87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಆಯ್ಕೆ

Spread the love

ಬೆಂಗಳೂರು: ಮಂಡ್ಯದಲ್ಲಿ ನಡೆಯುತ್ತಿರುವಂತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಮಂಡ್ಯದಲ್ಲಿ ಡಿಸೆಂಬರ್.20, 21, 22ರಂದು ಮಂಡ್ಯದಲ್ಲಿ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನಾಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಗೊ.ರು.ಚನ್ನಬಸಪ್ಪ ಅವರ ಪರಿಚಯ

ಜಾನಪದ ಸಾಹಿತಿಯಾಗಿ ಸಂಘಟಕರೂ ಸಾರ್ವಜನಿಕ ಸೇವಾಗ್ರೇಸರರೂ ಆಗಿರುವ ಗೊ.ರು. ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ ರುದ್ರಪ್ಪಗೌಡರು-ಅಕ್ಕಮ್ಮ ದಂಪತಿಗಳಿಗೆ ಪುತ್ರರಾಗಿ 18-05-1930ರಲ್ಲಿ ಹುಟ್ಟಿದರು. ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಇವರು 18ನೇ ವಯಸ್ಸಿನಲ್ಲೇ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಗೆ ಸೇರಿದರು. ಸರ್ಕಾರಿ ಸೇವೆಯ ಜತೆಜತೆಗೇ ವಿವಿಧ ಸಂಘಸಂಸ್ಥೆಗಳಿಗಾಗಿ ದುಡಿದರು.

ಗಾಂಧೀ ಗ್ರಾಮದಲ್ಲಿ ಸಮಾಜ ಶಿಕ್ಷಣವನ್ನು ಪಡೆದ ಗೊರುಚ ಅವರು ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲಿ ಕೆಲಸ ಮಾಡಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ಗಳಿಗೆ ಹೆಡ್‍ಕ್ವಾರ್ಟರ್ಸ್ ಕಮೀಷನರ್ ಆಗಿ ದುಡಿದಿರುವ ಇವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.

ಪತ್ರಿಕಾವೃತ್ತಿ ಬಲ್ಲ ಇವರು ‘ಜಾನಪದ ಜಗತ್ತು’, `ಪಂಚಾಯತ್ ರಾಜ್ಯ’, `ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಮೊದಲಾದ ಪತ್ರಿಕೆಗಳಿಗೆ ಸಂಪಾದಕರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ.

ಪರಿಷತ್ತು ೮0 ಮಹೋತ್ಸವ : ಯಾವುದೇ ವ್ಯಕ್ತಿ, ಸಂಸ್ಥೆಗೆ ೮0 ವರ್ಷಗಳು ತುಂಬುವುದು ಸಾಮಾನ್ಯ ಸಂಗತಿಯಲ್ಲ. ದೀರ್ಘಕಾಲದ ಬಾಳಿಕೆಗೆ ಅದೊಂದು ಸಾಂಕೇತಿಕ ವರ್ಷ. ವ್ಯಕ್ತಿ ಜೀವನದಲ್ಲಿ ಸಹಸ್ರಚಂದ್ರದರ್ಶನವೆಂಬ ಕಾರ್ಯಕ್ರಮ ನಡೆಸುತ್ತಾರೆ. ಹಾಗೆ ೮0ರ ಸಂಭ್ರಮ ಪರಿಷತ್ತಿಗೆ ಉಂಟಾಗಿದೆ ಎಂಬುದನ್ನು ಜನಕ್ಕೆ ತಿಳಿಸಲು ಗೊರುಚ ಅವರು `ಪರಿಷತ್ತು ೮0’ ಮಹೋತ್ಸವವನ್ನು ೧೯೯೫ಮೇ ೩,೪,೫ ನೇ ತಾರೀಖುಗಳಲ್ಲಿ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಪರಿಷತ್ತಿನ ಕನ್ನಡ ನುಡಿ ವಿಶೇಷ ಸಂಚಿಕೆಯನ್ನು `ಪರಿಷತ್ತು-೮0’ ಎಂಬ ಹೆಸರಿನಲ್ಲಿ  ಪ್ರಕಟಿಸಲಾಯಿತು. ಈ ಶತಮಾನದ ‘ಕನ್ನಡ ಕಾವ್ಯ’ವೆಂಬ ವಿಚಾರ ಸಂಕಿರಣ ಏರ್ಪಾಟಾಗಿತ್ತು.

ಪ್ರಕಟನೆಗಳು : ಸಾಮಾನ್ಯ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಸರಳವಾಗಿ ಸಂಕ್ಷಿಪ್ತವಾಗಿ ವಿವಿಧ ವಿಷಯಗಳ ಬಗ್ಗೆ  ೧00 ಪುಸ್ತಕಗಳನ್ನು ಪ್ರಕಟಿಸುವ ಸಮುದಾಯ ಸಾಹಿತ್ಯಮಾಲೆ ಪ್ರಾರಂಭವಾಗಿ ಕೆಲವು ಪ್ರಕಟನೆಗಳು ಹೊರಬಿದ್ದವು.

ಇವರ ಅವಧಿಯಲ್ಲಿ ೨೫ಕ್ಕೂ ಮಿಕ್ಕ ಮಹಾಪ್ರಬಂಧಗಳ ಪ್ರಕಟನೆಯ ಜೊತೆಗೆ ಪರಿಷತ್ತಿನ ಪುಸ್ತಕಗಳ ಮರುಮುದ್ರಣಗಳು ನಡೆಯಿತು. ಬಹಳ ಚರ್ಚೆಗೆ ಒಳಗಾದ ಎ.ಎನ್. ಮೂರ್ತಿರಾಯರ ‘ದೇವರು’ ಪುಸ್ತಕದ ಇಂಗ್ಲಿಷ್ ಅನುವಾದ ಪ್ರಕಟನೆ ಆಯಿತು.

ಆರ್ಥಿಕೋನ್ನತಿ: ಜಿಲ್ಲಾ ಘಟಕಗಳಿಗೆ ಸ್ಥಳೀಯವಾಗಿ ಸಂಗ್ರಹಿಸುವ ದೇಣಿಗಳ ಜತೆಗೆ ಪರಿಷತ್ತಿನ ದತ್ತಿನಿಧಿ ಬಡ್ಡಿಯನ್ನು ಸ್ವಲ್ಪಮಟ್ಟಿಗೆ ನೀಡುವುದರಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ಖಾಯಂ ಆಗಿ ಪ್ರತಿವರ್ಷ ಮಾಡುವುದು ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಗೊರುಚ ಅವರು ರಾಜ್ಯಸರ್ಕಾರದೊಂದಿಗೆ ವ್ಯವಹರಿಸಿ ಪ್ರತಿವರ್ಷವೂ ೧ ಲಕ್ಷರೂಗಳನ್ನು ಜಿಲ್ಲಾ ಘಟಕಗಳಿಗೆ ಅನುದಾನ ನೀಡುವಂತೆ ಮಾಡಿದರು. ಇದರಿಂದ ಜಿಲ್ಲಾಘಟಕಗಳೂ ಸಾಕಷ್ಟು ಕಾರ್ಯಕ್ರಮಗಳನ್ನು  ನಡೆಯಲು ಸಾಧ್ಯವಾಯಿತು.

ಪುಸ್ತಕ ಪ್ರಾಧಿಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳಿಗೆ ಪರಿಷತ್ತಿನ ಭವನದಲ್ಲಿ ಜಾಗವನ್ನು ಬಾಡಿಗೆಗೆ ಕೊಟ್ಟು ಪರಿಷತ್ತಿಗೆ ಮಾಸಿಕ ಆದಾಯ ಬರುವಂತೆ ಮಾಡಿದರು. ಈ ಹಣವನ್ನು ನಿರ್ವಹಣೆಯ ವೆಚ್ಚಕ್ಕೆ ಬಳಸಲಾಯಿತು.

ಸಮ್ಮೇಳನಗಳು: ಗೊರುಚ ಅವರ ಕಾಲದಲ್ಲಿ 3 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದವು.

ಕೆಲವು ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದರ ಜತೆಗೆ ಪರಿಷತ್ತಿನ ಆರ್ಥಿಕ ಭದ್ರತೆಗೆ ವಿಶೇಷ ಗಮನವನ್ನು ಕೊಟ್ಟಿದ್ದು ಗೊರುಚ ಅವರ ಅಧಿಕಾರಾವಧಿಯಲ್ಲಿ ಗಮನಿಸುವ ವಿಚಾರವಾಗಿದೆ.

ಪರಿಷತ್ತಿನಲ್ಲೇ ಹೆಚ್ಚು ವೇಳೆ ಇದ್ದು ರಜಾ ದಿನಗಳಲ್ಲೂ ಪರಿಷತ್ತಿನಲ್ಲಿ ಕಾರ್ಯ ನಿರ್ವಹಣೆ ಮಾಡಿದಂಥ ಕಾರ್ಯನಿಷ್ಠ ಕ್ರಿಯಾಶಾಲಿ ಅಧ್ಯಕ್ಷರಲ್ಲಿ ಒಬ್ಬರು ಗೊರುಚ ಅವರು. ಎಷ್ಟೋ ವೇಳೆ ಅನಾರೋಗ್ಯವನ್ನೂ ಲೆಕ್ಕಿಸದೆ ಪರಿಷತ್ತಿನ ಕಾರ್ಯ ನಿರ್ವಹಣೆಯಲ್ಲಿ ಭಾಗವಹಿಸಿರುವುದು ಅವರ ವೈಶಿಷ್ಟ್ಯವಾಗಿದೆ. ಜಿ. ನಾರಾಯಣರಂತೆ ತ್ರೈಮಾಸಿಕ ಯೋಜನೆಯನ್ನು ಸಿದ್ಧಪಡಿಸಿ ಪರಿಷತ್ತಿನ ಸೇವೆಗೆ ಅವರು  ಕಾರ್ಯಪ್ರವೃತ್ತರಾಗಿದ್ದದ್ದು ಗಮನಾರ್ಹಸಂಗತಿ.

ಇದೀಗ ಇಷ್ಟು ಸಾಹಿತ್ಯ ಸೇವೆ ಮಾಡಿ, ಸಾಧನೆ ಮಾಡಿರುವಂತ ಗೊ.ರು ಚನ್ನಬಸಪ್ಪ ಅವರನ್ನು ಮಂಡ್ಯದಲ್ಲಿ ನಡೆಯುತ್ತಿರುವಂತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.