ಅಂಕೋಲಾ : ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ದುರಂತ ಕಂಡ ಉಳುವರೆ ಗ್ರಾಮಕ್ಕೆ ಮಂಗಳವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಗಮಿಸಿ ಅಲ್ಲಿನ ಸ್ಥಿತಿಗತಿಯನ್ನು ನೋಡಿ ದುಃಖಿತರಾದರು. ಈ ಬಗೆಯ ದುರಂತಗಳಿಂದ ಜನರನ್ನು ಕಾಪಾಡು ಎಂದು ಆರಾಧ್ಯ ದೈವ ಮಂಜುನಾಥ ಸ್ವಾಮಿಯವರನ್ನು ಅವರು ಬೇಡಿಕೊಂಡರು.
ಶಿರೂರು ಗುಡ್ಡ ಕುಸಿತ ದುರಂತ ಅಮಾನವೀಯ ಘಟನೆಯಾಗಿದೆ. ಇಂಥ ಘಟನೆ ಮರುಕಳಿಸದಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಗುಡ್ಡ ಕುಸಿತದಿಂದ ನೊಂದವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ನೆರವಾಗಲಿದೆ. ಮನೆ ಕಳೆದುಕೊಂಡವರಿಗೆ ಆರ್ಥಿಕ ಸಹಾಯ ಮಾಡಲಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಪ್ರವಾಸಿಗರು ಮಳೆಗಾಲದಲ್ಲಿ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಅವರು ಕರೆ ನೀಡಿದರು. ದುರಂತದ ಬಗ್ಗೆ ರಾಜ್ಯಸಭೆಯಲ್ಲಿ ಗಮನ ಸೆಳೆಯುವುದಾಗಿ ಅವರು ತಿಳಿಸಿದರು.
ದುರಂತದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಅವರ ಮಕ್ಕಳಿಗೆ ವೀರೇಂದ್ರ ಹೆಗ್ಗಡೆ ಸಾಂತ್ವನ ಹೇಳಿದರು.