
ಮುಂಡಗೋಡ : ದೇಹದಿಂದ ಆತ್ಮ ಇನ್ನೂ ಹೋಗಿಲ್ಲ ಎಂಬ ನಂಬಿಕೆಯಿಂದ 10 ದಿನಗಳ ಹಿಂದೆ ಮೃತಪಟ್ಟಿರುವ ಹಿರಿಯ ಬೌದ್ಧ ಸನ್ಯಾಸಿಯ ದೇಹವನ್ನು ಅಂತ್ಯಸಂಸ್ಕಾರ ಮಾಡದ ಬಿಕ್ಕುಗಳು ವಸತಿನಿಲಯ ಕೋಣೆಯೊಂದರಲ್ಲಿ ನಿತ್ಯ ಪೂಜಿಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುಂಡಗೋಡ ಟಿಬೆಟಿಕಾಲೋನಿಯ ಕ್ಯಾಂಪ್ ನಂ.1ರ ಶೆರ ಗಾದೆನ್ ಬೌದ್ಧಮಠದ ಹಿರಿಯ ಬೌದ್ಧ ಸನ್ಯಾಸಿ ಯೇಷಿ ಪೊನತ್ಸೊ(90 ವರ್ಷ) ಕಳೆದ ದಿ.9ರಂದು ನಿಧನರಾಗಿದ್ದಾರೆ.
ಮಂಚದ ಮೇಲೆ ಮಲಗಿರುವ ಸ್ಥಿತಿಯಲ್ಲಿರುವ ಮೃತದೇಹವನ್ನು ಹಿರಿಯ ಬೌದ್ದ ಬಿಕ್ಕುಗಳು ಆಗಾಗ ಪರೀಕ್ಷಿಸುತ್ತಿದ್ದಾರೆ. ಕೋಣೆಯಲ್ಲಿ ದೀಪಗಳನ್ನು ಹಚ್ಚಿ ಪ್ರಾರ್ಥಿಸುತ್ತಿದ್ದಾರೆ. ಕೋಣೆಯೊಳಗೆ ಹಿರಿಯ ಬಿಕ್ಕುಗಳು ಮಾತ್ರ ಒಳ ಹೋಗಿ ಆತ್ಮ ಹೋಗಿದೆಯೆ? ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ಕಿರು ಪರಿಚಯ : ಟಿಬೆಟನ ಖಾಮಚಾತಿಂಗ್ ಎಂಬಲ್ಲಿ ಜನಿಸಿದ್ದ ಬೌದ್ಧ ಸನ್ಯಾಸಿ ಯೇಷಿ ಅವರು, 1959ರಲ್ಲಿ ಭಾರತಕ್ಕೆ ಬಂದು, ವಾರಣಾಸಿಯಲ್ಲಿ 20 ವರ್ಷಗಳ ಕಾಲ ಬೌದ್ದತತ್ವದ ಅಭ್ಯಾಸ, ಬೋಧನೆ ಮಾಡಿದ್ದರು. ನಂತರ ಮುಂಡಗೋಡ ಟಿಬೆಟಿಕಾಲೋನಿಯ ಬೌದ್ಧಮಠದಲ್ಲಿ ಹಿರಿಯ ಬೌದ್ಧ ಗುರುಗಳಾಗಿ ಮಾರ್ಗದರ್ಶನ ನೀಡುತ್ತಿದ್ದರು.
ಹಿರಿಯ ಬೌದ್ಧ ಸನ್ಯಾಸಿಗಳು ದೇಹವನ್ನು ಪರೀಕ್ಷಿಸುತ್ತಾರೆ. ದೇಹದಿಂದ ದುರ್ವಾಸನೆ ಬೀರುವುದು ಕಂಡುಬಂದರೆ ಆತ್ಮ ದೇಹವನ್ನು ತ್ಯಜಿಸಿದಂತೆ ಎಂಬ ನಂಬಿಕೆಯಿದೆ. ನಂತರವಷ್ಟೇ ಮೃತ ಬೌದ್ಧ ಸನ್ಯಾಸಿ ಯೇಷಿ ಅವರ ಅಂತ್ಯಕ್ರಿಯೆಗೆ ದಿನ ನಿಗದಿಪಡಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ಬೌದ್ಧ ಬಿಕ್ಕು ಖೆಸಾಂಗ್ ಹೇಳುತ್ತಾರೆ.
ಕಳೆದ 10 ವರ್ಷಗಳ ಹಿಂದೆ, 6 ವರ್ಷಗಳ ಹಿಂದೆ ಮತ್ತು 4 ವರ್ಷಗಳ ಹಿಂದೆ ಟಿಬೆಟಿಕಾಲೋನಿಯಲ್ಲಿ ಹಿರಿಯ ಬೌದ್ಧ ಸನ್ಯಾಸಿಗಳು ಮೃತಪಟ್ಟಾಗ 15 ದಿನಗಳ ಕಾಲ 1 ತಿಂಗಳ ಕಾಲದವರೆಗೆ ದೇಹದಿಂದ ಆತ್ಮ ಹೋಗಿಲ್ಲ ಎಂಬ ನಂಬಿಕೆಯಲ್ಲಿ ಪೂಜೆ ಸಲ್ಲಿಸಲಾಗಿತ್ತು. ನಂತರ ದೇಹದಿಂದ ದುರ್ವಾಸನೆ ಬಂದನಂತರ ಅಂತ್ಯಕ್ರಿಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಟಿಬೆಟನ್ ಬೌದ್ಧಧರ್ಮದಲ್ಲಿ ಹಿರಿಯ ಬೌದ್ಧ ಸನ್ಯಾಸಿಗಳು ಮೃತಪಟ್ಟಾಗ ಆತ್ಮ ಹೋಗುವವರೆಗೂ ಅಥವಾ ಮೂಗು, ಬಾಯಿಯಿಂದ ದ್ರವ ಬರುವವರೆಗೂ ಇನ್ನೂ ಜೀವಂತ ಇದ್ದಾರೆ ಎಂಬ ನಂಬಿಕೆ ನಮ್ಮದು ಎಂಬುದು ಹಲವು ಬೌದ್ಧ ಬಿಕ್ಕುಗಳ ಅಭಿಪ್ರಾಯವಾಗಿದೆ.