ಬೆಂಗಳೂರು: ಸಿಎಂ ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ, ಶಾಸಕಾಂಗ ಸಭೆಯ ಮುಂದೆಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಬ್ಯಾಟಿಂಗ್ ಮಾಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಹೇಳಿಕೆ ಮೇಲೂ ಸಿಎಂ ಬದಲಾವಣೆ ಚರ್ಚೆ ವಿಚಾರ, ಸಚಿವ ರಾಜಣ್ಣ ಟೀಂ ನಿಂದ ಹೈಕಮಾಂಡ್ ಭೇಟಿ ಮಾಡೋ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದಲ್ಲಿ ಒಗ್ಗಟ್ಟಿದೆ. ನನಗೆ ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರೋದು ಕಂಡುಬಂದಿಲ್ಲ. ಸಚಿವ ರಾಜಣ್ಣ ಕಣ್ಣಿಗೆ ಬಿದ್ದಿದ್ದರೆ ಅದು ಗೊತ್ತಿಲ್ಲ ಎಂದರು.
ಡಿಕೆಶಿ ಸಿಎಂ ಆಗಬೇಕು ಎಂದು ಅಭಿಮಾನಿಗಳು ಹೇಳುತ್ತಾರೆ. ಅದಕ್ಕೆ ಡಿಕೆಶಿ ಏನು ಮಾಡಲು ಆಗುತ್ತದೆ. ಹೈಕಮಾಂಡ್ ಏನು ಮಾಡೋಕಾಗುತ್ತೆ? ನಾವೇನು ಮಾಡೋದು? ಸಿಎಂ ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ. ಶಾಸಕಾಂಗ ಸಭೆಯ ಮುಂದೆಯೂ ಚರ್ಚೆ ಆಗುತ್ತಿಲ್ಲ. ಹೈಕಮಾಂಡ್ ಹೇಳಿದ ಮೇಲೆ ಮಾತನಾಡುತ್ತಿದ್ದಾರೆ ಅಂದರೆ ಹೈಕಮಾಂಡ್ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ. ಈಗ ಮತ್ತಷ್ಟು ಸ್ಟ್ರಾಂಗ್ ಆಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯರನ್ನ ಆಯ್ಕೆ ಮಾಡುವಾಗ 1 ವರ್ಷ, 2 ವರ್ಷ, 3 ವರ್ಷ ಅಂತ ಆಯ್ಕೆ ಮಾಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಿರೋದಕ್ಕೆ ಎಲ್ಲರ ಸಹಮತ ಇದೆ. ಯಾರಿಗೂ ಭಿನ್ನಮತ ಇಲ್ಲ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.