Headlines

ಗಣೇಶನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಪೌರಾಣಿಕ ರೋಚಕ ಕಥೆ..!

Spread the love

@ ರಾಜಶೇಖರ ನಾಯ್ಕ
ಯಾವುದೇ ರೀತಿಯ ಶುಭ ಕಾರ್ಯಗಳು ನಿರ್ವಿಘ್ನವಾಗಿ ಆಚರಣೆ ಮಾಡುವುದಕ್ಕಾಗಿಯೇ ಮೊದಲು ಗಣೇಶನನ್ನು ಪೂಜಿಸುತ್ತಾರೆ. ಪೂಜಾ ಸಂದರ್ಭದಲ್ಲಿ ಒಂದೆರಡು ಗರಿಕೆಗಳನ್ನು ಇಡುವ ಪದ್ಧತಿ ಇದೆ.
ಈ ಗರಿಕೆಯನ್ನು ಪೂಜಾ  ಕೈಂಕರ್ಯಕ್ಕೆ  ಬಳಸುವುದಕ್ಕೂ ಒಂದು ಕಾರಣವಿದೆ. ಅದೇನು ಅಂತಿರಾ..? ಹಾಗಿದ್ದರೆ ಮುಂದೆ ಓದಿ…

ಒಂದು ಸಾರಿ ಯಮಲೋಕದಲ್ಲಿ ಉತ್ಸವ ನಡೆದಿತ್ತು. ಉತ್ಸವದಲ್ಲಿ ಅಪ್ಸರೆಯರು ಮತ್ತು ನರ್ತಕಿಯರು ನೃತ್ಯ ಮಾಡುತ್ತಿದ್ದರು. ತಿಲೋತ್ತೆಮೆ ನೃತ್ಯ ಕಂಡ ಯಮ ಮೋಹಿತನಾದನು. ಯಮ ಅನುರಕ್ತನಾದ ಪರಿಣಾಮ ತಿಲೋತ್ತಮೆಯ ಗರ್ಭದಲ್ಲಿ ಭಯಂಕರ, ಕ್ರೂರ ಮತ್ತು ವಿಕಾರವಾದ ಅನಲಾಸುರ ಎಂಬ ರಾಕ್ಷಸ ಹುಟ್ಟಿಕೊಂಡನು. ಅನಲಾಸುರ ಹೋದ ಸ್ಥಳದಲ್ಲಿ ಅಗ್ನಿ ನಿರ್ಮಾಣವಾಗಿ ಎಲ್ಲವೂ ಭಸ್ಮವಾಗುತ್ತಿತ್ತು. ಇಂತಹ ಭಯಂಕರ ರಾಕ್ಷಸ ದೇವತೆಗಳನ್ನು ಬೆನ್ನಟ್ಟಲು ಆರಂಭಿಸಿದ.
ಅನಲಾಸುರನಿಂದ ಭಯಭೀತರಾದ ದೇವತೆಗಳು ಗಜಾನನನ್ನು ಪ್ರಾರ್ಥಿಸಲು ಆರಂಭಿಸಿದರು. ಆಗ ಗಜಾನನ ಬಾಲ ರೂಪದಲ್ಲಿ ದೇವತೆಗಳ ಮುಂದೆ ಪ್ರತ್ಯಕ್ಷನಾಗಿ ಅನಲಾಸುರನನ್ನು ವಧೆ ಮಾಡಲಾಗುವುದು ಎಂದು ಭರವಸೆ ನೀಡಿದನು. ಅಷ್ಟರಲ್ಲಿ ದಶ ದಿಕ್ಕುಗಳನ್ನು ಭಸ್ಮ ಮಾಡುತ್ತ ಅನಲಾಸುರ ದೇವತೆಗಳ ಬಳಿ ಬಂದನು. ಎಲ್ಲ ದೇವತೆಗಳು ಭಯಗೊಂಡು ಅತ್ತಿತ್ತ ಓಡಾಡ ತೊಡಗಿದರು. 

ಬಾಲಗಣೇಶ ಮಾತ್ರ ನಿಂತಲ್ಲಿಯೇ ನಿಂತಿದ್ದನು. ಗಜಾನನ ಬಳಿ ಬಂದ ಅನಲಾಸುರ ಬಾಲಗಣೇಶನನ್ನು ನುಂಗಲು ಮುಂದೆ ಬಂದನು. ಅಷ್ಟರಲ್ಲಿಯೇ ಬಾಲ ಗಣೇಶ ದೈತ್ಯ ರೂಪ ತಾಳಿ ಅನಲಾಸುರನ್ನು ನುಂಗಿ ಬಿಟ್ಟನು. ಸಾಕ್ಷಾತ್ ಅಗ್ನಿ ಸ್ವರೂಪನಾದ ಅನಲಾಸುರನನ್ನು ನುಂಗಿದ್ದರಿಂದ ಗಜಾನನ ಶರೀರದಲ್ಲಿ ದಾಹ ಉದ್ಭವಿಸಿತು.
ಗಣೇಶನ ಬಳಿ ಬಂದ ಸರ್ವ ದೇವತೆಗಳು ಆತನ ದಾಹವನ್ನು ಉಪಶಮನಿಸಲು ವಿವಿಧ ಉಪಾಯಗಳನ್ನು ಮಾಡಿದರು. ಇಂದ್ರದೇವ ಶೀತಲ ಚಂದ್ರ ಮತ್ತು ಅಮೃತವನ್ನು ಗಜಾನನ ತಲೆಯ ಮೇಲಿಟ್ಟರೂ ದಾಹ ಕಡಿಮೆಯಾಗಲಿಲ್ಲ. ಬ್ರಹ್ಮ ಸಿದ್ಧಿ ಮತ್ತು ಬುದ್ಧಿ ಎಂಬ ಮಾನಸ ಕನ್ಯೆಗಳನ್ನು ನೀಡಿದರೆ, ವಿಷ್ಣು ತನ್ನ ಕೈಯಲ್ಲಿದ್ದ ತಂಪಾದ ಕಮಲ ನೀಡಿದ. ವರುಣ ದೇವ ತಂಪಾದ ಜಲಾಭಿಷೇಕ ಮಾಡಿದ. ಪರಮೇಶ್ವರ ತನ್ನ ಶೇಷನಾಗನನ್ನು ಗಣೇಶನ ಹೊಟ್ಟೆಯ ಮೇಲೆ ಸುತ್ತಿದ. ದೇವತೆಗಳು ಎಲ್ಲಾ ರೀತಿಯಿಂದಲೂ ಉಪಾಯ ಮಾಡಿದರೂ ಗಜಾನನ ದಾಹ ಮಾತ್ರ ಕಡಿಮೆಯಾಗಲಿಲ್ಲ. 

ಕೊನೆಗೆ 88 ಸಹಸ್ರ ಮುನಿಗಳು 21 ಹಚ್ಚ ಹಸಿರಾದ ದ್ರುವ (ಗರಿಕೆ) ಗಣೇಶನ ಮಸ್ತಕದ ಮೇಲೆ ಸುರಿದರು. ಆಗ ಗಜಾನನ ದಾಹ ಕಡಿಮೆ ಆಯ್ತು. ಇದರಿಂದ ಗಣೇಶ ಪ್ರಸನ್ನಗೊಂಡು, ಅನೇಕ ಉಪಾಯದಿಂದ ನನ್ನ ಅಂಗದ ದಾಹ ಕಡಿಮೆ ಆಗಲಿಲ್ಲ. ದ್ರುವದಿಂದ ಮಾತ್ರ ನನ್ನ ಅಂಗದ ದಾಹ ಕಡಿಮೆ ಆಯ್ತು. ಇನ್ನ್ಮುಂದೆ ನನಗೆ ದ್ರುವ ಅರ್ಪಣೆ ಮಾಡುವವರಿಗೆ ಸಾವಿರಾರು ಯಜ್ಞ, ವ್ರತ, ತೀರ್ಥಯಾತ್ರೆ ಮತ್ತು ದಾನ ಮಾಡಿದ ಪುಣ್ಯ ಲಭಿಸಲಿದೆ ಎಂದು ಹೇಳಿದ. ಹೀಗಾಗಿ ಈಗಲೂ ಗಣಪತಿಗೆ ಗರಿಕೆಯನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದ್ರೆ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.