ಮುಂಡಗೋಡನಲ್ಲಿ ಕ್ಷೀಣಿಸುತ್ತಿರುವ ದಿನಪತ್ರಿಕೆಗಳ ಓದುಗರ ಸಂಖ್ಯೆ..!

Spread the love

ಮುಂಡಗೋಡ : ಮುಂಡಗೋಡನಲ್ಲಿ ದಿನಪತ್ರಿಕೆಗಳ ಓದುಗರ ಸಂಖ್ಯೆ ಕ್ಷಣಿಸುತ್ತಿದೆಯೇ?
ಈ ಪ್ರಶ್ನೆಗೆ ಹೌದು ಎನ್ನದೇ ವಿಧಿ ಇಲ್ಲ.
ಏಕೆಂದರೆ ಕೆಲವು ವರ್ಷಗಳ ಹಿಂದೆ ಒಂದೊಂದು ದಿನ ಪತ್ರಿಕೆಗಳು ಕನಿಷ್ಠ ಎಂದರೆ 800ರಿಂದ 1000 ಪ್ರತಿಗಳು ಬರುತ್ತಿತ್ತು. ಆದರೆ ಈಗ ರಾಜ್ಯ, ಜಿಲ್ಲಾ ಮಟ್ಟದ ಪತ್ರಿಕೆಗಳು 400 ಪ್ರತಿಗಳು ಬರುತ್ತಿಲ್ಲ. ಬಂದರೂ ಅವುಗಳಲ್ಲಿ ಉಳಿದುಕೊಳ್ಳುವುದೇ ಹೆಚ್ಚು  ಎಂಬುದನ್ನು ನೋವಿನಿಂದ ಹೇಳಬೇಕಾಗಿದೆ.
ಕೆಲವು ರಾಜ್ಯಮಟ್ಟದ ಪತ್ರಿಕೆಗಳು ಈಗ 30-60 ಪ್ರತಿಗಳ ಗಡಿ ಕೂಡ ದಾಟುತ್ತಿಲ್ಲ…! 

ಈಗ ದಿನಪತ್ರಿಕೆಗಳು ದಾಖಲಾತಿಗಳಿಗಾಗಿ ಮಾತ್ರ ಸೀಮಿತವಾಗಿ ಬಿಟ್ಟಿದೆ ಎಂಬಂತಾಗಿದೆ.
ಜನರಿಗೂ ಕೂಡ ಈಗ ತಕ್ಷಣವೇ ಸುದ್ದಿ ಮಾಹಿತಿ ಬೇಕಾಗಿದೆ. ದಿನಪತ್ರಿಕೆಗಳಾದರೆ ಇಂದಿನ ಸುದ್ಧಿ ಮಾರನೇ ದಿನ ಬರುತ್ತದೆ. ಅದಕ್ಕಾಗಿ ನ್ಯೂಸ್ ಪೋರ್ಟಲ್, ವೆಬ್ ಸೈಟ್, ಡಿಜಿಟಲ್ ಮೀಡಿಯಾ, ಟಿವಿ, ಡಿಜಿಟಲ್ ಟಿ.ವಿ.ಗೆ ಜನರು ಮೊರೆ ಹೋಗುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮುಂಡುಗೋಡನಲ್ಲಿ ದಿನಪತ್ರಿಕೆಗಳನ್ನು ಕೊಳ್ಳುವವರ, ಖರೀದಿಸುವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಮೊದಲೆಲ್ಲ ಬೇರೆ ಬೇರೆ ದಿನಪತ್ರಿಕೆಗಳು ೨೦೦ ರಿಂದ ೧೦೦೦ ವರೆಗೆ ದಿನಪತ್ರಿಕೆಗಳನ್ನು ಕಾಯಂ ಕೊಂಡು ಓದುವವರಿದ್ದರು. ಆದರೆ ಈಗ ಮುಂಡಗೋಡ ನಗರದಲ್ಲಿ ಪತ್ರಿಕೆ ಮಾರಾಟವಾಗುವುದು ಕಷ್ಟ ಸಾಧ್ಯವಾಗಿದೆ. ಪತ್ರಿಕೆ ಕೊಳ್ಳುವವರ ಸಂಖ್ಯೆ ಕೂಡಾ ತೀರಾ ಕಡಿಮೆಯಾಗಿ ಬಿಟ್ಟಿದೆ.
ಈ ಮೊದಲು ಒಂದು ವಾರದ ಮೊದಲೇ ಇಂತಹ ದಿನಾಂಕದಿಂದ ನಮಗೆ ಪತ್ರಿಕೆಗಳು ಬೇಕೆಂದು ಜನರು ಪತ್ರಿಕಾ ಏಜೆಂಟರಲ್ಲಿ, ವರದಿಗಾರರಲ್ಲಿ ಒತ್ತಾಯಿಸುತ್ತಿದ್ದರು. ಆದರೆ ಈಗ ಪತ್ರಿಕೆಯ ಓದುಗರನ್ನು ಹುಡುಕಬೇಕಾಗಿದೆ. ಜನರಿಗೆ ಕಾಡಿಬೇಡಿ, ದುಂಬಾಲು ಬಿದ್ದು ಪತ್ರಿಕೆಗಳನ್ನು ತೆಗೆದುಕೊಳ್ಳಿ ಎಂದು ಪತ್ರಿಕಾ ಏಜೆಂಟರು, ವರದಿಗಾರರು ಹೇಳಬೇಕಾದ ದುಸ್ಥಿತಿಗೆ ಬಂದು ತಲುಪಿದೆ.  

ಮುಂಡುಗೋಡನಲ್ಲಿ ರಾಜ್ಯ ಮಟ್ಟದ ಕೆಲವು ಪತ್ರಿಕೆಗಳು 30 ರಿಂದ 400 ಪ್ರತಿವರೆಗೆ ಮಾತ್ರ ಹೋಗುವಂತಹ ಪರಿಸ್ಥಿತಿ ಬಂದಿದೆ. ಕೆಲವು ಪತ್ರಿಕೆಗಳ ಪ್ರಸಾರಾಂಗ ವ್ಯವಸ್ಥಾಪಕರು, ನೂರು ಪ್ರತಿಗಳನ್ನು ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಇದರಿಂದ ಕೆಲವು ವರದಿಗಾರರು ಪತ್ರಿಕೆಗಳನ್ನು ಬಿಡಲಾಗದೆ ಒದ್ದಾಡುತ್ತಿದ್ದಾರೆ. ಪ್ರತಿದಿನ 30 ರಿಂದ 60 ಪತ್ರಿಕೆಯ ಪ್ರತಿಗಳು ಹಾಗೆ ಉಳಿದುಬಿಡುತ್ತದೆ. ಪ್ರತಿ ದಿನದ ಈ 30 ರಿಂದ 60 ಪ್ರತಿಗಳ ಹಣವನ್ನು ಕೈ ಕೈಯಿಂದಲೇ ತುಂಬಬೇಕಾದ ಪರಿಸ್ಥಿತಿ ಎಜೆಂಟರಿಗೆ, ವರದಿಗಾರರಿಗೆ ಬಂದಿದೆ. 

ಕೆಲವು ಪತ್ರಿಕೆಗಳ ಏಜೆಂಟರು ಹಾಗೂ ವರದಿಗಾರರು ಎರಡು ಒಬ್ಬರೇ ಆಗಿರುವುದರಿಂದ ಅವರ ಕಷ್ಟ ಹೇಳತ್ತಿರದ್ದಾಗಿದೆ. ಪತ್ರಿಕೆ ವಿತರಿಸುವ ಹುಡುಗರು ತಿಂಗಳಿಗೆ ಕನಿಷ್ಠ 1000ರೂ. ಕೇಳುತ್ತಿರುವುದರಿಂದ ಅಷ್ಟು ಹಣ ಪತ್ರಿಕೆಗಳಿಂದ ಗಳಿಸಲು ಸಾಧ್ಯವಾಗದ ಕಾರಣ ಎರಡು ಮೂರು ಪತ್ರಿಕೆಗಳನ್ನು ಮಾತ್ರ ಅಂದರೆ ಲೈಬ್ರರಿಗೆ, ಒಂದೆರಡು ಆಫೀಸಿಗೆ ಪತ್ರಿಕೆಗಳನ್ನು ತಾವೇ ಸ್ವತಃ ಹಾಕಿ ಉಳಿದ ಪೇಪರ್ ಬಂಡಲ್ ಅನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪತ್ರಿಕೆಗೆ ಬಂದ ಸುದ್ದಿಯನ್ನು ಪಿಡಿಎಫ್ ನಲ್ಲಿ ಕಟ್ ಮಾಡಿ ವಾಟ್ಸಪ್ ಹಾಗೂ ಫೇಸ್ಬುಕನಲ್ಲಿ ಹರಿ ಬಿಡುತ್ತಿದ್ದಾರೆ..!  

ಪತ್ರಿಕೆಗಳು ಇಷ್ಟು ಹೋಗುತ್ತಿಲ್ಲ ಪತ್ರಿಕೆ ಸಂಖ್ಯೆ ಕಡಿಮೆ ಮಾಡಿ ಎಂದು ಪತ್ರಿಕೆಯ ಪ್ರಸಾರಾಂಗ ವ್ಯವಸ್ಥಾಪಕರಿಗೆ ಹೇಳಿದರೆ 100 ಪ್ರತಿಗಳ ಸಂಖ್ಯೆಗಿಂತ ಕಡಿಮೆ ಮಾಡಲಾಗುವುದಿಲ್ಲ. ಬೇಕಾದರೆ ಏಜೆನ್ಸಿ ರಿಪೋರ್ಟಿಂಗ್ ಮಾಡಿ. ಇಲ್ಲದಿದ್ದರೆ ಬಿಡಿ ನಾವು ಬೇರೆಯವರನ್ನು ನೇಮಿಸುತ್ತೇವೆಂದು ಖಡಾ ಖಂಡಿತವಾಗಿ ಹೇಳುತ್ತಿರುವುದರಿಂದ ಕೆಲ ವರದಿಗಾರರು ಪತ್ರಿಕೆ ಬಿಡಲಾಗದೆ, ಏಜೆನ್ಸಿ ಹಣ ತುಂಬಲಾಗದೆ ಒದ್ದಾಡುತ್ತಿದ್ದಾರೆ..!!
ಕೊನೆಗೆ ಒಂದು ಮಾತು…
ಕೊರೋನಾ ಎಂಬ ಮಹಾಮಾರಿ ಬಂದ ನಂತರ ದಿನ ಪತ್ರಿಕೆಗಳ ಓದುವವರ ಸಂಖ್ಯೆ ಕಡಿಮೆಯಾಗುತ್ತಾ ಬಂತು ಎಂದು ಹೇಳಿದರೆ ಅದು ಅತಿಶಯೋಕ್ತಿ ಆಗಲಾರದು ಅಲ್ಲವೇ?