ಹುಬ್ಬಳ್ಳಿ : ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಹೊಸ ರೂಪದೊಂದಿಗೆ ತೆರೆದುಕೊಳ್ಳಲು ದಿನಗಣನೆ ಆರಂಭವಾಗಿದೆ. ಹಳೆ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನಾಮಫಲಕ ಜೋಡಣೆ ಸೇರಿದಂತೆ ಸಣ್ಣಪುಟ್ಟ ಕಾಮಗಾರಿಗಳು ಮುಗಿದಿವೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 2022ರಲ್ಲಿ ಪ್ರಾರಂಭಿಸಲಾಗಿತ್ತು. 3 ಎಕರೆ 7 ಗುಂಟೆ ಜಾಗದಲ್ಲಿ 42 ಕೋಟಿ ರೂ.ಯಲ್ಲಿ ನಿಲ್ದಾಣ ನಿರ್ಮಿಸಲಾಗಿದೆ. ಮೊದಲನೇ ಹಂತದಲ್ಲಿ ಬೇಸ್ಮೆಂಟ್, ಗ್ರೌಂಡ್ ಮಹಡಿ ಮತ್ತು 1ನೇ ಮಹಡಿ ಹೊಂದಿದ್ದು, ಹೈಟೆಕ್ ಆಗಿ ನಿರ್ಮಾಣ ಮಾಡಲಾಗಿದೆ.
ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇದ್ದ ಜಾಗವನ್ನು ಸದ್ಬಳಕೆ ಮಾಡಿಕೊಂಡು ಟ್ರಾಫಿಕ್ ಕಿರಿಕಿರಿಯಾಗದಂತೆ ಚನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಫ್ಲೈಓವರ್‌ಗೆ ಯಾವುದೇ ಅಡೆತಡೆಯಾಗದಂತೆ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ.
“ಬಸ್ ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಒಳಗಡೆಯ ಒಂದು ರೋಡ್ ಕೆಲಸ ಮಾತ್ರ ಬಾಕಿ ಉಳಿದಿದೆ. ಆ ರೋಡ್ ಕಾಮಗಾರಿ ಮುಗಿದ ತಕ್ಷಣ ಕೇಂದ್ರ ಮಂತ್ರಿಗಳಾದ ಪ್ರಲ್ಹಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರೊಂದಿಗೆ ಚರ್ಚಿಸಿ ಉದ್ಘಾಟನೆ ದಿನಾಂಕ ನಿಗದಿಪಡಿಸಲಾಗುವುದು” ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕ ರುದ್ರೇಶ ಗಾಳಿ ತಿಳಿಸಿದ್ದಾರೆ.
“ಬಸ್ ನಿಲ್ದಾಣದಲ್ಲಿ ಲಿಫ್ಟ್, ಎಕ್ಸಿಲೇಟರ್ ಇದೆ. 20 ಸಾವಿರ ಚದರಡಿ ವಾಣಿಜ್ಯ ಬಳಕೆಗೆ ಜಾಗ ಮೀಸಲಿದೆ. ಕೆಳ ಭಾಗದಲ್ಲಿ 200 ವಾಹನಗಳನ್ನು ನಿಲುಗಡೆ ಮಾಡುವಷ್ಟು ಪಾರ್ಕಿಂಗ್ ಜಾಗವಿದೆ. ಬಿಆರ್ಟಿಎಸ್ ಬಸ್ ನಿಲ್ದಾಣ, ಸಬ್ ಅರ್ಬನ್ ಬಸ್ ನಿಲ್ದಾಣ ಪ್ರತ್ಯೇಕವಾಗಿದೆ. ಅದರ ಜೊತೆಗೆ ಸಿಟಿ ಬಸ್ ನಿಲ್ದಾಣವಿದೆ. ಮೂರು ಮಹಡಿಯಲ್ಲೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ” ಎಂದು ಹೇಳಿದರು.
ಪ್ರಾಯೋಗಿಕ ಕಾರ್ಯಾಚರಣೆಯೂ ಪೂರ್ಣ:”ಬಸ್ ನಿಲ್ದಾಣದ ಎಲ್ಲಾ ಕೆಲಸಗಳು ಮುಕ್ತಾಯವಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ವಾಯುವ್ಯ ಸಾರಿಗೆ ಸಂಸ್ಥೆಯವರು ಬಸ್ಗಳನ್ನು ಓಡಿಸಿ ನೋಡಿದ್ದಾರೆ. ಅದರ ಜೊತೆಗೆ ಬಿಆರ್ಟಿಎಸ್ ಬಸ್‌ಗಳನ್ನು ಟ್ರಯಲ್ ರನ್ ಮಾಡಲಾಗಿದೆ. ಬಿಆರ್ಟಿಎಸ್ ಬಸ್ಗಳ ಉದ್ದ ಹೆಚ್ಚಾಗಿದೆ. ಬಿಆರ್ಟಿಎಸ್ ಟಿಕೆಟ್ ಕೌಂಟರ್‌ಗಳನ್ನು ಪರಿಶೀಲನೆ ಮಾಡಲಾಗಿದ್ದು ಬಿಆರ್ಟಿಎಸ್, ವಾಯುವ್ಯ ಸಾರಿಗೆ ಸಂಸ್ಥೆಯ ನಿರ್ದೇಶನದ ಮೇಲೆ ಸ್ಮಾರ್ಟ್ ಸಿಟಿ ಹಾಗೂ ವಾಯುವ್ಯ ಸಾರಿಗೆ ಇಂಜಿನಿಯರ್ಗಳು ಸ್ಥಳ ತನಿಖೆ ಮಾಡಿ ತಮಗೆ ಬೇಕಾದ ಅನುಕೂಲತೆಗಳನ್ನು ಮಾಡಿಕೊಂಡಿದ್ದು, ಉದ್ಘಾಟನೆಯೊಂದೇ ಬಾಕಿ ಉಳಿದಿದೆ” ಎಂದು ಮಾಹಿತಿ ನೀಡಿದರು.