ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾಗಿರುವ ಮೂವರ ಪತ್ತೆಗಾಗಿ ಶೋಧ ಕಾರ್ಯ ಮಂಗಳವಾರ ಮತ್ತೆ ಆರಂಭವಾಗಿದೆ.
ಮಳೆ ಕಡಿಮೆಯಾಗಿ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಅವರ ಸೂಚನೆಯಂತೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಮಲ್ಪೆಯ ಮುಳುಗು ತಜ್ಞ ಈಶ್ವರ ಅವರ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಈ ವೇಳೆ ಗುಡ್ಡದ ಮಣ್ಣಿನೊಂದಿಗೆ ಕೊಚ್ಚಿಹೋಗಿ ನದಿ ಪಾಲಾಗಿದ್ದ ಕೇರಳದ ಅರ್ಜುನ ಚಲಾಯಿಸುತ್ತಿದ್ದ ಟಿಂಬರ್ ಲಾರಿಯ ಜಾಕ್ ನದಿಯಾಳದಲ್ಲಿ ದೊರೆತಿದ್ದು, ಇದನ್ನು ಸ್ಥಳದಲ್ಲಿದ್ದ ಲಾರಿ ಮಾಲಿಕ ಖಚಿತಪಡಿಸಿದ್ದಾರೆ. ಬುಧವಾರ ಇನ್ನೂ ಐವರು ಮುಳುಗು ಪರಿಣಿತರು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದು, ಅತ್ಯಾಧುನಿಕ ಸಲಕರಣೆಯೊಂದಿಗೆ ನದಿಯಲ್ಲಿ ಶೋಧ ನಡೆಸಲಾಗುವುದು ಎಂದು ಈಶ್ವರ ಮಲ್ಪೆ ತಿಳಿಸಿದ್ದಾರೆ.
ಜಿಲ್ಲಾಡಳಿತದ ಅನುಮತಿಯಿಲ್ಲ..!
ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಈಶ್ವರ ಮಲ್ಪೆ ಸ್ಥಳಕ್ಕೆ ಭೇಟಿ ನೀಡಿ ನದಿಯಲ್ಲಿ ನೀರಿನ ಸೆಳೆತ ಇಲ್ಲದಿರುವುದನ್ನು ಗಮನಿಸಿ ಕಾರ್ಯಾಚರಣೆಗೆ ಮುಂದಾಗಿದ್ದರು. ಆದರೆ ಜಿಲ್ಲಾಡಳಿತ ಮಾತ್ರ ನದಿಗೆ ಇಳಿಯದಂತೆ ಸೂಚಿಸಿತ್ತು. ಇದು ಸೂಕ್ತ ಸಮಯವಾಗಿದ್ದು, ಮತ್ತೆ ಮಳೆ ಸುರಿಯಲಾರಂಭಿಸಿದರೆ ಕಾರ್ಯಾಚರಣೆ ಕಷ್ಟ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.
ಬಳಿಕ ಶಾಸಕ ಸತೀಶ ಸೈಲ್ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದರು. ಈಶ್ವರ ಅವರಿಗೆ ಸ್ಥಳೀಯ ಮೀನುಗಾರರು ಬೋಟ್‌ಗಳೊಂದಿಗೆ ಸಾಥ್ ನೀಡಿದ್ದಾರೆಂದು ತಿಳಿದುಬಂದಿದೆ.