ಬೊಮ್ಮಾಯಿಯೂ ನನಗೆ ಮೋಸ ಮಾಡಿದರು: ಎಂಟಿಬಿ ಚಾಟಿ

Spread the love

ಹೊಸಕೋಟೆ: ‘ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಮಾತ್ರವಲ್ಲ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಸಹ ಕಾರಣ. ಅವರೂ ನನಗೆ ಮೋಸ ಮಾಡಿದರು. ಹಾಗಾಗಿ ನಾನು ಸೋಲಬೇಕಾಯಿತು’ ಎಂದು ಹೊಸಕೋಟೆ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮತ್ತು ವಿಧಾನ ಪರಿಷತ್‌ ಸದಸ್ಯ ಎಂ.ಟಿ.ಬಿ ನಾಗರಾಜ್‌ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ನಾನು ಆಕಾಂಕ್ಷಿ ಅಲ್ಲ. ಚುನಾವಣೆಗೆ ಸ್ಪರ್ಧಿಸುವ ಆಸಕ್ತಿಯೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್‌ ಅವರಿಗೆ ನೀಡಿದರು. ಆ ಮೂಲಕ ಆ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಸುವರ್ಣ ಅವಕಾಶ ತಪ್ಪಿಸಿ ಮೋಸ ಮಾಡಿದರು’ ಎಂದು ಹರಿಹಾಯ್ದರು.

‘ಹೋಸಕೋಟೆ ತಾಲ್ಲೂಕಿನ ಪಕ್ಷದ ಮುಖಂಡರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಸೇರಿದಂತೆ ಸರ್ಕಾರದಲ್ಲಿ ಸ್ಥಾನಮಾನ ನೀಡಲಿಲ್ಲ. ಸ್ಥಳೀಯ ಕೆಲವರಿಗಾದರೂ ಅವಕಾಶ ನೀಡಿದ್ದಿದ್ದರೆ ನನ್ನ ಕೈ ಮತ್ತಷ್ಟು ಬಲಗೊಳ್ಳುತ್ತಿತ್ತು. ಆದರೆ ಹಾಗಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಆರಂಭದಿಂದ ಕೊನೆಯವರೆಗೂ ನೋವಿನಿಂದ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಯಾರ‍್ಯಾರು ಕಾರಣ ಎಂದು ಹೇಳಿದರು. ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಂತರ ಕ್ಷೇತ್ರದ ಮುಸ್ಲಿಮರನ್ನು ತರಾಟೆಗೆ ತೆಗೆದುಕೊಂಡರು.

‘ನಾನು ಅಪಾರವಾಗಿ ನಂಬಿದ್ದ ಕ್ಷೇತ್ರದ ಅಲ್ಪಸಂಖ್ಯಾತರು ಕೂಡ ಚುನಾವಣೆಯಲ್ಲಿ ನನಗೆ ಮೋಸ ಮಾಡಿದರು. ನನಗೇ ಮತ ನೀಡುವುದಾಗಿ ಕುರಾನ್ ಮತ್ತು ಅಲ್ಲಾಹುವಿನ ಮೇಲೆ ಆಣೆ, ಪ್ರಮಾಣ ಮಾಡಿದ್ದ ಅವರು ನನಗೆ ಮತ ನೀಡದೆ ಮೋಸ ಮಾಡಿದರು. ಇನ್ನೆಂದಿಗೂ ಅವರನ್ನು ನಾನು ನಂಬುವುದಿಲ್ಲ’ ಎಂದು ಎಂ.ಟಿ.ಬಿ ಹೇಳಿದರು.

‘ನನ್ನ ಕ್ಷೇತ್ರದ ಅಲ್ಪಸಂಖ್ಯಾತರಿಗೆ ನಾನು ನನ್ನ ಶಕ್ತಿ ಮೀರಿ ಸಹಾಯ ಮಾಡಿದ್ದೇನೆ. ಆದರೂ, ಅವರು ನನಗೆ ಮೋಸ ಮಾಡಿದರು. ಮುಸ್ಲಿಮರು ಬಿಜೆಪಿಗೆ ಮತ ಹಾಕಲಿಲ್ಲ. ಬಿಜೆಪಿ ನೀಡಿದ ನೋಟು ಪಡೆದು ಅವರು ಕಾಂಗ್ರೆಸ್‌ಗೆ ವೋಟು ಹಾಕಿದರು. ಕಳದೆ ಮೂರು ಚುನಾವಣೆಗಳಲ್ಲಿ ಬಿಜೆಪಿ ನೀಡಿದ ಎಲ್ಲಾ ಸವಲತ್ತು ಪಡೆದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

‘ಕ್ಷೇತ್ರದಲ್ಲಿ ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುತ್ತೇನೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರು ಎದೆಗುಂದಬೇಡಿ. ನಾನು ಹೊಸಕೋಟೆಯಲ್ಲಿಯೇ ಇರುತ್ತೇನೆ’ ಎಂದು ಅಭಯ ನೀಡಿದರು.

ಹೊಸಕೋಟೆ ತಾಲ್ಲೂಕು ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿದ್ದರು.