ಬೆಂಗಳೂರು : ದೇಶದ್ರೋಹಿಗಳಿಗೆ ಬೆಂಬಲ ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿಂದು ತಿಳಿಸಿದರು.ಬಜೆಟ್ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿಯವರು ವಿಧಾನಸಭೆಯಲ್ಲಿ ಉತ್ತರ ನೀಡುತ್ತಿದ್ದರು.
ಈ ಹಂತದಲ್ಲಿ ಬಿಜೆಪಿ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಯಲ್ಲಿ ನಿಂತು ಧರಣಿ ನಡೆಸಿ ಘೋಷಣೆ ಕೂಗುವುದನ್ನು ಮುಂದುವರೆಸಿದರು.
ಆದರೂ ಮುಖ್ಯಮಂತ್ರಿಯವರು ತಮ್ಮ ಉತ್ತರವನ್ನು ಮುಂದುವರೆಸಿದರು. ಕಾಗದ ಪತ್ರಗಳನ್ನು ಹರಿದು ತೂರಿದ ಬಿಜೆಪಿ ಶಾಸಕರು ನಾನಾ ರೀತಿಯ ಘೋಷಣೆಗಳ ಮೂಲಕ ಮುಖ್ಯಮಂತ್ರಿಗಳ ಉತ್ತರಕ್ಕೆ ಅಡ್ಡಿಪಡಿಸಿದರು. ಆದರೂ ಸಿದ್ದರಾಮಯ್ಯ ಜಗ್ಗದೇ ತಮ್ಮ ಮಾತುಗಳನ್ನು ಮುಂದುವರೆಸಿ ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಎಳೆಎಳೆಯಾಗಿ ವಿವರಿಸಲಾರಂಭಿಸಿದರು.
ಇದರಿಂದ ಸಿಡಿಮಿಡಿಗೊಂಡ ಬಿಜೆಪಿ ಶಾಸಕರು ಏರಿದ ಧ್ವನಿಯಲ್ಲಿ ಘೋಷಣೆ ಕೂಗುತ್ತಿದ್ದರು. ಕೊನೆಗೆ ಆರ್.ಅಶೋಕ್‍ರವರು ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ. 68 ಘಂಟೆ ಕಳೆದರೂ ಒಬ್ಬ ಆರೋಪಿಯನ್ನೂ ಬಂಸಿಲ್ಲ. ಈ ಸರ್ಕಾರ ಹಿಂದೂ ವಿರೋಯಾಗಿದೆ. ದೇಶದ್ರೋಹಿಗಳಿಗೆ ಬೆಂಬಲ ಕೊಡುತ್ತಿದೆ. ಮೊನ್ನೆ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸಭೆಯ ಸಭಾಂಗಣದೊಳಗೂ ಘೋಷಣೆ ಕೂಗಬಹುದು. ಘೋಷಣೆ ಕೂಗಿದ ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ದೇಶದ್ರೋಹಿಗಳ ಜೊತೆ ಶಾಮೀಲಾಗಿರುವ ಈ ಸರ್ಕಾರವನ್ನು ವಜಾಗೊಳಿಸಬೇಕೆಂದು ನಾವು ರಾಜ್ಯಪಾಲರಿಗೆ ದೂರು ನೀಡುತ್ತೇವೆ, ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ತಮ್ಮ ಶಾಸಕರೊಂದಿಗೆ ಕಲಾಪದಿಂದ ಹೊರನಡೆದರು.ಈ ವೇಳೆ ಸಿದ್ದರಾಮಯ್ಯನವರು ನಿಮ್ಮ ಕೈಲಿ ಬೇರೇನೂ ಆಗುವುದಿಲ್ಲ, ಸರಿ ನಡಿಯಿರಿ ಎಂದು ಲೇವಡಿ ಮಾಡಿದರು.