
ಮುಂಡಗೋಡ : ತಾಲೂಕಿನ ನಂದಿಪುರದಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬಕ್ಕೆ ವೈಯರ್ ಮೂಲಕ ಸಂಪರ್ಕ ಪಡೆದಿದ್ದ ಸಂದರ್ಭದಲ್ಲಿ ಕಟ್ ಆಗಿ ಬಿದ್ದಿದ್ದ ತಂತಿ ತುಳಿದು ವ್ಯಕ್ತಿಯೊಬ್ಬ ಸ್ಥಳದಲ್ಲಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಶಿವಪ್ಪ ನಾಗಪ್ಪ ವಡ್ಡರ(60) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.
ಶಿವಪ್ಪ ವಡ್ಡರ ಸೋಮವಾರ ಬೆಳಗ್ಗೆ ಮನೆಯಿಂದ ಹೊಲಕ್ಕೆ ಹೋಗಿದ್ದನು. ಆದರೆ ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಹೊಲಕ್ಕೆ ಹೋಗಿ ಹುಡುಕಾಡಿದರು. ಈ ವೇಳೆ ಈತನ ಶವ ದೊರಕಿದ್ದು, ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.

ಪಕ್ಕದ ಹೊಲದ ಮೋಹನ್ ಪಾಟೀಲ್ ಎಂಬುವರು ತಮ್ಮ ಬೋರ್ವೆಲ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೃತ ವ್ಯಕ್ತಿಯ ಹೊಲದಲ್ಲಿರುವ ವಿದ್ಯುತ್ ಕಂಬದಿಂದ ಅನಧಿಕೃತವಾಗಿ ವೈಯರ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು ಎನ್ನಲಾಗಿದೆ.
ಹಾಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ ತಂತಿ ತುಂಡಾಗಿದ್ದು, ಅದರಲ್ಲಿ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಶಿವಪ್ಪ ವಡ್ಡರ್ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.