2022ಕ್ಕೆ ‘ಇನ್ವೆಸ್ಟ್ ಕರ್ನಾಟಕ’: ಮುರುಗೇಶ್ ನಿರಾಣಿ

Spread the love

ತುಮಕೂರು: ರಾಜ್ಯಕ್ಕೆ ಉದ್ಯಮಿಗಳನ್ನು ಆಕರ್ಷಿಸಲು ಮುಂದಿನ ವರ್ಷ ‘ಇನ್ವೆಸ್ಟ್ ಕರ್ನಾಟಕ’ ನಡೆಸಲಾಗುವುದು. ಮುಖ್ಯಮಂತ್ರಿ ಜತೆ ಚರ್ಚಿಸಿ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ನಗರದ ಹೊರ ವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ, ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇನ್ವೆಸ್ಟ್ ಕರ್ನಾಟಕ’ ನಡೆಸಿದರೆ ರಾಜ್ಯಕ್ಕೆ ಬಂಡವಾಳ ಹರಿದು ಬರಲಿದ್ದು, ಉದ್ಯಮಗಳು ಆರಂಭವಾಗಲಿವೆ. ಇದರಿಂದ ಉದ್ಯೋಗ ಅವಕಾಶಗಳೂ ಹೆಚ್ಚಾಗಲಿದ್ದು, ಆ ಮೂಲಕ 5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಸಾಕಷ್ಟು ಸಂಖ್ಯೆಯ ಕೈಗಾರಿಕೆಗಳು ಬರಬೇಕು. ಉದ್ಯೋಗ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕೈಗಾರಿಕಾ ಪ್ರದೇಶದಲ್ಲಿ 105 ಎಕರೆಯಲ್ಲಿರುವ ಫುಡ್‍ಪಾರ್ಕ್ ಅತ್ಯುತ್ತಮ ಮಾದರಿಯಲ್ಲಿ ನಡೆಯುತ್ತಿದೆ. ನೂರಾರು ಕೋಟಿ ಬಂಡವಾಳ ಹೂಡಿಕೆಯಾಗುತ್ತಿದ್ದು, ರಾಜ್ಯದ ಮೊದಲ ಫುಡ್‍ಪಾರ್ಕ್ ಇದಾಗಿದೆ. ವಿವಿಧ ಆಹಾರ ಪದಾರ್ಥಗಳ ಸಂಸ್ಕರಣೆ ಮಾಡಲಾಗುತ್ತಿದೆ. ಫುಡ್‍ಪಾರ್ಕ್‍ನಲ್ಲಿ ಸ್ಥಳೀಯರಿಗೆ ಶೇ 80ರಷ್ಟು ಉದ್ಯೋಗ ನೀಡಬೇಕು ಎಂಬ ಉದ್ದೇಶ ಇದೆ. ಆದರೆ ಅದಕ್ಕೆ ತಕ್ಕಂತೆ ಕೌಶಲದ ಕೊರತೆಯಿಂದಾಗಿ ಅವಕಾಶಗಳು ಸಿಕ್ಕಿಲ್ಲ ಎಂದರು.

ಕಾಮಗಾರಿ ವೀಕ್ಷಣೆ: ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ನೀರು ಸಂಸ್ಕರಣಾ ಘಟಕ, ಮೆಷಿನ್ ಟೂಲ್ ಪಾರ್ಕ್ ಸೇರಿದಂತೆ ವಿವಿಧ ಕೈಗಾರಿಕೆಗಳ ಕಾಮಗಾರಿಗಳ ಪ್ರಗತಿಯ ವಿವರಗಳನ್ನು ಪಡೆದುಕೊಂಡರು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೂ ತೆರಳಿ ವೀಕ್ಷಿಸಿದರು. ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಕೆಐಎಡಿಬಿ, ಕೈಗಾರಿಕಾ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ‘ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಇರುವ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಇದು ಸಮರ್ಪಕವಾಗಿ ಬಳಕೆಯಾಗಬೇಕು. ಮಾದರಿ ಕೈಗಾರಿಕಾ ಪ್ರದೇಶವಾಗಿ ರೂಪುಗೊಳ್ಳಬೇಕು’ ಎಂದು ಸೂಚಿಸಿದರು.

ಕೈಗಾರಿಕೆಗಳನ್ನು ಪ್ರಾರಂಭಿಸಲು ಮೂಲಭೂತ ಸೌಕರ್ಯದ ಕೊರತೆ ಉಂಟಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರು.