ತನ್ನ ವಿರುದ್ಧವೇ ತನಿಖೆ ನಡೆಸಲು ಲೋಕಾಯುಕ್ತರಿಗೆ ಪತ್ರ ಬರೆದ ಕೋಟಾ ಶ್ರೀನಿವಾಸ ಪೂಜಾರಿ

Spread the love

ಉಡುಪಿ : ಸರಳ ಸಜ್ಜನಿಕೆಯಿಂದ ರಾಜ್ಯದ ಜನರ ಗಮನ ಸೆಳೆದಿರುವ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಮೇಲೆ ಆದಾಯಕ್ಕಿಂತ ಹೆಚ್ಚು ಗಳಿಕೆಯ ಟೀಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿದೆ.

ಕೋಟಾ ಶ್ರೀನಿವಾಸ ಪೂಜಾರಿಯವರು 6 ಕೋಟಿ ಮೌಲ್ಯದ ಮನೆಯನ್ನು ಕಟ್ಟಿಸುತ್ತಿದ್ದು, ಇದು ಸಾಮಾನ್ಯ ರಾಜಕಾರಣಿಯ ಲಕ್ಷಣ ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯವರ ಅರು ಕೋಟಿಯ ಮನೆ ಅಂತಾ ಸುದ್ದಿ ಹರಡಲಾಗುತ್ತಿದ್ದು, ಈಗ ಈ ಎಲ್ಲಾ ವಿಚಾರಗಳಿಗೆ ಸ್ವತಃ ಕೋಟಾ ಶ್ರೀನಿವಾಸ್ ಪೂಜಾರಿ ಉತ್ತರ ನೀಡಿದ್ದಾರೆ.

ನೇರವಾಗಿ ಲೋಕಾಯುಕ್ತ ನ್ಯಾಯಾಧೀಶರಿಗೆ ನನ್ನ ಆಸ್ತಿ ಮೇಲೆ ತನಿಖೆ ಮಾಡಿ ಎಂದು ಮನವಿ ಪತ್ರ ಬರೆಯುವ ಮೂಲಕ ತನ್ನ ಜೀವನ ಪಾರದರ್ಶಕ ಎಂಬುವುದನ್ನು ನಿರೂಪಿಸಿದ್ದಾರೆ.‌

ಸಾಮಾಜಿಕ ಜಾಲತಾಣದಲ್ಲಾಗುತ್ತಿರುವ ಅಪಪ್ರಚಾರದ ಬಗ್ಗೆ ಬೇಸರ ಮೂಡಿಸಿರುವ ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಮೇಲೆಯೇ ತನಿಖೆ ಮಾಡುವಂತೆ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಗೆ ಪತ್ರ ಬರೆದಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ ಬರೆದಿರುವ ಪತ್ರದಲ್ಲೇನಿದೆ!?

“ನಾನು ಮೂರು ಬಾರಿ ವಿಧಾನ ಪರಿಷತ್ ಶಾಸಕನಾಗಿ ಆಯ್ಕೆಯಾಗಿದ್ದು, ಎರಡು ಬಾರಿ ಸಂಪುಟ ದರ್ಜೆಯ ಮಂತ್ರಿಯಾಗಿದ್ದೇನೆ. ಪ್ರತಿ ವರ್ಷ ಲೋಕಾಯುಕ್ತರಿಗೆ ಆಸ್ತಿಪಾಸ್ತಿಯ ವಿವರ ನೀಡುತ್ತಿದ್ದೇನೆ.”

“ನಾನು ಎರಡು ವರ್ಷದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಗಿಳಿಯಾರು ಗ್ರಾಮದಲ್ಲಿ ಮನೆ ಕಟ್ಟುತ್ತಿದ್ದು, ಜಾಗದ ತಕರಾರಿನಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದು, ಮನೆ ನಿರ್ಮಾಣ ಸ್ಥಗಿತವಾಗಿದೆ.”

“ನನ್ನ ಮಗ ಎಂಬಿಎ ಮುಗಿಸಿ ಸ್ವಂತ ಉದ್ದಿಮೆ ನಡೆಸುತ್ತಿದ್ದು, ಇಬ್ಬರು ಪುತ್ರಿಯರ ವಿದ್ಯಾಭ್ಯಾಸ ಅಂತಿಮ ಹಂತದಲ್ಲಿದೆ. ನನ್ನ ಮಗನ ಸ್ವಂತ ದುಡಿಮೆ ಮತ್ತು ನನ್ನ ದುಡಿಮೆಯ ಹಣದಲ್ಲಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣವಾಗುತ್ತಿದೆ.”

“ಮನೆ ನಿರ್ಮಾಣಕ್ಕಾಗಿ ಎರಡು ವರ್ಷಗಳ ಹಿಂದೆ ಅಪೆಕ್ಸ್ ಬ್ಯಾಂಕಿನಲ್ಲಿ 35 ಲಕ್ಷ ಸಾಲ ಪಡೆದು ಸಂಬಳ ಮತ್ತು ಗೌರವ ಧನದ ಮೂಲಕ ಸಾಲ ಮರುಪಾವತಿ ಮಾಡಿದ್ದೇನೆ. ಮನೆ ಕಟ್ಟಲು ಹಣ ಕಡಿಮೆಯಾಗಿರುವುದರಿಂದ ಮತ್ತೆ ಬ್ರಹ್ಮಾವರದ ವಾರಂಬಳ್ಳಿ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ 40 ಲಕ್ಷ ಸಾಲಕ್ಕಾಗಿ ದಾಖಲಾತಿಗಳನ್ನು ನೀಡಲಾಗಿದೆ.”

“ಹದಿಮೂರು ಸೆಂಟ್ಸ್‌ನಲ್ಲಿ‌ ನಿರ್ಮಾಣವಾಗುತ್ತಿರುವ ಮನೆ 60 ಲಕ್ಷ ರೂಪಾಯಿ ವೆಚ್ಚದ್ದಾಗಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಇದು ಆರು ಕೋಟಿ ರೂಪಾಯಿ ಮೌಲ್ಯದ ಮನೆ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನನ್ನ ಆದಾಯ ಮತ್ತು ಮನೆಯನ್ನು ಪರಿಶೀಲಿಸಿ, ಆದಾಯಕ್ಕಿಂತ ಹೆಚ್ಚು ವೆಚ್ಚದ ಮನೆಯಾಗಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳಬೇಕು. ನನ್ನ ಆದಾಯದ ವ್ಯಾಪ್ತಿಯಲ್ಲೇ ಮನೆ ನಿರ್ಮಾಣ ಆಗಿದ್ದರೆ, ಅಪಪ್ರಚಾರದ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತಿದ್ದೇನೆ,” ಎಂದು ಕೋಟಾ ಶ್ರೀನಿವಾಸ ಪೂಜಾರಿ ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಇದರ ನಡುವೆ ಕೋಟಾ ಶ್ರೀನಿವಾಸ ಪೂಜಾರಿ ಬಗ್ಗೆ ಪರ ವಿರೋಧದ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಆರು ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ ವಿಚಾರವಾಗಿ ತನ್ನ ಮೇಲೆಯೇ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಪತ್ರ ಬರೆದ ಕೋಟಾ ಶ್ರೀನಿವಾಸ ಪೂಜಾರಿಯ ನಡೆ ಅಚ್ಚರಿಯ ಜೊತೆಗೆ ಮಾದರಿಯ ನಡೆಯಾಗಿದೆ. ಈ ಪ್ರಕರಣದ ಕುರಿತು ಇನ್ನು ಲೋಕಾಯುಕ್ತ ನ್ಯಾಯಮೂರ್ತಿ ತನಿಖೆ ಕೈಗೊಳ್ಳಬೇಕಿದೆ.

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋಟಾ ಶ್ರೀನಿವಾಸ ಪೂಜಾರಿ ಮುಜರಾಯಿ ಇಲಾಖೆ ಸಚಿವರಾಗಿದ್ದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಕೋಟಾ ಶ್ರೀನಿವಾಸ ಪೂಜಾರಿಯವರೂ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.

ಸದ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಕೋಟಾ ಶ್ರೀನಿವಾಸ ಪೂಜಾರಿಗೆ ಮತ್ತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕು.