ಸೆಪ್ಟೆಂಬರ್‌ 6ಕ್ಕೆ ಆರರಿಂದ ಎಂಟನೇ ತರಗತಿ ಆರಂಭಿಸಲು ಸರ್ಕಾರ ಒಪ್ಪಿಗೆ

Spread the love

ಬೆಂಗಳೂರು: ಕೋವಿಡ್‌ ದೃಢ ಪ್ರಮಾಣ ದರ ಶೇಕಡ 2ಕ್ಕಿಂತ ಕಡಿಮೆ ಇರುವ ಎಲ್ಲ ತಾಲ್ಲೂಕುಗಳಲ್ಲೂ ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ 6ರಿಂದ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ರಾಜ್ಯದ 38,040 ಶಾಲೆಗಳಲ್ಲಿ ಆರರಿಂದ ಎಂಟನೇ ತರಗತಿಯ 31.36 ಲಕ್ಷ ವಿದ್ಯಾರ್ಥಿಗಳಿದ್ದಾರೆ. 1.52 ಲಕ್ಷ ಶಿಕ್ಷಕರು ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್‌ ದೃಢಪ್ರಮಾಣ ದರ ಶೇ 2ಕ್ಕಿಂತ ಹೆಚ್ಚಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸದಿರಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ತೀರ್ಮಾನಗಳನ್ನು ಪ್ರಕಟಿಸಿದ ಕಂದಾಯ ಸಚಿವ ಆರ್‌.ಅಶೋಕ, ‘ಪ್ರತಿ ತರಗತಿಯ ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಭಜಿಸಿ, ದಿನ ಬಿಟ್ಟು ದಿನ ತರಗತಿ ನಡೆಸಲಾಗುವುದು. ಸೋಮವಾರದಿಂದ ಶುಕ್ರವಾರದವರೆಗೆ ತರಗತಿಗಳು ನಡೆಯಲಿವೆ. ಶನಿವಾರ ಮತ್ತು ಭಾನುವಾರ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲಾಗುವುದು’ ಎಂದರು.

ಒಂಬತ್ತನೇ ತರಗತಿಯಿಂದ ದ್ವಿತೀಯ ಪಿಯುವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನ ತರಗತಿ ನಡೆಸಲಾಗುತ್ತಿದೆ. ಆದರೆ, 6 ರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಐದೇ ದಿನ ತರಗತಿಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದು ತಿಂಗಳ ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಲ್ಯಾಣ ಮಂಟಪಕ್ಕೆ ಅನುಮತಿ: ಕಲ್ಯಾಣ ಮಂಟಪಗಳಲ್ಲಿ ಮದುವೆ ಮತ್ತಿತರ ಸಮಾರಂಭ ನಡೆಸಲು ಅನುಮತಿ ನೀಡಲಾಗಿದೆ. ಗರಿಷ್ಠ 400 ಜನರ ಮಿತಿಗೆ ಒಳಪಟ್ಟು, ಶೇಕಡ 50ರಷ್ಟು ಜನರಿಗೆ ಅವಕಾಶ ಕಲ್ಪಿಸಿ ಸಭೆ, ಸಮಾರಂಭಗಳನ್ನು ನಡೆಸಲು ಒಪ್ಪಿಗೆ ನೀಡಲಾಗುವುದು ಎಂದು ಪ್ರಕಟಿಸಿದರು.

ನಾಲ್ಕು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ: ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದ ಎಲ್ಲ ಜಿಲ್ಲೆಗಳು ಮತ್ತು ಕೋವಿಡ್‌ ದೃಢಪ್ರಮಾಣ ದರ ಶೇ 2ಕ್ಕಿಂತ ಹೆಚ್ಚಿರುವ ಎಲ್ಲ ಜಿಲ್ಲೆಗಳಲ್ಲೂ ವಾರಾಂತ್ಯದ ಕರ್ಫ್ಯೂ ಇತ್ತು. ಇನ್ನು ಮುಂದೆ ದಕ್ಷಿಣ ಕನ್ನಡ, ಕೊಡಗು, ಹಾಸನ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಉಡುಪಿ, ಚಿಕ್ಕಮಗಳೂರು, ಹಾಸನ, ಕೋಲಾರ, ಶಿವಮೊಗ್ಗ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಕೋವಿಡ್‌ ದೃಢಪ್ರಮಾಣ ದರ ಶೇ 1.5ಕ್ಕಿಂತ ಕೆಳಕ್ಕೆ ಇಳಿದಿದೆ. ಈ ಜಿಲ್ಲೆಗಳಲ್ಲಿ ಕೆಲವು ನಿರ್ಬಂಧಗಳನ್ನು ಸಡಿಲಿಸಲು ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ನಿರ್ಬಂಧಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದರು.

14 ವಿದ್ಯಾರ್ಥಿಗಳಿಗಷ್ಟೇ ಕೋವಿಡ್: ಶಾಲೆ ಆರಂಭಿಸಲಾಗಿರುವ ಕಡೆಗಳಲ್ಲಿ ತರಗತಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಹರಡಿಲ್ಲ. 6,472 ವಿದ್ಯಾರ್ಥಿಗಳ ಗಂಟಲು ಮತ್ತು ಮೂಗಿನ ದ್ರವದಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. 14 ವಿದ್ಯಾರ್ಥಿಗಳಲ್ಲಿ ಮಾತ್ರ ಕೋವಿಡ್‌ ದೃಢಪಟ್ಟಿದೆ ಎಂದರು.

ಒಂಬತ್ತನೇ ತರಗತಿಯಿಂದ ದ್ವಿತೀಯ ಪಿಯುವರೆಗಿನ ಭೌತಿಕ ತರಗತಿಗಳಿಗೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಶಾಲಾ, ಕಾಲೇಜುಗಳಲ್ಲಿ ಹಾಜರಾತಿ ಕಡಿಮೆ ಇದೆ. ಶುಕ್ರವಾರ ಒಟ್ಟು ಶೇ 64.12ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು ಎಂದರು.