ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ: ಸಿಎಂ ಬೊಮ್ಮಾಯಿ

Spread the love

ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿಯಾಗಿ ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಹುಬ್ಬಳ್ಳಿ ನನ್ನ ಇಷ್ಟದ ಊರು, ನಾನು ಹುಬ್ಬಳ್ಳಿಯಲ್ಲಿಯೇ ಹುಟ್ಟಿ ಬೆಳೆದವನು, ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಮುಖ್ಯಮಂತ್ರಿಯಾಗಿ ಅಗತ್ಯ ಪ್ರಾಶಸ್ತ್ಯ ನೀಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹೇಳಿದರು.

ನಿನ್ನೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದು ಪ್ರವಾಹ ಪೀಡಿತ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಹುಬ್ಬಳ್ಳಿಯಲ್ಲಿ ನನಗೆ ದೊಡ್ಡ ಸ್ನೇಹಿತರ ಬಳಗವೇ ಇದೆ,ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇಲ್ಲಿಯವರೇ. ಅವರೆಲ್ಲರ ಪ್ರೀತಿ, ಆಶೀರ್ವಾದ ಪಡೆದು ನಾನು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತೇನೆ ಎಂದರು.

ಕೇಂದ್ರ ನಾಯಕರಾದ ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಅವರ ನಿರ್ಣಯಗಳಿಂದಾಗಿ ಇಂದು ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ನಾಳೆ ದೆಹಲಿಗೆ ಹೋಗಿ ಅವರ ಬಳಿ ಚರ್ಚಿಸುತ್ತೇನೆ, ಅವರ ಸಹಕಾರ, ವಿಶ್ವಾಸ ಪಡೆದು ಅಧಿಕಾರ ನಡೆಸುತ್ತೇನೆ ಎಂದರು.

ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಯ ನವನಗರದಲ್ಲಿರುವ ತಮ್ಮ ತಂದೆ ದಿವಂಗತ ಎಸ್ ಆರ್ ಬೊಮ್ಮಾಯಿಯವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ನಂತರ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ.

ಶೆಟ್ಟರ್ ಜೊತೆ ಚರ್ಚೆ: ನೂತನ ಸಚಿವ ಸಂಪುಟದಲ್ಲಿ ಸಚಿವನಾಗಿ ಸೇರ್ಪಡೆಯಾಗುವುದಿಲ್ಲ ಎಂದು ಹಿರಿಯ ನಾಯಕ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದಾಗ ಶೆಟ್ಟರ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಅವರ ಜೊತೆ ನಿನ್ನೆಯೇ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ, ನಾನೇ ಖುದ್ದಾಗಿ ಬಂದು ವೈಯಕ್ತಿಕವಾಗಿ ನಿಮ್ಮ ಬಳಿ ಮಾತನಾಡುತ್ತೇನೆ ಎಂದಿದ್ದಾರೆ, ಶೆಟ್ಟರ್ ಅವರು ನನಗೆ ಆತ್ಮೀಯರು, ಬೇರೆ ಬೇರೆ ಪಕ್ಷದಲ್ಲಿದ್ದಾಗಿನಿಂದಲೂ ನಾವು ಸ್ನೇಹಿತರಾಗಿದ್ದೆವು. ಅವರ ಬಳಿ ಚರ್ಚಿಸಿ ಅವರ ಸಮಸ್ಯೆ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದರು.

ನಾಳೆ ದೆಹಲಿಗೆ: ನಾಳೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಅವರ ಶುಭ ಹಾರೈಕೆ, ಸಹಕಾರವನ್ನು ಸಿಎಂ ಆಗಿ ಆಡಳಿತ ನಡೆಸಲು ಕೇಳಿಕೊಳ್ಳುತ್ತೇನೆ. ನಂತರದ ಭೇಟಿಯಲ್ಲಿ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸುತ್ತೇನೆ, ಇನ್ನೆರಡು ಮೂರು ದಿನಗಳಲ್ಲಿ ಬಹುಶಃ ಸಂಪುಟ ರಚನೆಯಾಗಬಹುದು ಎಂದರು.