ಇಂಡಿಯಾ ಸ್ಕೆಟ್ ಗೇಮ್ಸನಲ್ಲಿ ಪ್ರತಿನಿಧಿಸಿದ ಜಿಲ್ಲೆಯ ಮೂವರಿಗೆ ಬೆಳ್ಳಿ ಪದಕ..!

Spread the love

ಯಲ್ಲಾಪುರ : ಆ.7 ರಿಂದ 11 ರ ವರೆಗೆ  ತಮಿಳುನಾಡಿನ ಕೊಯಮತ್ತೂರ ನಲ್ಲಿ ನಡೆದ ಇಂಡಿಯಾ ಸ್ಕೆಟ್ ಗೇಮ್ಸ 2024-ಚಾಂಪಿಯನ್ಷಿಪ್ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಸ್ಕೇಟರ್ಸ್ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. 

ವಿಶೇಷವಾಗಿ ಯಲ್ಲಾಪುರ ತಾಲೂಕಿನಿಂದ ಪ್ರತಿನಿಧಿಸಿದ ಪಟ್ಟಣದ ವಾಯ್.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೇಜಲ್ ಸತೀಶ ನಾಯ್ಕ, ಕರ್ನಾಟಕ ರಾಜ್ಯ ಸಿನಿಯರ್ ಮಹಿಳಾ ಡರ್ಬಿ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆಯುವ ಮೂಲಕ ತಾಲೂಕಿನ ಗೌರವ ಹೆಚ್ಚಿಸಿದ್ದಾರೆ. ಸೇಜಲ್ ಸತೀಶ್ ನಾಯ್ಕ ಪ.ಪಂ ಸದಸ್ಯ ಸತೀಶ್ ನಾಯ್ಕ ಪುತ್ರಿಯಾಗಿದ್ದು ಈ ಹಿಂದೆಯೂ ರಾಷ್ಟ್ರಮಟ್ಟದ ಸ್ಕೇಟಿಂಗ್‌ನಲ್ಲಿ ಭಾಗವಹಿಸಿ ಪದಕ ಬೇಟೆಯಾಡಿದ್ದಳು.ಇವಳೊಂದಿಗೆ ಶಿರಸಿಯ ಎಮ್.ಈ.ಎಸ್ ಕಾಲೇಜಿನ  ಅನಘಾ ರಮೇಶ ಹೆಗಡೆ,  ದಾಂಡೇಲಿಯ ಸಾನಿಕಾ ಉಮೇಶ ತೊರತ್ ತಂಡದಲ್ಲಿದ್ದು ಪದಕಕ್ಕೆ ಭಾಜನರಾಗಿದ್ದಾರೆ.
ಕರ್ನಾಟಕ, ತಮಿಳನಾಡು , ಯುಪಿ, ಓರಿಸ್ಸಾ , ತಮಿಳನಾಡು-ಬಿ, ಮಹಾರಾಷ್ಟ ಇನ್ನಿತರ ರಾಜ್ಯದ ತಂಡಗಳು ಪಂದ್ಯಾವಳಿಯಲ್ಲಿ ಬಾಗವಹಿಸಿದ್ದರು.
ಈ ಮೂವರು ಕೈಗಾ ರೊಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ  ತರಬೇತಿಯನ್ನು ಪಡೆಯುತ್ತಿದ್ದು ಸತತ ನಾಲ್ಕನೆ ಬಾರಿ ಕರ್ನಾಟಕ ತಂಡಕ್ಕಾಗಿ ಆಡುತ್ತಿದ್ದಾರೆ ಎಂದು ತರಬೇತುದಾರ ದೀಲಿಪ್ ಹಣಬರ್ ಹಾಗು ಸಹಾಯಕ ತರಬೇತುದಾರರಾದ  ಮಂಜಪ್ಪಾ ನಾಯ್ಕ ತಿಳಿಸಿದ್ದಾರೆ.
ಸೇಜಲ್ ಸತೀಶ್ ನಾಯ್ಕ ಸಾಧನೆಗೆ ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ, ಹಿರಿಯ ಕ್ರೀಡಾಪಟುಗಳು, ಜನಪ್ರತಿನಿಧಿಗಳು, ಊರ ನಾಗರೀಕರು ಪ್ರಶಂಶಿಸಿದ್ದಾರೆ.