ಕೃಷಿ ಭೂಮಿ, ಕಟ್ಟಡಗಳ ವಿವಾದ : ಹೀಗಿವೆ ಪೊಲೀಸರು ಅನುಸರಿಸಬೇಕಾದ `ಮಾರ್ಗಸೂಚಿ’ ಸೂತ್ರಗಳು

Spread the love

ಬೆಂಗಳೂರು:  ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಪಟ್ಟಂತೆ ಇರುವ ವಿವಾದಗಳು ಮತ್ತು ವಿಷಯಗಳಿಗೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಭೂಮಿಗೆ (ಕೃಷಿಭೂಮಿ, ಕೃಷಿಯೇತರ ಭೂಮಿ, ಕಟ್ಟಡಗಳು ಮತ್ತು ನಿವೇಶನ) ಸಂಬಂಧಪಟ್ಟಂತೆ ಬಹು ಸಂಖ್ಯೆಯಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದೂರುಗಳನ್ನು ನೀಡುತ್ತಿರುವುದು ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಮಾಧ್ಯಮಗಳು, ಸಾರ್ವಜನಿಕರು ಮತ್ತು ವಿಧಾನ ಮಂಡಲದಲ್ಲಿ ಚುನಾಯಿತ ಪ್ರತಿನಿಧಿಗಳು, ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳು ಪೊಲೀಸ್ ಭೂವಿವಾದವನ್ನು ತೀರ್ಮಾನ ಮಾಡುವ ಮತ್ತು ಈ ಭೂಮಿ ವಿವಾದಕ್ಕೆ ಸಂಬಂಧಪಟ್ಟಂತೆ ದೊಡ್ಡ ಪ್ರಮಾಣ ಅಕ್ರಮ ಸಂಭಾವನೆ ಪಡೆಯುತ್ತಿದ್ದಾರೆಂದು ಆಪಾದನೆಯನ್ನು ಮಾಡುವುದು ಸಾಮಾನ್ಯವಾಗಿದೆ. ಇದು ಪೊಲೀಸ್ ಇಲಾಖೆಯ ವರ್ಚಸ್ಸಿನ ಮೇಲೆ ಮಸಿ ಬಳಿದಂತಾಗುತ್ತಿದೆ. ಆದುದರಿಂದ ಕೃಷಿಭೂಮಿ, ಕೃಷಿಯೇತರ ಭೂಮಿ, ಕಟ್ಟಡಗಳು ಮತ್ತು ನಿವೇಶನಗಳ ಸಂಬಂಧವಾಗಿ ಸ್ವೀಕೃತವಾಗುವ ದೂರುಗಳನ್ನು ಕಟ್ಟುನಿಟ್ಟಾಗಿ ಮತ್ತು ನ್ಯಾಯ ಸಮ್ಮತವಾಗಿ ಇತ್ಯರ್ಥಗೊಳಿಸುವ ಕುರಿತಂತೆ ದೂರುಗಳನ್ನು ಸ್ವೀಕರಿಸಿ ವಿಚಾರಣೆ ಕೈಗೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆ ಹಾಗೂ ಮಾರ್ಗಸೂಚಿಗಳನ್ನು ನೀಡುವುದು ಅತ್ಯಾವಶ್ಯಕ ಎಂದು ಕಂಡು ಬಂದಿರುತ್ತದೆ. ಆದುದರಿಂದ ಕೆಳಕಂಡ ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿಗಾಗಿ ಮತ್ತು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ನೀಡಲಾಗಿದೆ.