ನೆರೆಯಿಂದ ಹಾನಿ ಉಂಟಾದ ಸ್ಥಳಕ್ಕೆ ಸಚಿವ ಹೆಬ್ಬಾರ್ ಭೇಟಿ

Spread the love

ಯಲ್ಲಾಪುರ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕಳಚೆ ಭಾಗದಲ್ಲಿ ಅಪಾರ ಹಾನಿ ಉಂಟಾಗಿದೆ. ಇಂದು ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಕಳಚೆ ಭಾಗದಲ್ಲಿ ನೆರೆಯಿಂದ ಹಾನಿ ಉಂಟಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಭಾಗದಲ್ಲಿ ಸಾರ್ವಜನಿಕರಿಗೆ ನೂತನ ರಸ್ತೆ ಸಂಪರ್ಕ ಕಲ್ಪಿಸುವುದರ ಬಗ್ಗೆ ಹಾಗೂ ಕುಸಿದಿರುವ ಮಣ್ಣನ್ನು ತೆಗೆದು ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಕುರಿತಂತೆ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಸಂತ್ರಸ್ತರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ ಸಾಂತ್ವನವನ್ನು ಹೇಳಿದರು.

ಮಣ್ಣು ಕುಸಿದು ಮೃತಪಟ್ಟ ಕಳಚೆಯ ಶ್ರೀಮತಿ ದೇವಕಿ ನಾರಾಯಣ ಗಾಂವ್ಕರ್ ಅವರು ಮೃತಪಟ್ಟಿದ್ದು , ಅವರ ಕುಟುಂಬಸ್ಥರಿಗೆ ಸುಮಾರು 5 ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ ಅನ್ನು ಸಚಿವರು ಈ ಸಂದರ್ಭದಲ್ಲಿ ವಿತರಿಸಿದರು.

ಈ ವೇಳೆ ಸಹಾಯಕ ಆಯುಕ್ತರಾದ ಆಕೃತಿ ಬನ್ಸಾಲ್, ತಹಶಿಲ್ದಾರರಾದ ಕೃಷ್ಣ ಕಾಮಕರ್, ಪ್ರಮುಖರಾದ ವಿಜಯ ಮಿರಾಶಿ, ಬಾಲಕೃಷ್ಣ ನಾಯಕ, ಮುರಳಿ ಹೆಗಡೆ ಹಾಗೂ ಪಂಚಾಯತ ಸದಸ್ಯರು, ಗ್ರಾಮಸ್ಥರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆದ್ದಾರಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಿ : ಅಧಿಕಾರಿಗಳಿಗೆ ಹೆಬ್ಬಾರ್ ಸೂಚನೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಗಿಡಗಳನ್ನು ತಕ್ಷಣ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ  ಸಚಿವ ಶಿವರಾಮ್ ಹೆಬ್ಬಾರ್ ಸೂಚನೆ ನೀಡಿದ್ದಾರೆ.

ಅರಬೈಲ್ ಘಟ್ಟದಲ್ಲಿ ಉಂಟಾದ ಭೂಕುಸಿತ ಹಾಗೂ ಹಾನಿ ಪರಿಶೀಲನೆ ನಡೆಸಿದ ಅವರು  ಮೂರು ದಿನಗಳಿಂದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವುದರಿಂದ ಜನ ಸಂಚಾರಕ್ಕೆ ತೊಂದರೆಯಾಗುತ್ತಿದೆ‌. ಕಷ್ಟದಲ್ಲಿರುವ ಜನರು ನಮ್ಮನ್ನು ಶಪಿಸುತ್ತಿದ್ದಾರೆ. ತಕ್ಷಣ ಮರಗಳನ್ನು ತೆರವುಗೊಳಿಸಿ ರಸ್ತೆಯನ್ನು ಖುಲ್ಲಾಗೊಳಿಸಬೇಕು,  ಯಂತ್ರಗಳ ಅಗತ್ಯವಿದ್ದರೆ ತಕ್ಷಣವೇ ಪೂರೈಸಲಾಗುವುದು ಇನ್ನು ಮೂರು ದಿನಗಳ ಒಳಗಾಗಿ ಹೆದ್ದಾರಿಯಲ್ಲಿ ಸಂಚಾರ ಪ್ರಾರಂಭವಾಗಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಲೋಕೋಪಯೋಗಿ ಹಾಗೂ ಹೆದ್ದಾರಿ ಇಲಾಖೆಯ ತಂಡವೂ ನಾಳೆ ಸ್ಥಳಕ್ಕೆ ಬರಲಿದ್ದು ಕೂಡಲೇ ಹೆದ್ದಾರಿ ತೆರವು ಕಾರ್ಯ ಪ್ರಾರಂಭಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಎಸಿ ಆಕೃತಿ ಬನ್ಸಾಲ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು‌.