿವೆ. ಮೂರನೇ ಪುಸ್ತಕದ ಯೋಜನೆಗಳಿದ್ದು, ಅದರಲ್ಲಿನ ಕವಿತೆಗಳು ಕಾಲ್ಪನಿಕವಾಗಿರುತ್ತವೆ. ಇದರಲ್ಲಿ ಕೆಲ ಹಿಂದಿ ಕವಿತೆಗಳೂ ಕೂಡ ಸೇರಿರುತ್ತವೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿ ಅಮಾನಾ ಅವರ ತಾಯಿ ಡಾ.ಲತಾ ಟಿಎಸ್ ಅವರು ಕೆಎಸ್‌ಆರ್’ಟಿಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಗಳ ಈ ಸಾಧನೆ ಕುರಿತು ಮಾತನಾಡಿರುವ ಅವರು, ಅಮಾನಾ ಅತ್ಯಾಸಕ್ತಿಯ ಓದುಗಾರಳಾಗಿದ್ದು, ಸ್ಮಾರ್ಟ್‌ ಫೋನ್‌’ಗಳಷ್ಟು ಮೌಲ್ಯವುಳ್ಳ ಪುಸ್ತಕಗಳನ್ನು ಖರೀದಿಸಲು ನಮ್ಮನ್ನು ಕೇಳುತ್ತಿರುತ್ತಾಳೆ. ತನ್ನಷ್ಟಕ್ಕೆ ತಾನೇ ಮತ್ತು ಬರವಣಿಗೆಯ ಮೂಲಕ ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತಾಳೆ. ಆಕೆ ಕವಿಯಾಗಿರುವುದು ನಿಜಕ್ಕೂ ಆಶ್ಚರ್ಯ ತರಿಸಿದೆ ಎಂದು ಹೇಳಿದ್ದಾರೆ.

ದಾಖಲೆ ಅನಿರೀಕ್ಷಿತವಾಗಿ ಬಂದಿರಬಹುದು. ಇನ್ನೂ ಸಾಕಷ್ಟು ದಾಖಲೆ ಮಾಡಬೇಕಿದೆ. ಈ ಎಲ್ಲಾ ಯಶಸ್ಸು ನನ್ನ ತಲೆಗೆ ಹೊಕ್ಕುವುದನ್ನು ನಾನು ಬಯಸುವುದಿಲ್ಲ. ಏನೇ ಆಗಿದ್ದರೂ ಅದಕ್ಕೆ ನಾನು ಸಂತೋಷಗೊಂಡಿದ್ದಾನೆ. ಮತ್ತಷ್ಟು ಕಠಿಣ ಶ್ರಮ ಪಡುತ್ತೇನೆಂದು ಅಮಾನಾ ಹೇಳಿದ್ದಾರೆ.

@@@@@

ಕೋಪಕ್ಕೊಂದು ಕಡಿವಾಣ

ಕೋಪ ಯಾರಿಗೆ ಬರುವುದಿಲ್ಲ? ಸಾಕ್ಷಾತ್ ಪರಮಾತ್ಮನೇ ಪ್ರಳಯರುದ್ರನಾಗುತ್ತಾನೆ ಎಂದಮೇಲೆ ಹುಲುಮಾನವರ ಪಾಡೇನು? ಕೋಪದ ಪರಿಣಾಮವಂತೂ ಒಂದು ಮಟ್ಟಿನ ನಾಶವೇ ಸರಿ, ಮಿತಿಮೀರಿದಲ್ಲಿ ಸರ್ವನಾಶವೂ ಆದೀತು – ‘ಕೋಪವೆಂಬುದನರ್ಥಸಾಧನ’ ಎಂದು ದಾಸರೂ ಹೇಳಿದ್ದಾರಷ್ಟೇ. ಈ ‘ಅನರ್ಥ’ ಹೇಗಾಗುತ್ತದೆಂಬುದನ್ನು ಭಗವದ್ಗೀತೆಯ ಶ್ಲೋಕವೊಂದು ಬಹುಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ:

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ

ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ

ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ

ಸ್ಮೃತಿಭ್ರಂಶಾತ್ ಬುದ್ಧಿನಾಶಃ ಬುದ್ಧಿನಾಶಾತ್ ಪ್ರಣಶ್ಯತಿ

ಪ್ರಾಪಂಚಿಕ ವಿಷಯಗಳನ್ನೇ ನೆನೆಯುತ್ತಿದ್ದರೆ (indulgence ಎನ್ನುತ್ತೇವಲ್ಲ, ಅದು), ಆ ವಿಷಯಗಳೊಡನೆ ನಂಟು ಬೆಳೆಯುತ್ತದೆ. ಆ ನಂಟಿನಿಂದ ಬಯಕೆ, ಬಯಕೆಯಿಂದ (ಅದು ಕೈಗೂಡದಿದ್ದರೆ) ಕ್ರೋಧ, ಕ್ರೋಧದಿಂದ ಬುದ್ಧಿ ಮಸುಕಾಗುತ್ತದೆ, ಬುದ್ಧಿ ಮಸುಕಾಗುವುದರಿಂದ ವಿವೇಕ ಕದಡುತ್ತದೆ, ಅದರಿಂದ ಬುದ್ಧಿ ನಾಶವಾಗುತ್ತದೆ, ಬುದ್ಧಿ ನಾಶವಾದ ಮೇಲೆ ಉಳಿಯುವುದೇನಿದೆ? ಸರ್ವನಾಶ.

ಹಾಗಿದ್ದರೆ ಆಶೆಯನ್ನೇ ಬಿಟ್ಟುಬಿಟ್ಟರೆ ಸರ್ವನಾಶವನ್ನು ತಪ್ಪಿಸಬಹುದೇ (ಆಸೆಯೇ ದುಃಖಕ್ಕೆ ಮೂಲಕಾರಣವೆಂದು ಬುದ್ಧನೂ ಹೇಳಿದ್ದಾನಲ್ಲ)? ಆದರೆ ಇದು ಹೇಳಿದಷ್ಟು ಸುಲಭವಲ್ಲ. ಇಡೀ ಪ್ರಪಂಚವೇ ಬದುಕಿನಲ್ಲಿ ಆಸಕ್ತಿಯನ್ನು ಕಳೆದುಕೊಂಡು ಬಿಟ್ಟರೆ ಪ್ರಪಂಚ ನಡೆಯುವುದಾದರೂ ಹೇಗೆ? ಎಂದಮೇಲೆ ಆಶೆಯನ್ನು ಬಿಟ್ಟುಬಿಡುವುದು ಪ್ರಕೃತಿಯ ನಿಯಮಕ್ಕೇ ವಿರುದ್ಧವಾಯಿತಲ್ಲ. ಹಾಗಿದ್ದರೆ ಆಶೆಯೂ, ಅದರಿಂದುಂಟಾಗುವ ವೈಫಲ್ಯವೂ, ಅದರಿಂದುಂಟಾಗುವ ಕೋಪವೂ, ಅದರಿಂದುಂಟಾಗುವ ನಾಶವೂ ಸಹಜವಾದದ್ದೇ ಎನ್ನಬೇಕಷ್ಟೇ. ಆದ್ದರಿಂದ ನಮಗುಳಿವ ದಾರಿ, ಕೋಪದೊಡನೆ ಬದುಕುವುದನ್ನು ಕಲಿಯುವುದಷ್ಟೇ.

ಕೋಪವೂ ಉಳಿದ ಭಾವನೆಗಳಂತೆಯೇ ಶಕ್ತಿಯ ಒಂದು ರೂಪ; ಒಂದೇ ಶಕ್ತಿ, ವಿವಿಧ ಸಂದರ್ಭಗಳಿಗನುಗುಣವಾಗಿ ಸಂತೋಷ, ಆನಂದ, ಆಶೆ, ದುಃಖ, ಭಯ, ಕ್ರೋಧ – ಹೀಗೆ ಹಲವು ರೂಪಗಳಲ್ಲಿ ವ್ಯಕ್ತಗೊಳ್ಳುತ್ತವೆ. ನೀವು ಗಮನಿಸಿರಬಹುದು. ಭಾವೋದ್ವೇಗಕ್ಕೊಳಗಾದಾಗ ಎದೆಬಡಿತ ಹೆಚ್ಚಾಗುತ್ತದೆ, ಮೈ ಬಿಸಿಯೇರುತ್ತದೆ, ಭಾವನೆಯನ್ನು ಕಾರ್ಯರೂಪಕ್ಕಿಳಿಸಲು ಅಂಗಾಂಗಗಳು ತುಡಿಯುತ್ತವೆ. ಇವೆಲ್ಲಾ ಭಾವನೆಯೆಂಬ ಶಕ್ತಿಯ ಕೆಲಸವೇ. ನೆಮ್ಮದಿ, ಆನಂದ, ಬೇಸರ, ವಿಷಾದ ಇವು ಮೃದುಭಾವನೆಗಳು. ಮನಸ್ಸಿನ ಮಟ್ಟದಲ್ಲೇ ಇರುವಂಥವು. ಇವು ದೇಹದ ಮಟ್ಟಕ್ಕೆ ಬಂದು ಕಾರ್ಯರೂಪಕ್ಕಿಳಿಯುವ ಮೊದಲು ಚಿಂತಿಸಲು ಬೇಕಾದಷ್ಟು ಅವಕಾಶವಿರುತ್ತದೆ. ಉದ್ವೇಗ, ಸಂತೋಷ, ಆತಂಕ, ದುಃಖ – ಇವು ಸ್ವಲ್ಪ ತೀವ್ರಭಾವನೆಗಳು – ಬಹುಬೇಗ ಮುಂದಿನ ಸ್ತರಕ್ಕೆ ಜಿಗಿಯಲೆಳಸುತ್ತವೆ. ಮುಂದಿನ ಹಂತದಲ್ಲಿ ಉನ್ಮಾದ, ಭಯ, ಕೋಪ ಇವು ಇನ್ನೂ ತೀವ್ರ. ಇವುಗಳಿಗೆ ದೇಹ, ದೇಹದ ಕಾರ್ಯಾಂಗಗಳು ತೀವ್ರವಾಗಿ ಸ್ಪಂದಿಸತೊಡಗುತ್ತವೆ. ಇವುಗಳನ್ನು ನಿಯಂತ್ರಿಸಲು ಹೆಣಗಬೇಕಾಗುತ್ತದೆ. ಮುಂದಿನ, ಅತ್ಯುತ್ಕಟ ಹಂತದಲ್ಲಿ ಭಯವೂ ಅಡಗಿ, ಕೋಪೋನ್ಮಾದಗಳು ತೀವ್ರಗೊಳ್ಳುತ್ತವೆ. ನಿಯಂತ್ರಿಸಲು ಇದು ನಿಜಕ್ಕೂ ಸವಾಲಾಗಿಬಿಡುತ್ತದೆ.

ಚಿಂತನಶಕ್ತಿ ಕಡಿಮೆಯಿರುವ ಪ್ರಾಣಿಗಳಲ್ಲಿ ಭಾವೋ ದ್ವೇಗದ ಕ್ರಿಯೆ ಪ್ರತಿಕ್ರಿಯೆಗಳು ಸರಳ. ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಭಯವೆನ್ನುವುದು ಎರಡು ರೀತಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ – ಆಕ್ರಮಣ ಮಾಡು ಅಥವಾ ಓಡು – ಇದನ್ನು fight or flight instinct ಎನ್ನುತ್ತಾರೆ. ಬಹುಮಟ್ಟಿಗೆ ವಿವೇಕವಿನ್ನೂ ಬೆಳೆದಿರದ ಸಣ್ಣ ಮಕ್ಕಳಲ್ಲೂ ಈ ಸ್ವಭಾವವನ್ನು ಕಾಣುತ್ತೇವೆ. ಆದರೆ ಮನುಷ್ಯ ಬೆಳೆಯುತ್ತಾ ಭಾವನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾನೆ; ಸಮಸ್ಯೆಗಳನ್ನು ಬೌದ್ಧಿಕವಾಗಿ ಪರಿಗಣಿಸುತ್ತಾನೆ, ಚಿಂತಿಸುತ್ತಾನೆ, ಹೇಗೆ ಪ್ರತಿಕ್ರಿಯಿಸಬೇಕೆಂದು ಚಿಂತಿಸಿ ಪ್ರತಿಕ್ರಿಯಿಸುತ್ತಾನೆ. ಸಮಸ್ಯೆ ನಿಭಾಯಿಸಲು ಕೇವಲ ಕೈಕಾಲುಗಳನ್ನಲ್ಲದೇ ತನ್ನಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಳ್ಳುತ್ತಾನೆ, ಹಾಗೆಯೇ ಅನುಭವದ ಮೇಲೆ ಅಂತಹ ಹಲವು ಸೌಲಭ್ಯಗಳನ್ನು ಬೆಳೆಸಿಕೊಳ್ಳುತ್ತಾನೆ. ಆದರೂ ಈ ಪ್ರಬುದ್ಧತೆಯ ಮಟ್ಟವನ್ನೂ ಮೀರಿದ ಸನ್ನಿವೇಶಗಳು ಏರ್ಪಟ್ಟರೆ ಮನುಷ್ಯನ ವಿವೇಕ ಹಾರಿಹೋಗಿ ಆತನ ಮೂಲಭೂತ ಪ್ರತಿಕ್ರಿಯೆಯಾದ fight or flight ಮುನ್ನೆಲೆಗೆ ಬರುವ ಸಾಧ್ಯತೆಯಿದೆ. ನಿಜಕ್ಕೂ ಎಚ್ಚರವಿರಬೇಕಾದ್ದು ಇಂತಹ ಸಂದರ್ಭಗಳ ಬಗೆಗೆ.

ಕೋಪವು ವ್ಯಕ್ತಿಯ ಸ್ವಭಾವ ಮತ್ತು ಸಂದರ್ಭಗಳ ಉತ್ಪನ್ನವಾದುದರಿಂದ ಅದನ್ನು ನಿಯಂತ್ರಿಸಲು ಇಂಥದ್ದೇ ದಾರಿಯೆಂಬುದಿಲ್ಲ. ಕೋಪ ಬಂದಾಗ ಹತ್ತೆಣಿಸುವುದರಿಂದ ಹಿಡಿದು, ಮೂಗಿನ ತುದಿಯನ್ನು ಕೇಂದ್ರೀಕರಿಸಿ ಧ್ಯಾನ ಮಾಡುವವರೆಗೂ ಪ್ರಾಚೀನ ಕಾಲದಿಂದ ಹಲವು ವಿಧಾನಗಳನ್ನು ಅನುಸರಿಸುತ್ತಾ ಬಂದಿದ್ದಾರೆ. ನೀರುಕುಡಿಯುವುದು, ತಂಗಾಳಿಯಲ್ಲಿ ಅಡ್ಡಾಡಿ ಬರುವುದು ಅಥವಾ ಫ್ಯಾನಿನ ಕೆಳಗೆ ಕೂರುವುದು ಇವೂ ಸಹಾಯಕವಾಗಬಲ್ಲುದು. ಅದೇನೇ ಇರಲಿ, ಇವೆಲ್ಲ ತಾತ್ಕಾಲಿಕವಾಗಿ ಕೋಪದ ಭೌತಿಕಪರಿಣಾಮವನ್ನು ತಗ್ಗಿಸಬಲ್ಲವೇ ಹೊರತು ಕೋಪವನ್ನೇ ನಿಭಾಯಿಸಲಾರವು. ಆದರೂ ಆ ಕ್ಷಣಕ್ಕೆ ಕೋಪವು ತಹಬಂದಿಗೆ ಬಂದರೆ, ಸ್ವಲ್ಪ ತಣ್ಣಗೆ ಯೋಚಿಸಲಾದರೂ ಅವಕಾಶವಾಗುವುದಲ್ಲ, ಅಷ್ಟುಮಟ್ಟಿಗೆ ಈ ಕ್ರಮಗಳೆಲ್ಲವೂ ಪರಿಣಾಮಕಾರಿಯೇ. ಯೋಗ, ಪ್ರಾಣಾಯಾಮ, ಧ್ಯಾನ ಮೊದಲಾದುವು ದೀರ್ಘಕಾಲದಲ್ಲಿ ದೇಹದ ಮತ್ತು ಮನಸ್ಸಿನ ದೃಢತೆಯನ್ನು ಹೆಚ್ಚಿಸುವುದರ ಮೂಲಕ ಕೋಪವನ್ನು ನಿಭಾಯಿಸಲು ಕೆಲಮಟ್ಟಿಗೆ ಸಹಾಯಮಾಡಬಲ್ಲುವು. ಕೋಪವೆಂಬುದು ಪಾಶವೀಶಕ್ತಿಯಷ್ಟೇ? ಸದಭಿರುಚಿಯ ಸಂಗೀತ, ಸಾಹಿತ್ಯ, ಸತ್ಸಂಗಗಳು, ಒಂದಷ್ಟು ಅಧ್ಯಾತ್ಮ ಇವು ಖಂಡಿತ ಮನಸ್ಸನ್ನು ಹದಗೊಳಿಸಿ ಮನಸ್ಸನ್ನು ಮೃಗತ್ವದಿಂದ ಮಾನವತೆಯ ಎತ್ತರಕ್ಕೊಯ್ಯಬಲ್ಲುವು, ಕೋಪದ ನಿಯಂತ್ರಣಕ್ಕೆ ಸಹಾಯ ಮಾಡಬಲ್ಲುವು.

@@@@@

ಅಜೀರ್ಣ….. ಎಚ್ಚರ!

ಅಜೀರ್ಣ, ಹೆಸರೇ ತಿಳಿಸುವಂತೆ ನಾವು ಸೇವಿಸಿದ ಆಹಾರವು ಸಂಪೂರ್ಣವಾಗಿ ಜೀರ್ಣವಾಗದೆ ಇರುವುದು. ಹೊಟ್ಟೆಯಲ್ಲಿ ಆಹಾರ ಜೀರ್ಣವಾಗುವುದು ಅಲ್ಲಿರುವ ಜಠರಾಗ್ನಿಯಿಂದ. ಈ ಜಾಠರಾಗ್ನಿಯು ಮಂದ ಆದಾಗ, ಸೇವಿಸಿದ ಆಹಾರ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಸರಿಯಾಗಿ ಜೀರ್ಣವಾಗದ ಆಹಾರ ಅನೇಕ ರೋಗಗಳಿಗೆ ಮೂಲವಾಗಿದೆ.

ಸಂಪೂರ್ಣ ಜೀರ್ಣಕ್ರಿಯೆಯ ಲಕ್ಷಣಗಳು

ಮನಸ್ಸು ಉಲ್ಲಾಸದಿಂದಿರುತ್ತದೆ. ದೇಹ ಲಘುವಾಗಿ ಚಟುವಟಿಕೆಯಿಂದಿರುತ್ತದೆ. ಹಸಿವು ಬಾಯಾರಿಕೆಗಳು ಸರಿಯಾಗಿ ಆಗುತ್ತವೆ. ಮಲ-ಮೂತ್ರಗಳು ಸುಲಭವಾಗಿ ಆಗುತ್ತವೆ. ನೆಮ್ಮದಿಯ ರಾತ್ರಿನಿದ್ರೆ‌.

ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಒಮ್ಮೆಯಾದರೂ ಅಜೀರ್ಣವನ್ನು, ಅದರ ತೊಂದರೆಗಳನ್ನು ಅನುಭವಿಸಿಯೇ ಇರುತ್ತಾನೆ. ಅಜೀರ್ಣ ಅನೇಕ ರೋಗಗಳ ಆಗರ.

ಅಜೀರ್ಣದ ಸಾಮಾನ್ಯ ಲಕ್ಷಣಗಳು

ಹೊಟ್ಟೆಯ ಮೇಲ್ಭಾಗದಲ್ಲಿ ಉರಿ, ನೋವು.

ಎದೆಯ ಉರಿ, ವಾಕರಿಕೆ, ಹೊಟ್ಟೆ ಉಬ್ಬರ, ಪದೇಪದೇ ತೇಗು ಬರುವುದು, ಸೇವಿಸಿದ ಆಹಾರವೇ ಮೇಲೆ ಬಂದಂತಾಗುವುದು.

ಆಹಾರ ಸೇವಿಸಿದ ಬಳಿಕವೂ ತೃಪ್ತಿ ಇಲ್ಲದಿರುವುದು.

ವಾಂತಿ, ತೀವ್ರವಾದ ತಲೆನೋವು, ಮೈ-ಕೈ ನೋವು.

ಸುಸ್ತು

ದೇಹ ಭಾರವಾಗುವಿಕೆ.

ಮಲಬದ್ಧತೆ

ಅತಿಯಾದ ಬಾಯಾರಿಕೆ.

ಕಾರಣಗಳು

ಧಾವಂತದ ಆಧುನಿಕ ಜೀವನಶೈಲಿಯೇ ಪ್ರಮುಖ ಕಾರಣ.

ಆಹಾರವನ್ನು ತಯಾರಿಸುವಾಗ ಮತ್ತು ಸೇವಿಸುವಾಗ ಮನಸ್ಸು ಶುದ್ಧವಾಗಿರಬೇಕು. ಟಿವಿ ಮೊಬೈಲ್ ನೋಡುತ್ತಾ, ಭೀಕರ ದೃಶ್ಯಗಳನ್ನು ನೋಡುತ್ತಾ ಕೇಳುತ್ತಾ, ಮಾತನಾಡುತ್ತಾ, ಮನದಲ್ಲಿ ಅಸೂಯೆ, ದ್ವೇಷ, ಕೋಪಗಳೊಂದಿಗೆ ಆಹಾರವನ್ನು ಸೇವಿಸುವುದರಿಂದ, ತ್ರಿದೋಷಗಳು ಏರುಪೇರಾಗಿ ಸೇವಿಸಿದ ಆಹಾರ ಜೀರ್ಣವಾಗದೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಅವಸರವಸರವಾಗಿ ಆಹಾರಸೇವನೆ, ಓಡಾಡಿಕೊಂಡು, ಎಲ್ಲೆಂದರಲ್ಲಿ ನಿಂತಲ್ಲೇ ಆಹಾರವನ್ನು ಸೇವಿಸುವುದು, ನಾಲಗೆಗೆ ರುಚಿ ಎಂದು ಎಣ್ಣೆಯಲ್ಲಿ ಕರಿದ ತಿನಿಸುಗಳ ಸೇವನೆ, ಅತಿ ತೀಕ್ಷ್ಣ, ಅತಿ ರೂಕ್ಷ ಆಹಾರಸೇವನೆ. ದೇಹಕ್ಕೆ ಅಭ್ಯಾಸವಿರದ ಬೇರೆ ಪ್ರದೇಶಗಳ ಆಹಾರಸೇವನೆ.

ಆಗಾಗ ಕಾಫಿ ಚಹಾ, ಅದರೊಂದಿಗೆ ಬೇಕರಿ ತಿನಿಸುಗಳ ಸೇವನೆ.

ಹೊಟ್ಟೆ ಪೂರ್ತಿ ತುಂಬುವಷ್ಟು ಆಹಾರಸೇವನೆ, ಇಲ್ಲವೇ ಅತಿ ಕಡಿಮೆ ಸೇವನೆ.

ಹಸಿವಾಗುವ ಮೊದಲೇ ಆಹಾರವನ್ನು ಸೇವಿಸುವುದು ಮತ್ತು ಹಸಿವಾದಾಗ ಹೊಟ್ಟೆ ತುಂಬುವಷ್ಟು ನೀರು ಕುಡಿಯುವುದು.

ಮಲ, ಮೂತ್ರ, ಅಪಾನವಾಯುವನ್ನು ತಡೆಯುವುದು.

ಮಾನಸಿಕ ಒತ್ತಡ.

ಅಜೀರ್ಣವಾಗದಿರಲು ಏನು ಮಾಡಬೇಕು?

ಕೈ-ಕಾಲು ಮುಖ ತೊಳೆದು ಬಂದು, ಸುಖಾಸನದಲ್ಲಿ ಕುಳಿತು ಸಮಾಧಾನವಾಗಿ ಆಹಾರವನ್ನು ಸೇವಿಸಬೇಕು. ಆಹಾರವನ್ನು ಸಂಪೂರ್ಣವಾಗಿ ಸಾವಧಾನವಾಗಿ ಚೆನ್ನಾಗಿ ಅಗೆದು, ಬಾಯಲ್ಲೇ ಜೊಲ್ಲಿನೊಂದಿಗೆ ಸೇರಿ ಅರ್ಧದಷ್ಟು ಆಹಾರ ಜೀರ್ಣವಾಗುವಂತೆ ತಿನ್ನುವುದರಿಂದ ಸಮಸ್ಯೆಯೇ ಆಗುವುದಿಲ್ಲ.

ಹಸಿವಾಗದೇ, ಮೊದಲು ಸೇವಿಸಿದ ಆಹಾರ ಜೀರ್ಣವಾಗದೆ ಆಹಾರ ಸೇವಿಸಬಾರದು.

ಹಸಿವು ಆದಾಗ ತುಂಬಾ ನೀರನ್ನು ಕುಡಿಯಬಾರದು.

ಆಹಾರವು ಶುಚಿಯಾಗಿ ಸಾತ್ವಿಕವಾಗಿರಬೇಕು, ಅತಿಯಾದ ಖಾರ, ತೀಕ್ಷ್ಣ ಒಳ್ಳೆಯದಲ್ಲ.

ಆಹಾರ ಸೇವಿಸುವಾಗ ಮಧ್ಯದಲ್ಲಿ ಸ್ವಲ್ಪ ಬೆಚ್ಚಗಿನ ನೀರು ಸೇವನೆ ಜೀರ್ಣಕ್ಕೆ ಸಹಕಾರಿ.

ಹೊಟ್ಟೆ ಪೂರ್ತಿ ತುಂಬುವಷ್ಟು ಆಹಾರವನ್ನು ಎಂದೂ ಸೇವಿಸಬಾರದು.

ಆಹಾರ ಸೇವಿಸಿದ ಕೂಡಲೆ ಅತಿ ತಂಪಾದ ಮತ್ತು ಅತಿಯಾಗಿ ನೀರನ್ನು ಕುಡಿಯಬಾರದು.

ನಮ್ಮ ದೇಹಕ್ಕೆ ಸಾತ್ಮ್ಯ (ಹೊಂದಿಕೊಳ್ಳುವ, ಅಭ್ಯಾಸವಿರುವ) ಆಹಾರವನ್ನಷ್ಟೇ ಸೇವಿಸಬೇಕು.

ಕಾಲಕ್ಕೆ ತಕ್ಕಂತಹ, ಆಯಾ ಋತುಗಳಲ್ಲಿ ಸಿಗುವ ಆಹಾರ ಪದಾರ್ಥಗಳು, ತರಕಾರಿಗಳು, ಹಣ್ಣುಗಳ ಸೇವನೆ ಒಳ್ಳೆಯದು. ಕಾಲವಲ್ಲದ ಕಾಲದಲ್ಲಿ ಸಿಗುವ ಅವರೆಕಾಳು ಮುಂತಾದ ಆಹಾರಪದಾರ್ಥಗಳನ್ನು ಖಂಡಿತ ಸೇವಿಸಬಾರದು.

ರಾತ್ರಿ ಆಹಾರ ಸೇವಿಸಿದ ಎರಡು ಗಂಟೆಯ ನಂತರವೇ ಮಲಗಬೇಕು.

ಭೂಮಿಯ ಅಡಿಯಲ್ಲಿ ಸಿಗುವ ಕಂದಮೂಲಗಳನ್ನು ಹಸಿಯಾಗಿ ತಿನ್ನಬಾರದು.

ವಿರುದ್ಧ ಆಹಾರ; ಮೊಸರು/ ಮಜ್ಜಿಗೆಗೆ ಹಾಲನ್ನು ಸೇರಿಸಿಕೊಳ್ಳುವುದು, ಆಮ್ಲರಸವಿರುವ ಹಣ್ಣುಗಳೊಂದಿಗೆ ಹಾಲನ್ನು ಸೇರಿಸಿ ಸೇವಿಸಬಾರದು.

ಬೇಕರಿ ಉತ್ಪನ್ನಗಳು, ಸಂರಕ್ಷಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು.

ಆಹಾರ ತಯಾರಿಸುವಾಗ, ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಅಜೀರ್ಣವಾಗದಂತೆ ತಡೆಯುವ ಜೀರಿಗೆ, ಕಾಳುಮೆಣಸು, ಅಜವಾನ, ಧನಿಯಾ, ಮೆಂತ್ಯೆ, ಹಿಂಗು, ಹಿಪ್ಪಲಿ, ಶುಂಠಿ, ಬೆಳ್ಳುಳ್ಳಿ, ಸೈಂಧವ ಲವಣ, ನೆಲ್ಲಿಕಾಯಿ, ದ್ರಾಕ್ಷಿ, ಲವಂಗ, ಬಿಸಿ ನೀರು ಮುಂತಾದ ಆಹಾರೌಷಧಗಳನ್ನು ದಿನನಿತ್ಯದ ಬಳಸಬೇಕು.

ಅತಿಯಾದ ಕಾಫಿ-ಚಹಾ ಸೇವನೆ ಸರ್ವಥಾ ಸರಿಯಲ್ಲ.

ರಾತ್ರಿ ಸರಿಯಾದ ಸಮಯಕ್ಕೆ ನಿದ್ರೆ ಮಾಡಬೇಕು; ಮನಸ್ಸನ್ನು ಸಮಾಧಾನದಲ್ಲಿಟ್ಟುಕೊಳ್ಳುವುದು.

ಪ್ರತಿದಿನವೂ ದೇಹಕ್ಕೆ ಅಗತ್ಯವಿರುವಷ್ಟು ವ್ಯಾಯಾಮ, ನಡಿಗೆ.

ಮಲಮೂತ್ರಗಳನ್ನು ನಿರ್ಬಂಧಿಸಬಾರದು.

ಸರಳ ಪರಿಹಾರಗಳು

ಕುಡಿಯುವ ನೀರಿಗೆ ಒಣಶುಂಠಿ, ಧನಿಯಾ, ಮುಸ್ತಾ, ಜೀರಿಗೆ ಹಾಕಿ ಬಿಸಿ ಮಾಡಿ ಈ ಔಷಧಿಯುಕ್ತ ನೀರನ್ನು ಕುಡಿಯುವುದು.

ಹದವಾಗಿ ಬಿಸಿಯಾದ ನೀರಿಗೆ ಸ್ವಲ್ಪ ನಿಂಬೆರಸ, ಒಂದೆರಡು ಹನಿ ಶುಂಠಿರಸ, ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಸೇವಿಸುವುದು.

ಚಿಕ್ಕ ಶುಂಠಿಯ ತುಂಡನ್ನು ಸೈಂಧವ ಲವಣದೊಂದಿಗೆ ಆಹಾರವನ್ನು ಸೇವಿಸುವ ಮೊದಲು ಚೆನ್ನಾಗಿ ಜಗಿದು ಸೇವಿಸುವುದು.

ಆಹಾರ ಸೇವಿಸಿದ ನಂತರ ಆಗಷ್ಟೇ ಕಡಿದ ಮಜ್ಜಿಗೆಗೆ ಚಿಟಿಕೆ ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯುವುದು.

ಊಟದ ನಂತರ ಅಜವಾನ, ಸೊಂಪನ್ನು ಜಗಿದು ತಿನ್ನಬೇಕು. ಇದರಿಂದ ಸೇವಿಸಿದ ಆಹಾರವು ಸುಲಭವಾಗಿ ಸಂಪೂರ್ಣವಾಗಿ ಜೀರ್ಣವಾಗುತ್ತದೆ.

ಆಹಾರಸೇವನೆಯ ನಂತರ ಸ್ವಲ್ಪ ಹೊತ್ತು ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.l ಬಿಸಿನೀರಿನ ಸೇವನೆ ಹಿತಕರ.