ಬಿಸಿಯೂಟ ಕಾರ್ಯಕರ್ತೆಯರು ಬಳೆ ತೊಡುವಂತಿಲ್ಲ ಎಂಬ ಆದೇಶ ಕೇಂದ್ರ ಸರ್ಕಾರದ್ದು: ಸಿಎಂ ಸ್ಪಷ್ಟನೆ

Spread the love

ಬೆಂಗಳೂರು: ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ ಎನ್ನುವ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ.

ವಾಸ್ತವದಲ್ಲಿ ಕೇಂದ್ರ ಸರ್ಕಾರ ಪೋಷಣ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿ, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ಷೀಟ್ ಮೂಲಕ​ ಸ್ಪಷ್ಟನೆ ನೀಡಿದ್ದಾರೆ.

ಬಿಸಿಯೂಟ ಕಾರ್ಯಕರ್ತೆಯರು ಬಳೆ ತೊಡುವಂತಿಲ್ಲ ಆದೇಶ ಕುರಿತ ಸ್ಪಷ್ಟನೆ

ಕಟೀಲ್ ಸಂಸದ ಸ್ಥಾನಕ್ಕೆ ಅಪಚಾರವಿದ್ದಂತೆ – ಕಾಂಗ್ರೆಸ್​: ಈ ಕುರಿತು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, ತಮ್ಮದೇ ಸರ್ಕಾರ ರೂಪಿಸುವ ನೀತಿ ನಿಯಮಗಳ ಬಗ್ಗೆ ಅರಿವಿಲ್ಲದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರು ಸಂಸದ ಸ್ಥಾನಕ್ಕೆ ಅಪಚಾರವಿದ್ದಂತೆ. ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಬಿಸಿಯೂಟದ ಕಾರ್ಯಕರ್ತೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಕೈಗೆ ಉಗುರುಬಣ್ಣ ಹಚ್ಚಬಾರದು, ಬಳೆ ತೊಟ್ಟಿರಬಾರದು ಎಂದು ಕೇಂದ್ರ ಸರ್ಕಾರ 2020ರಲ್ಲೇ ಆದೇಶ ಹೊರಡಿಸಿದೆ. ನಳಿನ್ ಕುಮಾರ್ ಕಟೀಲ್​ ಅವರೇ, ಆ ಬಳೆಯನ್ನು ತಾವು ಧರಿಸಿಕೊಳ್ಳಲೆಂದು ಮೋದಿಯವರು ಈ ಆದೇಶ ಹೊರಡಿಸಿದ್ದೇ?. ಹಿಂದೂ ಆಚರಣೆಗಳನ್ನು ಹತ್ತಿಕ್ಕಲು ಈ ಕ್ರಮ ಕೈಗೊಂಡರೇ? ಕಟೀಲ್ ಕೈಗೆ ಬಳೆ ತೊಟ್ಟು ಪ್ರತಿಭಟಿಸಲಿ ಎಂದು ಟೀಕಿಸಿದೆ.