ಮಂಗಳೂರಲ್ಲಿ ಫೆ.17 ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ : ಡಿಸಿಎಂ ಡಿಕೆ ಸ್ಪಷ್ಟನೆ

Spread the love

ಮಂಗಳೂರು : ಇದೆ 22ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಬೇಕಿತ್ತು ಆದರೆ ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿದ್ದು ಇದೀಗ ಫೆಬ್ರವರಿ 17ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಜನವರಿ 22ರಂದು ಸಮಾವೇಶ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಮುಂದೆ ಹಾಕಲಾಗಿತ್ತು. ಇದೀಗ 17ಕ್ಕೆ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಕಾಯ್ದೆಯ ಸುಗ್ರಿವಾಜ್ಞೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ವಿಧಾನಸಭೆ ಅಧಿವೇಶನ ಬರುವ ಮುಂಚೆ ಸುಗ್ರಿವಾಜ್ಞೆ ಮಾಡಿದ್ದೆವು. ಭಾಷೆ, ಸಂಸ್ಕೃತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ನಾಗರಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಮಾಡಿದ್ದೆವು. ರಾಜ್ಯಪಾಲರು ಯಾಕೆ ವಾಪಸು ಕಳುಹಿಸಿದರು ಎಂಬುದು ಗೊತ್ತಿಲ್ಲ. ಈಗ ಪರಿಶೀಲಿಸುತ್ತೇನೆ ಎಂದರು.