ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದೆ. ಆದರೆ, ಇಂತಹ ಗೊಡ್ಡು ಹೆದರಿಕೆ-ಬೆದರಿಕೆಗಳಿಗೆ ಬಗ್ಗುವ ಮಾತೇ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಗುರುವಾರ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಛೀಮಾರಿ ಹಾಕಿದ ಅವರು,“ ವಾಲ್ಮೀಕಿ ನಿಗಮದ ಹಗರಣ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ವಿಚಾರಣೆಗೊಳಪಟ್ಟವರ ಮೇಲೆ ದಬಾವಣೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಉನ್ನತ ಮಟ್ಟದಲ್ಲಿರುವವರೂ ಸಹ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದ ಕಗ್ಗೊಲೆಗೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ಪಕ್ಷ ಆ ನಿಲುವಿನಲ್ಲಿ ದೃಢವಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಹೆದರಿಕೆ ಬೆದರಿಕೆ ದಬ್ಬಾಳಿಕೆಗೆ ನಾವು ಬಗ್ಗಲ್ಲ. ದೇಶದ ಜನ ಎರಡು ತಿಂಗಳ ಹಿಂದೆ ಅವರಿಗೆ ಪಾಠ ಕಲಿಸಿದ್ದರು. ಇನ್ನೂ ಪಾಠ ಕಲಿಯದಿರುವುದು ದುರಂತ. ಅವರ ಅವನತಿಗೆ ಅವರೇ ಗುಳಿ ತೋಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಚಿವರಾದ ಕೆಜೆ ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಇದ್ದರು.