ಹೊನ್ನಾವರ : ತಾಲೂಕಿನ ಗೇರುಸೊಪ್ಪಾ ಗ್ರಾಮದ ಪ್ರದೀಪ್ ಮಂಜುನಾಥ ನಾಯ್ಕ ಅವರು ವಿಶೇಷವಾದ ಕಲೆಯಲ್ಲಿ ಪರಿಣತಿ ಪಡೆದಿದ್ದಾರೆ. ಹೊನ್ನಾವರದ ಎಸ್.ಡಿ.ಎಮ್. ಕಾಲೇಜಿನಲ್ಲಿ ಪದವಿ ಪೂರೈಸಿರುವ ಇವರು ಪ್ರಸ್ತುತ ಬಿ.ಎಡ್.ಶಿಕ್ಷಣವನ್ನು ಕಾರವಾರದ ಶಿವಾಜಿ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರದೀಪ್ ಅವರಿಗೆ ಚಾಕ್ ಆರ್ಟ್ ಎಂದರೆ ಏನೋ ಸಂತಸ. ಹಾಗೆ ಅದನ್ನು ಮಾಡಬೇಕೆಂಬ ಹಂಬಲದಿಂದ ಕೆಲವು ವರ್ಷಗಳಿಂದ ಈ ಹವ್ಯಾಸ ಶುರುವಾಗಿದೆ.
ಮೊದ ಮೊದಲು ಇಂಗ್ಲಿಷ್ ನ ಅಕ್ಷರ ಕೆತ್ತುವ ಅಭ್ಯಾಸ ಮಾಡುತ್ತಾ ಹಾಗೆ ಕೆಲ ದಿನಗಳ ನಂತರ ತನ್ನ ಗೆಳೆಯರ ಹೆಸರು ಹಾಗೆ ಭಗತ್ ಸಿಂಗ್, ಬುದ್ಧ ಐಪಿಎಲ್ ಟವರ್, ಗಾಂಧೀಜಿ ಮುಂತಾದವುಗಳನ್ನು ಮಾಡುತ್ತಾ ಆ ಕಲೆಯಲ್ಲಿ ಖುಷಿಯನ್ನು ಕಂಡವರು. ಹದಿನೇಳು ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆಯನ್ನು ಮತ್ತು ಒಂದು ಚಾಕ್ ಪೀಸ್ ನಲ್ಲಿ ರವೀಂದ್ರನಾಥ್ ಠಾಗೋರ್ ಅವರು ರಚಿಸಿದ ರಾಷ್ಟ್ರಗೀತೆ ಹೆಸರನ್ನು ಕೇವಲ 18 ತಾಸುಗಳ ಕಾಲ ಕೆತ್ತಿ ಅದನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಕಳುಹಿಸಿದರು. ಅವರು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ ಪ್ರದೀಪ್ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಚಾಕ್ ಪೀಸ್ ಆರ್ಟಿಸ್ಟ್ ಪ್ರದೀಪ್ ಮಾತನಾಡಿ, ಕಾಲೇಜಿನ ರಜಾ ಅವಧಿಯಲ್ಲಿ ಅದರಲ್ಲೂ ತೌಕ್ತೆ ಚಂಡ ಮಾರುತದ ಸಮಯದಲ್ಲಿ ಆನ್ಲೈನ್ ಕ್ಲಾಸ್ ಇರಲಿಲ್ಲ. ಇನ್ನೇನಾದರೂ ಮಾಡಬೇಕು ಎನ್ನುವ ಕುತೂಹಲವಿತ್ತು. ಹಾಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನ ಸಾಧಕರನ್ನು ನೋಡಿ ನಾನು ಏನಾದರೂ ಮಾಡಬೇಕು ಎಂದು ಈ ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆ ಬರೆದು ಸಾಧನೆ ಮಾಡಿದೆ ಎಂದರು.
ಪ್ರದೀಪ್ ಸಾಧನೆ ಇಷ್ಟು ಮಾತ್ರವಲ್ಲ,ಸಂಗೀತ,ತಬಲಾ,ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಚಿತ್ರಕಲೆ ಮತ್ತು ಸಂಗೀತ ಬಾಲ್ಯದಿಂದ ಬಳುವಳಿಯಾಗಿ ಇವರಿಗೆ ಒಲಿದಿದೆ. ಸಂಗೀತವನ್ನು ಹೊನ್ನಾವರದ ಎಸ್.ಡಿ.ಎಮ್. ಕಾಲೇಜಿನಲ್ಲಿ ಕಲಿತು ಸತತ ಮೂರು ವರ್ಷದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಾಗೆ ಚಿತ್ರಕಲೆಯಲ್ಲಿ ತನ್ನ ಗೆಳೆಯರ ಚಿತ್ರ,ಕಲಿಸಿದ ಗುರುಗಳ,ಸಿನೆಮಾ ನಟರ ಚಿತ್ರ ಮತ್ತು ಅನೇಕ ಚಿತ್ರಗಳನ್ನು ಬಿಡಿಸುತ್ತಾ ಬಿಡುವಿನ ಸಮಯವನ್ನು ಇನ್ನಿತರ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ಕಲೆಗೆ ಗೆಳೆಯರು ಕಲಾನಿಧಿ ಪ್ರದೀಪ್ ಎಂದು ಕರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಗೀತದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕೆನ್ನುವ ಆಸೆ ಇವರಿಗಿದೆ. ನನ್ನ ಈ ಸಾಧನೆಗೆ ತಂದೆ ಮಂಜುನಾಥ ನಾಯ್ಕ ತಾಯಿ ಚಂದ್ರಕಲಾ,ಕುಟುಂಬದವರು ಹಾಗೂ ನನ್ನ ಗುರುಗಳು ಕಾರಣ ಎಂದು ಪ್ರದೀಪ್ ನಾಯ್ಕ ಸ್ಮರಿಸಿಕೊಳ್ಳುತ್ತಾರೆ.