ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ಭಗವಾನ್ ಬುದ್ಧ ನ್ಯಾಶನಲ್ ಫೆಲೋಶಿಪ್ ಪುರಸ್ಕೃತ : ರಾಜಶೇಖರ ನಾಯ್ಕ
ಕುಮಟಾದಲ್ಲಿ ಜನಿಸಿದ ರಾಜಶೇಖರ ನಾಯ್ಕ ಅವರು ಪತ್ರಕರ್ತರಾಗಿ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಮುಂಡಗೋಡದಲ್ಲಿ. ಸಂಜೀವಿನಿ ಫೌಂಡೇಶನ್ ಅಧ್ಯಕ್ಷರಾಗಿರುವ ಅವರು ಜನಪದ ಸೊಗಡನ್ನು, ಸಮಸ್ಯೆಗಳನ್ನು, ಅಭಿವೃದ್ದಿ ಕಾರ‍್ಯಗಳ ಬಗ್ಗೆ ಗ್ರಾಮದ ವಿಶೇಷತೆಗಳನ್ನು, ಜನಜೀವನದ ಸಾಂಪ್ರದಾಯಿಕ ಕಲೆಗಳ ಬಗ್ಗೆ, ಚಾರಿತ್ರಿಕ ಹಿನ್ನೆಲೆಗಳ ಬಗ್ಗೆ ಬರೆದು ಎಲ್ಲರ ಮನ ಗೆದ್ದಿದ್ದಾರೆ. ಕವನ, ಹನಿಗವನ, ಲೇಖನ, ಬರಹಗಳ ಮೂಲಕ ನಾಡಿನ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ.
೧೯೯೯ರಲ್ಲಿ ಗೆಳತಿ ಎಂಬ ಪ್ರಥಮ ಕವನ ಸಂಕಲನವನ್ನು ಅವರು ಹೊರತಂದರು. ೨೦೦೨ರಲ್ಲಿ ಟಿಬೆಟ್ ದಲೈಲಾಮಾ ಪರಂಪರೆ ಮತ್ತು ಮಹತ್ವ ಎಂಬ ಪುಸ್ತಕವನ್ನು ಪ್ರಕಟಿಸಿದರು. ಇದು ಕನ್ನಡ ಭಾಷೆಯಲ್ಲಿಯೇ ಪ್ರಪ್ರಥಮ ಬಾರಿಗೆ ಟಿಬೆಟ್ ದಲೈಲಾಮಾ ಪರಂಪರೆ ಬಗ್ಗೆ ಬರೆದ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೊಬೆಲ್ ಪ್ರಶಸ್ತಿ ಪಡೆದ ಟಿಬೆಟನ್ ಧರ್ಮಗುರು ದಲೈಲಾಮಾ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೇ ವಿಶೇಷ ಎನ್ನಬಹುದು.
೨೦೧೬ರಲ್ಲಿ ಹನಿಗವನ ಸಂಕಲನ ಬಿಡುಗಡೆ, ೨೦೦೫ರಲ್ಲಿ ಉತ್ತರಕನ್ನಡ ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘದಿಂದ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ಪತ್ರಕರ್ತ(೨೦೧೫), ೨೦೧೬ರಲ್ಲಿ ದೆಹಲಿಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಅವರಿಗೆ ಭಗವಾನ್ ಬುದ್ದ ನ್ಯಾಶನಲ್ ಫೆಲೋಶಿಪ್ ಅವಾರ್ಡ ನೀಡಲಾಯಿತು. ಮುಂಡಗೋಡ ತಾಲೂಕಿನ ಹಲವಾರು ಸಂಘ, ಸಂಸ್ಥೆಗಳು ಅವರನ್ನು ಸನ್ಮಾನಿಸಿ, ಗೌರವಿಸಿದೆ.
ರಾಜಶೇಖರ ನಾಯ್ಕ ಅವರು ಹಲವು ಪ್ರತಿಭೆಗಳ ಸಂಗಮ. ಕವಿ, ಸಾಹಿತಿ, ಫೆಂಗಶುಯಿ ವಾಸ್ತುತಜ್ಞ, ಪತ್ರಕರ್ತ, ಸಮಾಜಸೇವೆ…… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಅವರ ೧೦೦ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿದೆ.
@@@@@@
ಮುಂಡಗೋಡದ ಕಾಳಗನಕೊಪ್ಪದಲ್ಲಿ ಅಕ್ಷರ ಜಾತ್ರೆ…….
ಕನ್ನಡಾಭಿಮಾನಿಗಳು ಸಂಭ್ರಮದಿಂದ ಕನ್ನಡ ತೇರನ್ನೆಳೆದರು
ಫೆಬ್ರವರಿ ೨, ೨೦೧೯ರಂದು ಮುಂಡಗೋಡದ ಕಾಳಗನಕೊಪ್ಪದಲ್ಲಿ ಜಾತ್ರೆಯ ವಾತಾವರಣ…… ಮನೆ ಮನೆಯಲ್ಲಿ ಸಂಭ್ರಮದ ವಾತಾವರಣ. ಮನೆಯ ಮುಂದೆ ರಂಗೋಲಿ, ತಳಿರುತೋರಣ…….
ಇದಕ್ಕೆಲ್ಲಾ ಕಾರಣ ಅಂದು ಮುಂಡಗೋಡದ ಕಾಳಗನಕೊಪ್ಪದಲ್ಲಿ ಮುಂಡಗೋಡ ತಾಲೂಕಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ.
ಸರ್ವಾಧ್ಯಕ್ಷರ ಅದ್ದೂರಿ ಮೆರವಣಿಗೆ…….
ಮುಂಡಗೋಡದ ಕಾಳಗನಕೊಪ್ಪದಲ್ಲಿ ನಡೆದ ೫ನೇ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷರಾದ ಸಾಹಿತಿ, ಪತ್ರಕರ್ತ ರಾಜಶೇಖರ ನಾಯ್ಕ ಅವರ ಮೆರವಣಿಗೆ ಅದ್ದೂರಿಯಿಂದ ನಡೆಯಿತು. ಸಮ್ಮೆಳನದ ಸರ್ವಾಧ್ಯಕ್ಷರು ಎತ್ತಿನಗಾಡಿಯಲ್ಲಿ ಮತ್ತು ಪಾದಯಾತ್ರೆಯ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡರು.
ನೆರೆದ ಕನ್ನಡಾಭಿಮಾನಿಗಳ ಕನ್ನಡ ಪರ ಘೋಷಣೆಗಳು ಮುಗಿಲು ಮುಟ್ಟಿದವು. ಮುಂಡಗೋಡದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ ವಿದ್ಯಾರ್ಥಿಗಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಮೆರವಣಿಗೆ ಮೆರಗು ಹೆಚ್ಚಿಸಿದವು.
ಮೆರವಣಿಗೆ ನಂತರ ಶಾಸಕ ಶಿವರಾಮ ಹೆಬ್ಬಾರ ಅವರು ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಪರವಾಗಿ ಸರ್ವಾಧ್ಯಕ್ಷರಾದ ರಾಜಶೇಖರ ನಾಯ್ಕ ಅವರಿಗೆ ಮಾಲಾರ್ಪಣೆ ಮಾಡಿ, ಸನ್ಮಾನಿಸಿದರು.
ಕನ್ನಡ ನುಡಿ ತೇರನ್ನೆಳೆದರು…….
ಒಂದೆಡೆ ನಾಡಧ್ವಜ ಹಾರಾಡುತ್ತಿದ್ದರೆ ಮತ್ತೊಂದೆಡೆ ಕನ್ನಡಾಂಬೆಗೆ ಜೈಕಾರ ಮೊಳಗುತ್ತಿತ್ತು. ಯಾವ ದಿಕ್ಕಿಗೆ ಕಣ್ಣು ಹಾಯಿಸಿದರೂ ಜನಜಾತ್ರೆಯೇ. ಜನರು ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿರುವ ಕ್ಷಣವು ಕನ್ನಡಿಗರ ಸಾಹಿತ್ಯ ಪ್ರೇಮವನ್ನು ಸಾಕ್ಷಿಕರಿಸುವಂತಿತ್ತು. ಅಧಿಕ ಸಂಖ್ಯೆಯಲ್ಲಿ ಬಂದ ಜನರು ಕನ್ನಡಹಬ್ಬದ ಸಂಭ್ರಮದಲ್ಲಿ ಮಿಂದೆದ್ದು ಖುಷಿಪಟ್ಟರು.
ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಕ ರಸದೌತಣ ಸವಿದು ಖುಷಿಪಟ್ಟರು. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಜನರು ಮುಂಡಗೋಡದ ಕಾಳಗನಕೊಪ್ಪದ ನೆಲದಲ್ಲಿ ಸಂಭ್ರಮದಿಂದ ಕನ್ನಡ ತೇರನೆಳೆದರು.
ಸಾಹಿತ್ಯಕ್ಕೂ ಸಮಾಜಕ್ಕೂ ನಿಕಟ ಸಂಬಂಧಗಳಿವೆ
ಮುಂಡಗೋಡದ ಕಾಳಗನಕೊಪ್ಪದಲ್ಲಿ ನಡೆದ ಮುಂಡಗೋಡ ತಾಲೂಕಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಶ್ರೀಬಸವಾಂಜನೇಯ ವೇದಿಕೆಯಲ್ಲಿ ಸರ್ವಾಧ್ಯಕ್ಷರಾದ ಸಾಹಿತಿ, ಪತ್ರಕರ್ತ ರಾಜಶೇಖರ ನಾಯ್ಕ ಮಾತನಾಡುತ್ತಾ, ಸಾಹಿತ್ಯಕ್ಕೂ ಸಮಾಜಕ್ಕೂ ನಿಕಟವಾದ ಸಂಬಂಧಗಳಿವೆ. ಬಹಳಷ್ಟು ಸಾಹಿತ್ಯ ಪರಕರಗಳಲ್ಲಿ ಸಮಾಜದ ಆಗುಹೋಗುಗಳನ್ನೇ ವಸ್ತು ವಿಷಯವನ್ನಾಗಿ ಆರಿಸಿ ಬರೆಯಲಾಗುತ್ತದೆ. ಆದ್ದರಿಂದ ಇಂದು ಸಮಾಜಮುಖಿ ಸಾಹಿತ್ಯದ ಅವಶ್ಯಕತೆ ನಮ್ಮಲ್ಲಿ ಎದ್ದು ಕಾಣುತ್ತದೆ.
ಕನ್ನಡಕ್ಕೆ ಇದುವರೆಗೆ ೮ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ೨೦೧೬ರವರೆಗೆ ಕನ್ನಡ ಭಾಷೆಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದೆ. ಹಾಗೇನೆ ನಮ್ಮಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದವರ ಸಂಖ್ಯೆ ೬೧. ಅಂದರೆ ಪ್ರಶಸ್ತಿ ಆರಂಭಿಸಿದ ವರ್ಷದಿಂದ ಇಲ್ಲಿಯವರೆಗೆ ಒಂದು ವರ್ಷವೂ ನಮಗೆ ಈ ಪ್ರಶಸ್ತಿ ತಪ್ಪಿಲ್ಲ. ಆದರೂ ದಿನೇ ದಿನೇ ನಮ್ಮಲ್ಲಿ ಕನ್ನಡ ಮಾತಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದೊಂದು ಶೋಚನೀಯ ವಿಷಯ ಎಂದು ಹೇಳಿದರು.
ನಾವಿಂದು ಇಂಗ್ಲಿಷ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಕಾರಣ ಆ ಮಾಧ್ಯಮವು ಮಕ್ಕಳನ್ನು ವಿದ್ವಾಂಸರನ್ನಾಗಿ ಮಾಡುತ್ತದೆ ಎಂಬ ಭ್ರಮೆ. ಅದು ಸುಳ್ಳು. ಜಗತ್ತಿನಾದ್ಯಂತ ಬಹಳಷ್ಟು ಜನರು ಇಂಗ್ಲಿಷ ಓದದೇ ಉದ್ದಾರವಾದ ಎಷ್ಟೋ ಉದಾಹರಣೆಗಳಿವೆ. ಕನ್ನಡವನ್ನು ಕಲಿಸಲು ಪಾಲಕರು ಕೂಡ ಸಹಕರಿಸಿದರೆ ಒಳ್ಳೆಯದು. ನಾವೀಗ ಕನ್ನಡ ಭಾಷೆ, ಕನ್ನಡ ನಾಡನ್ನು ರಕ್ಷಿಸಿ ಬೆಳೆಸುವ ಅಥವಾ ಏಕೀಕರಣಗೊಳಿಸುವ ಕಾಯಕಕ್ಕೆ ಅಣಿಯಾಗಬೇಕಾಗಿದೆ. ನಮ್ಮ ನಾಡು, ನುಡಿ, ನೆಲ, ಜಲದ ಬಗ್ಗೆ ಸತ್ ಸಂಕಲ್ಪ ಮಾಡಿದವರಾಗಿ ಕನ್ನಡದ ಗರಿಮೆಯನ್ನು ಜಗತ್ತಿನಾದ್ಯಂತ ಎತ್ತಿ ಹಿಡಿಯೋಣ ಎಂದರು.
ಕನ್ನಡಿಗರಾದ ನಾವು ಏಕತೆಯನ್ನು ತೋರಿಸಬೇಕಾಗಿದೆ. ನಮ್ಮಲ್ಲಿಯ ಸಣ್ಣಪುಟ್ಟ ಭೇದಭಾವಗಳನ್ನು ತೊರೆದು ಒಗ್ಗಟ್ಟಿನಿಂದ ಬಾಳುವುದನ್ನು ಕಲಿಯಬೇಕು. ಎಲ್ಲಾ ಕನ್ನಡಿಗರು ತಾವಷ್ಟೇ ಅಲ್ಲ, ತಮ್ಮ ಮಕ್ಕಳಿಗೂ ಮೊದಲು ಕನ್ನಡ ಕಲಿಸುವಂತಾಗಬೇಕು. ನಾವು ಎಷ್ಟೇ ಶಿಕ್ಷಣ ಪಡೆದರೂ ಕೂಡ ನಮ್ಮ ಜನರೊಡನೆ ಕನ್ನಡದಲ್ಲಿಯೇ ಮಾತಾಡಬೇಕು. ಸಮ್ಮೇಳನ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರನ್ನೊಳಗೂಡಿಸಿ ಅದನ್ನು ಒಂದು ಜಾತ್ರೆಯಂತೆ ಆಚರಿಸಿದರೆ ತುಂಬಾ ಒಳ್ಳೆಯದು ಎಂದರು.
ಸಾಹಿತಿ ಅರವಿಂದ ಕರ್ಕಿಕೋಡಿ ಅವರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮೇಲೆ ಇಡೀ ಜಿಲ್ಲೆಯಲ್ಲಿ ಸಾಹಿತ್ಯದ ಚಟುವಟಿಕೆಗಳು ನಡೆಯುತ್ತಿರುವುದು ಅಭಿಮಾನದ ಸಂಗತಿ. ಹಾಗೆಯೇ ಮುಂಡಗೋಡದಲ್ಲಿ ಡಾ. ನಾಗೇಶ ಪಾಲನಕರ ಅವರನ್ನು ತಾಲೂಕು ಕ.ಸಾ.ಪ. ಅಧ್ಯಕ್ಷರನ್ನಾಗಿ ಜಿಲ್ಲಾಧ್ಯಕ್ಷರು ನೇಮಕ ಮಾಡಿದ ಮೇಲೆ ವರ್ಷವಿಡೀ ಕನ್ನಡದ ಡಿಂಡಿಮ ಬಾರಿಸುತ್ತಿದ್ದಾರೆ. ಇದನ್ನು ನಾನು ಓರ್ವ ಪತ್ರಕರ್ತನಾಗಿಯೂ ಖುಷಿ ಪಡುತ್ತೇನೆ ಎಂದು ಅವರು ನುಡಿದರು.
ಸಮ್ಮೇಳನ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ……..
ಕಾರ‍್ಯಕ್ರಮವನ್ನು ಶಾಸಕರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಶಿವರಾಮ ಹೆಬ್ಬಾರ ಉದ್ಘಾಟಿಸಿ ಮಾತನಾಡುತ್ತಾ, ಸುಮಾರು ಮೂರುವರೆ ದಶಕದಿಂದ ಮಾಧ್ಯಮರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಿಷ್ಕಳಂಕ, ನಿಷ್ಕಲ್ಮಷ ಮನಸ್ಸಿನ ರಾಜಶೇಖರ ನಾಯ್ಕರಿಗೆ ನಿಜವಾಗಿಯೂ ಸಮ್ಮೇಳನಾಧ್ಯಕ್ಷ ಸ್ಥಾನ ಸಂದ ಗೌರವವಾಗಿದೆ. ಕನ್ನಡ ನೆಲ, ಜಲ, ಭಾಷೆಗಳನ್ನು ಗೌರವಿಸಬೇಕು. ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರತಂತೆ ಎಂದರು.
ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿ, ನಿಜಕ್ಕೂ ಇಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಪಟ್ಟಣಗಳಲ್ಲಿ ಮಾಡುವುದಕ್ಕಿಂತ ಹಳ್ಳಿಗಳಲ್ಲಿ ಮಾಡುವುದು ಉತ್ತಮ ಎಂದರು.
ಮುಖ್ಯ ಅತಿಥಿಗಳಾಗಿ ಜಿ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಜಯಮ್ಮ ಹಿರೇಹಳ್ಳಿ, ಟಿ.ಎ.ಪಿ.ಸಿ.ಎಂ.ಸೊಸೈಟಿ ಅಧ್ಯಕ್ಷ ಪಿ.ಎಸ್.ಸಂಗೂರಮಠ, ತಾ.ಪಂ.ಕಾರ‍್ಯನಿರ್ವಾಹಕ ಅಧಿಕಾರಿ ಮಂಜುನಾಥ ಸಾಳುಂಕೆ, ಕಾಳಗನಕೊಪ್ಪ ಧುರೀಣರಾದ ನಾಗರಾಜ ಚಿಗಳ್ಳಿ, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪರಶುರಾಮ ಉಪ್ಪಾರ, ಎಚ್.ಎಂ.ನಾಯ್ಕ, ಎಸ್.ಕೆ.ರೇವಣಕರ, ಶಾರದಾ ಭಟ್ಟ, ವೇಣುಗೋಪಾಲ ಮದ್ಗುಣಿ, ಜಂಪಾಲಾಮಾ, ಉಪೇಂದ್ರ ಘೋರ್ಪಡೆ, ಜಯಚಂದ್ರನ್, ಬಾಬಣ್ಣ ಕೋಣನಕೇರಿ, ಶ್ರೀಕಾಂತ ಸಾನು, ಮಂಜುನಾಥ ವೆರ್ಣೆಕರ ಆಗಮಿಸಿದ್ದರು.
ಮುಂಡಗೋಡ ತಾಲೂಕಾ ಕ.ಸಾ.ಪ. ಅಧ್ಯಕ್ಷ ಡಾ.ನಾಗೇಶ ಪಾಲನಕರ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿರುವ ಎಲೆಮರೆಕಾಯಿಯಂತಿರುವ ಸಾಹಿತಿಗಳನ್ನು ಬೆಳಕಿಗೆ ತರಲು ಪ್ರಯತ್ನಿಸಿದ್ದೇನೆ ಎಂದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಧ್ವಜ ಹಸ್ತಾಂತರಿಸಿದರು. ಸಮ್ಮೇಳನದ ವೇದಿಕೆ ಮತ್ತು ದ್ವಾರಗಳನ್ನು ವಿನಯ ಪಾಲನಕರ ಪರಿಚಯಿಸಿದರು. ಪ್ರಿಯ ನಾಯ್ಕ ಸಮ್ಮೆಳನಾಧ್ಯಕ್ಷರ ಪರಿಚಯ ಮಾಡಿದರು.
ಸಾಹಿತಿ ಎಸ್.ಬಿ.ಹೂಗಾರ ಅವರ ಶುಭ ನುಡಿ ಸಂಗ್ರಹ ಪುಸ್ತಕವನ್ನು ಬಿ.ಇ.ಓ. ಡಿ.ಎಂ.ಬಸವರಾಜಪ್ಪ ಬಿಡುಗಡೆ ಮಾಡಿದರು. ಪ.ಪಂ.ಸದಸ್ಯ ಹಾಗೂ ಸ್ವಾಗತ ಸಮಿತಿ ಕಾರ‍್ಯಾಧ್ಯಕ್ಷ ಶಿವರಾಜ ಸುಬ್ಬಾಯವರ ಸ್ವಾಗತಿಸಿದರು. ವಿನಯ ಪಾಲನಕರ, ದಯಾನಂದ ನಾಯ್ಕ ಕಾರ‍್ಯಕ್ರಮ ನಿರೂಪಿಸಿದರು. ಬಾಲಚಂದ್ರ ಹೆಗಡೆ ವಂದಿಸಿದರು.
ಇದಕ್ಕೂ ಮುಂಚೆ ಮುಂಡಗೋಡ ತಹಸೀಲದಾರ ಅಶೋಕ ಗುರಾಣಿ ರಾಷ್ಟ್ರ ಧ್ವಜಾರೋಹಣ ಮತ್ತು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಮೆರವಣಿಗೆಯನ್ನು ಕ.ಸಾ.ಪ. ಮಾಜಿ ಅಧ್ಯಕ್ಷೆ ರಮಾಬಾಯಿ ಕುದಳೆ ಉದ್ಘಾಟಿಸಿದರು. ಮಹಾದ್ವಾರವನ್ನು ಜಿ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಜಯಮ್ಮ ಹಿರೇಹಳ್ಳಿ, ಮುಖ್ಯ ದ್ವಾರವನ್ನು ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ ಮತ್ತು ಪುಸ್ತಕ ಮಳಿಗೆಯನ್ನು ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ ಉದ್ಘಾಟಿಸಿದರು.
ಸಮ್ಮೇಳನದ ಸಮಾರೋಪ…….
ಮುಂಡಗೋಡ ತಾಲೂಕಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಮಾತನಾಡುತ್ತಾ, ಎಲ್ಲರ ಮನೆಯಲ್ಲಿ ಕನ್ನಡ ಪುಸ್ತಕಗಳ ಗ್ರಂಥಾಲಯವಿರಬೇಕು. ಈ ಗ್ರಂಥಾಲಯದಲ್ಲಿ ಕನ್ನಡ ಸಾಹಿತಿಗಳ ಹಾಗೂ ಕನ್ನಡಕ್ಕಾಗಿ ದುಡಿದವರ ಪುಸ್ತಕಗಳ ಸಂಗ್ರಹವಿರಲಿ ಎಂದರು.
ಮಕ್ಕಳನ್ನು ಕನ್ನಡದಲ್ಲಿ ಓದಿಸಬೇಕು. ಮಕ್ಕಳನ್ನು ಸಾಹಿತ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರನ್ನು ಸಾಹಿತಿಗಳನ್ನಾಗಿ ತಯಾರು ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದ ಅವರು ಸಮ್ಮೇಳನದ ಸರ್ವಾಧ್ಯಕ್ಷರಾದ ರಾಜಶೇಖರ ನಾಯ್ಕ ಅವರ ಬರವಣಿಗೆಯಲ್ಲಿ ಸಾಹಿತ್ಯಿಕ ಪ್ರಜ್ಞೆ ಇರುವುದನ್ನು ಗಮನಿಸಬಹುದು ಎಂದರು.
ಸಮಾರೋಪ ಭಾಷಣ ಮಾಡಿದ ಸಾಹಿತಿ ಶ್ರೀಧರ ಶೇಟ ಮಾತನಾಡುತ್ತಾ, ಬರವಣಿಗೆ ಕಷ್ಟದ ಕೆಲಸ ಅದನ್ನು ರಾಜಶೇಖರ ನಾಯ್ಕ ಅವರು ಪತ್ರಕರ್ತರಾಗಿ ಮತ್ತು ಸಾಹಿತಿಗಳಾಗಿ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಸಾಹಿತ್ಯವು ಚಿಂತನೆಗೆ ಇಂಬು ಕೊಡುತ್ತದೆ ಮತ್ತು ಆನಂದವನ್ನು ನೀಡುತ್ತದೆ ಎಂದರು. ಇಂದು ಕೆಲವು ಸಾಹಿತಿಗಳು ಸಾಹಿತ್ಯ ರಚನೆ ಮಾಡುವುದನ್ನು ಬಿಟ್ಟು ಪರಸ್ಪರ ಆರೋಪ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಅವರು ಬೇಸರ ವ್ಯಕ್ತಪಡಿಸಿದರು.
ಮುಂಡಗೋಡದ ಕಾಳಗನಕೊಪ್ಪದಲ್ಲಿ ನಡೆದ ಮುಂಡಗೋಡ ತಾಲೂಕಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ, ಪತ್ರಕರ್ತ ರಾಜಶೇಖರ ನಾಯ್ಕ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮಾರಿಕಾಂಬಾ ದೇವಸ್ಥಾನ ಟ್ರಸ್ಟ ಅಧ್ಯಕ್ಷರಾದ ರಮೇಶ ಕಾಮತ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರುಣ ಭಜಂತ್ರಿ, ದೈವಜ್ಞ ಸೊಸೈಟಿ ಅಧ್ಯಕ್ಷ ಮಂಜುನಾಥ ವೆರ್ಣೇಕರ, ಪ.ಪಂ.ಸದಸ್ಯ ಶ್ರೀಕಾಂತ ಸಾನು ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ರಾಘವೇಂದ್ರ ಹರಿಜನ, ಶಿವಲಿಂಗಪ್ಪ ಕಾವಲದಂಡಿ, ರಾಮಣ್ಣ ಉಪ್ಪಾರ, ಸೋಮಪ್ಪ ಸುಬ್ಬಾಯರ, ಬಾಲಚಂದ್ರ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ದಯಾನಂದ ನಾಯ್ಕ ಮತ್ತು ವಿನಯ ಪಾಲನಕರ ಕಾರ‍್ಯಕ್ರಮ ನಿರೂಪಿಸಿದರು.
ಇದಕ್ಕೂ ಮುಂಚೆ ಸಾಹಿತಿ ಶಾರದಾ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಕವಿ ಸಮಯ ನಡೆಯಿತು. ಜನಪದ ಸಾಹಿತ್ಯ-ಯುವ ಜನತೆ ಎಂಬ ವಿಷಯದ ಕುರಿತು ನಡೆದ ವಿಚಾರ ಗೋಷ್ಟಿಯ ಅಧ್ಯಕ್ಷತೆಯನ್ನು ಸುಭಾಸ ಡೋರಿ ವಹಿಸಿದ್ದರು. ದಯಾನಂದ ನಾಯ್ಕ ಉಪನ್ಯಾಸ ನೀಡಿದರು. ಹರಿದಾಸ ಸಾಹಿತ್ಯ ಮತ್ತು ಪ್ರಸ್ತುತತೆ ಎಂಬ ವಿಷಯದ ಕುರಿತು ರಾಮಾಚಾರಿ ಜೋಶಿ ಉಪನ್ಯಾಸ ನೀಡಿದರು. ಕವಿ ಸಮಯದ ಅಧ್ಯಕ್ಷತೆಯನ್ನು ಎಸ್.ಬಿ.ಹೂಗಾರ ವಹಿಸಿದ್ದರು. ನಂತರ ಮನರಂಜನಾ ಕಾರ‍್ಯಕ್ರಮ ನಡೆಯಿತು.