ಸರ್ಕಾರಿ ನೌಕರರ ‘ಸಾರ್ವತ್ರಿಕ ವರ್ಗಾವಣೆ’ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

Spread the love

ಬೆಂಗಳೂರು : ಕೊರೊನಾ ಕಾಲದಿಂದ ನೆನೆಗುದಿಗೆ ಬಿದ್ದಿದ್ದಂತ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ, ಮುಹೂರ್ತ ಫಿಕ್ಸ್ ಆಗಿದೆ. ದಿನಾಂಕ 22-07-2021ರೊಳಗೆ 2021-22ನೇ ಸಾಲಿಗೆ ಗ್ರೂಪ್-ಬಿ ಮತ್ತು ಗ್ರೂಪ್-ಸಿ ವರ್ಗದ ಅಧಿಕಾರಿ, ನೌಕರ ಸಾರ್ವತ್ರಿಕ ವರ್ಗಾವಣೆ ಮುಕ್ತಾಯಗೊಳಿಸುವಂತೆ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ  ತೇಜಾವತಿ ಎನ್ ನಡವಳಿ ಹೊರಡಿಸಿದ್ದು, ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ವಿಸ್ತೃತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಮಾತ್ರ ಸದರಿ ಮಾರ್ಗಸೂಚಿಗಳಲ್ಲಿರುವ ಷರತ್ತುಗಳಿಗೊಳಪಟ್ಟು ಮಾಡಬಹುದಾಗಿದೆ. ಕೋವಿಡ್-19 ಸಂಕಷ್ಟದ ಪರಿಸ್ಥಿತಿ ಈ ಸಾಲಿನಲ್ಲಿಯೂ ಮುಂದುವರೆದಿರುವುದರಿಂದ 2021-22ನೇ ಸಾಲಿಗೆ ಗ್ರೂಪ್-ಬಿ ಮತ್ತು ಗ್ರೂಪ್-ಸಿ ವರ್ಗದ ಅಧಿಕಾರಿ, ನೌಕರರಿಗೆ ಮಾತ್ರ ಅನ್ವಯವಾಗುವಂತೆ ಮಿತಿಗೊಳಿಸಿ, ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ನ್ನು ಮೀರದಂತೆ ದಿನಾಂಕ 22-07-2021ರೊಳಗೆ ಸಾರ್ವತ್ರಿಕ ವರ್ಗಾವಣೆ ಮುಕ್ತಾಯಗೊಳಿಸಲು, ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.