ದೇಶಿ ಕ್ರೀಡೆಯಾದ ಕುಸ್ತಿಗೆ ಎರಡು ಗುಂಟೆ ಜಾಗವನ್ನು ಮಂಜೂರಿ ಮಾಡುವಂತೆ ಮನವಿ

Spread the love

ಮುಂಡಗೋಡ : ಮುಂಡಗೋಡ ಪಟ್ಟಣದಲ್ಲಿ ದೇಶಿ ಕ್ರೀಡೆಯಾದ ಕುಸ್ತಿಗೆ ಎರಡು ಗುಂಟೆ ಜಾಗವನ್ನು ಮಂಜೂರಿ ಮಾಡುವಂತೆ ಮುಂಡುಗೋಡ ತಹಶೀಲ್ದಾರರಿಗೆ ಮತ್ತು ಪ.ಪಂ. ಮುಖ್ಯಾಧಿಕಾರಿಗಳಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ಆಶ್ರಯದಲ್ಲಿ ಇಂದು ಮನವಿ ಅರ್ಪಿಸಲಾಯಿತು. 

ದೇಶಿ ಕ್ರೀಡೆಯಾದ ಕುಸ್ತಿಯು ಇಂದು ಅಳಿವಿನಂಚಿನಲ್ಲಿದೆ. ಇದಕ್ಕೆ ಬೇಕಾದ ತರಬೇತುದಾರರು ಮತ್ತು ಗರಡಿ ಮನೆಗಳ ಅಭಾವದಿಂದಾಗಿ ನಮ್ಮ ದೇಶಿಯ ಕ್ರೀಡೆಯಾದ ಕುಸ್ತಿಯು ನಶಿಸಿ ಹೋಗುತ್ತಿದೆ. ನಮ್ಮ ತಾಲೂಕಿನಲ್ಲಿ ಅನೇಕ ಕುಸ್ತಿಪಟ್ಟುಗಳು ಇದ್ದರು. ಹೊಸ ಓಣಿಯಲ್ಲಿ ಒಂದು ಗರಡಿ ಮನೆ ಇತ್ತು. ಇದರಲ್ಲಿ ತಾಲೀಮು ನಡೆಸಿದ ಕುಸ್ತಿಪಟುಗಳು ನಮ್ಮ ತಾಲೂಕಿಗೆ ಅನೇಕ ಹೆಸರನ್ನು ತಂದು ಕೊಟ್ಟಿದ್ದರು. ಆದರೆ ಈಗ ಈ ಕುಸ್ತಿಪಟುಗಳ ಸಂಖ್ಯೆ, ತರಬೇತುದಾರರು ಮತ್ತು ಗರಡಿ ಮನೆಗಳ ಅಭಾವದಿಂದ ಅಭಾವದಿಂದಾಗಿ ತುಂಬಾ ಕಡಿಮೆಯಾಗಿದೆ.
ನಮ್ಮ ತಾಲೂಕಿನ ಯುವ ಕುಸ್ತಿಪಟುವಾದ ಗಂಗಾಧರ ವಿಜಯಕುಮಾರ್ ರಾಠೋಡ ದೇಶಿ ಕುಸ್ತಿಯಲ್ಲಿ ಜಿಲ್ಲಾಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಅನೇಕ ಪದಕಗಳನ್ನು ಪಡೆದಿದ್ದಾನೆ. ಈ ಯುವಕನಿಗೆ ಮತ್ತು ಇತರೆ ಕುಸ್ತಿಪಟುಗಳಿಗೆ ನಾವು ಸರಿಯಾದ ತರಬೇತಿ ಮತ್ತು ಗರಡಿ ಮನೆಯನ್ನು ನಿರ್ಮಿಸಿದರೆ ಈ ಕ್ರೀಡಾಪಟುಗಳು ಇನ್ನೂ ಉನ್ನತ ಸ್ಥಾನಕ್ಕೆ ಏರುತ್ತಾರೆ ಮತ್ತು ನಮ್ಮ ತಾಲೂಕಿಗೆ ಉತ್ತಮ ಹೆಸರನ್ನು ತಂದುಕೊಡುತ್ತಾರೆ.
ಈಗಿನ ಯುವಕರು ಯಾವುದೇ ರೀತಿಯ ವ್ಯಾಯಾಮ ಇಲ್ಲದೆ ಮೊಬೈಲಲ್ಲಿ ಕಾಲಹರಣ ಮಾಡುತ್ತಿದ್ದಾರೆ.
ಆದ್ದರಿಂದ ಮುಂಡಗೋಡ ಪಟ್ಟಣದಲ್ಲಿ ದೇಶಿ ಕ್ರೀಡೆಯಾದ ಕುಸ್ತಿಗೆ ಎರಡು ಗುಂಟೆ ಜಾಗವನ್ನು ಮಂಜೂರು ಮಾಡಿ ನಮ್ಮ ಯುವ ಕುಸ್ತಿಪಟುಗಳ ಬೇಡಿಕೆಯನ್ನು ಈಡೇರಿಸಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಧರಣಿಯನ್ನು ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರು ಹಾಗೂ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಚಿದಾನಂದ ಹರಿಜನ, ಎಸ್.ಎಸ್.ಪಾಟೀಲ್, ಖೇಮಣ್ಣ ಲಮಾಣಿ, ಗೋವಿಂದಪ್ಪ ಬೆಂಡಗಟ್ಟಿ ಮುಂತಾದವರಿದ್ದರು.