
ಮುಂಡಗೋಡ : ಶ್ರೀ ಬಸವಣ್ಣ ಹಾಗೂ ಶ್ರೀ ವೀರಭದ್ರೇಶ್ವರ ದೇವರ ನೂತನ ರಥ ಲೋಕಾರ್ಪಣೆ, ರಥೋತ್ಸವ ಹಾಗೂ ಲಕ್ಷದೀಪೋತ್ಸವ ಮತ್ತು ಜೀವನ ದರ್ಶನ ಪ್ರವಚನ, ಕಡುಬಿನ ಕಾಳಗ, ಕುಸ್ತಿ ಪಂದ್ಯಾವಳಿಗಳು, ಪೂಜಾ ಕಾರ್ಯಕ್ರಮಗಳು ನಾಳೆ ದಿ.1ರಿಂದ ದಿ.8ರವರೆಗೆ ನಡೆಯಲಿದೆ. ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಬಸವಣ್ಣ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಸಿ.ಎಸ್.ಗಾಣಿಗೇರ್ ತಿಳಿಸಿದರು.

ಸೋಮವಾರ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ನಾಳೆ ದಿ.1ರಂದು ಬೆಳಿಗ್ಗೆ ರುದ್ರಮನಿ ಸ್ವಾಮಿಗಳು ಹಿರೇಮಠ ಅವರ ಮಾರ್ಗದರ್ಶನದಲ್ಲಿ ಪಂಚಗವ್ಯ ಪ್ರೋಕ್ಷಣೆಯೊಂದಿಗೆ ಮಂದಿರ ಶುದ್ಧೀಕರಣ, ನವಗ್ರಹ ಪೂಜೆ, ಮಹಾ ರುದ್ರಾಭಿಷೇಕ ಹಾಗೂ ಶ್ರೀ ವೀರಭದ್ರೇಶ್ವರ ದೇವರಿಗೆ ಗುಗ್ಗಳ ಸೇವೆ ನೆರವೇರಲಿದೆ.
ದಿ.1ರಿಂದ ದಿ.5ರವರೆಗೆ ಪ್ರತಿದಿನ ಸಂಜೆ 6-30 ಗಂಟೆಯಿಂದ ಜೀವನ ದರ್ಶನ ಪ್ರವಚನ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. ದಿ.6ರಂದು ನೂತನ ರಥದ ಲೋಕಾರ್ಪಣೆ ಹಾಗೂ ರಥೋತ್ಸವ ಜರುಗಲಿದೆ. ದಿ.7ರಂದು ಸಾಯಂಕಾಲ ಕಡುಬಿನ ಕಾಳಗ ಹಾಗೂ ಲಕ್ಷದೀಪೋತ್ಸವ, ದಿ.8ರಂದು ಮಧ್ಯಾಹ್ನ 3ಗಂಟೆಯಿಂದ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷರಾದ ಉಮೇಶ್ ಬಿಜಾಪುರ, ಕಾರ್ಯದರ್ಶಿ ನಾಗಭೂಷಣ ಹಾವಣಗಿ, ಪ್ರಮುಖರಾದ ಬಿ.ಎಮ್.ಕೋಟಿ, ರಾಮಣ್ಣ ಕುನ್ನೂರ, ಫಣಿರಾಜ ಹದಳಗಿ, ಮಂಜುನಾಥ ಪಾಟೀಲ್, ಅಂಗಡಿ ಇದ್ದರು.
ವಕೀಲರಾದ ರಾಜಶೇಖರ್ ಹುಬ್ಬಳ್ಳಿ ಸ್ವಾಗತಿಸಿದರು. ವಕೀಲರಾದ ಸಂಗಮೇಶ ಕೊಳ್ಳಾನವರ್ ವಂದಿಸಿದರು.
