ಡ್ರಗ್ಸ್‌ ಕೇಸ್‌ನಲ್ಲಿ ಶಾರುಖ್‌ ಪುತ್ರ ಎನ್‌ಸಿಬಿ ಬಲೆಗೆ ಬಿದ್ದಿದ್ದೇ ರೋಚಕ- ಹಡಗಿನಲ್ಲಿ ಗುಟ್ಟುಗುಟ್ಟಾಗಿ ನಡೆದಿದ್ದೇನು?

Spread the love

ಮುಂಬೈ: ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಕಾರ್ಡಿಲಿಯಾ ಕ್ರೂಸ್​ ಎಂಪ್ರೆಸ್​ ಹಡಗಿನ ಒಳಗೆ ಶನಿವಾರ ನಡೆಯುತ್ತಿದ್ದ ರೇವ್‌ ಪಾರ್ಟಿಯ ಮೇಲೆ ನಾರ್ಕೋಟಿಕ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ತಂಡ ದಾಳಿ ನಡೆಸಿ ಶಾರುಖ್‌ ಖಾನ್‌ ಪುತ್ರ ಆರ್ಯನ್​ ಖಾನ್​ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಿದೆ. ಇದರಲ್ಲಿ ಇನ್ನೂ ಹಲವು ನಟರು ಇದ್ದು ಅವರ ಹೆಸರುಗಳನ್ನು ಅಧಿಕಾರಿಗಳು ಗೋಪ್ಯವಾಗಿರಿಸಿದ್ದಾರೆ.

ಈ ಸಂದರ್ಭದಲ್ಲಿ ಕ್ರೂಸ್‌ನಲ್ಲಿ ಪಾರ್ಟಿ ಮಾಡಲು ತಂದಿದ್ದ ಕೊಕೇನ್​, ಹಶೀಶ್​ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆಯೇ ಪರೀಕ್ಷೆ ಮಾಡಿದಾಗ ಆರ್ಯನ್‌ ಖಾನ್‌ ಚರಸ್‌ ಸೇವನೆ ಮಾಡಿರುವುದು ಬೆಳೆಕಿಗೆ ಬಂದಿದೆ.

ಸಿಕ್ಕಿಬಿದ್ದಿದ್ದೇ ರೋಚಕ:
ಕ್ರೂಸ್‌ನಲ್ಲಿ ಈ ರೀತಿ ದಾಳಿ ನಡೆದಿರುವುದು ಇದೇ ಮೊದಲು. ರೇವ್‌ ಪಾರ್ಟಿ ಮಾಡುವ ಜಾಗಗಳ ಮೇಲೆ ಅಧಿಕಾರಿಗಳು ರೇಡ್‌ ಮಾಡುವುದನ್ನು ಅರಿತಿದ್ದ ಈ ನಟರು ಕ್ರೂಸ್‌ ತಮಗೆ ಸೇಫ್‌ ಎಂದುಕೊಂಡು ಪಾರ್ಟಿ ಆಯೋಜಿಸಿದ್ದರು. ಆದರೆ ಇದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದೇ ರೋಚಕ. ಅಷ್ಟಕ್ಕೂ ಆಗಿದ್ದೇನೆಂದರೆ, ರೇವ್‌ ಪಾರ್ಟಿ ನಡೆಯುತ್ತಿದ್ದುದು ಎನ್‌ಸಿಬಿ ಅಧಿಕಾರಿಗಳಿ 15 ದಿನಗಳ ಮುನ್ನವೇ ಸುಳಿವು ಸಿಕ್ಕಿತ್ತು. ಆದರೆ ಅದರಲ್ಲಿ ಯಾರು ಭಾಗಿಯಾಗುತ್ತಿದ್ದಾರೆ ಎಂದು ತಿಳಿದಿರಲಿಲ್ಲ. ಖದೀಮರಿಗಾಗಿ ಅವರು ಮೊದಲೇ ಬಲೆ ಬೀಸಿದ್ದರು.

ಆದ್ದರಿಂದ ಡ್ರಗ್ಸ್‌ ಸೇವನೆ ಮಾಡುವ ಅತಿಥಿಗಳ ಸೋಗಿನಲ್ಲಿ ಕ್ರೂಸ್‌ ಹಡಗು ಏರಿದ್ದರು ಎನ್‌ಸಿಬಿ ಸಿಬ್ಬಂದಿ. ದಾಳಿ ವೇಳೆ ಸೆಲೆಬ್ರಿಟಿಗಳು, ಅವರ ಸಂಬಂಧಿಕರನ್ನು ಕಂಡು ಖುದ್ದು ಅಧಿಕಾರಿಗಳೇ ಶಾಕ್‌ ಆಗಿದ್ದಾರೆ. ಈ ಪಾರ್ಟಿಗೆ ಎಂಟ್ರಿ ಫೀ 80 ಸಾವಿರ ರೂಪಾಯಿ ಇದೆ!

ಪಾರ್ಟಿ ಆಯೋಜಿಸಿದ್ದ ಕಾಡೇಲಿಯಾ ಹಡಗು ಶನಿವಾರ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಮುಂಬೈ ತೀರದಿಂದ ಸಮುದ್ರಯಾನ ಆರಂಭಿಸಿತ್ತು. ಮೂರು ದಿನಗಳ ಪ್ರವಾಸದ ಬಳಿಕ ಅ.4ರಂದು ರಾತ್ರಿ ಮುಂಬಯಿಗೆ ಮರಳಲು ಯೋಜಿಸಲಾಗಿತ್ತು.

ಈ ನಡುವೆ ಕಾರ್ಡಿಲಿಯಾ ಕ್ರೂಸ್‌ ಶಿಪ್‌ ಮಾಲೀಕನನ್ನು ವಿಚಾರಿಸಿದಾಗ ರೇವ್‌ ಪಾರ್ಟಿಗೂ ನಮಗೂ ಸಂಬಂಧ ಇಲ್ಲವೆಂದಿದ್ದಾರೆ. ಸದ್ಯ ಆರ್ಯನನ್ನು ಅ.4ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಲಾಗಿದೆ. ‘ಪಠಾಣ್’ ಸಿನಿಮಾದ ಶೂಟಿಂಗ್‌ಗಾಗಿ ಶಾರುಖ್‌ ಸ್ಪೇನ್​ಗೆ ತೆರಳಬೇಕಿತ್ತು. ಆದರೆ, ಮಗ ಕಸ್ಟಡಿಯಲ್ಲಿ ಇರುವ ಕಾರಣ, ಶೂಟಿಂಗ್‌ ಕ್ಯಾನ್ಸಲ್‌ ಮಾಡಿದ್ದಾರೆ.