ರಾಜ್ಯ ಸರ್ಕಾರಿ ನೌಕರರಿಗೆ’ ಮತ್ತೊಂದು ಗುಡ್ ನ್ಯೂಸ್ : `ವೈದ್ಯಕೀಯ ಭತ್ಯೆ’ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

Spread the love

ಬೆಂಗಳೂರು; ರಾಜ್ಯ ಸರ್ಕಾರಿ ನೌಕರರಿಗೆ ಈಗಾಗಲೇ 7ನೇ ವೇತನ ಆಯೋಗದ ವೇತನ ಶ್ರೇಣಿಯಂತೆ ವೇತನ ಜಾರಿಗೊಳಿಸಲಾಗಿತ್ತು. ಎನ್ ಪಿ ಎಸ್ ರದ್ದುಗೊಳಿಸಿ, ಓಪಿಎಸ್ ಜಾರಿಗೊಳಿಸುವ ಬಗ್ಗೆಯೂ ಸಮಿತಿಯನ್ನು ರಚಿಸಲಾಗಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿಸುದ್ದಿ ಎನ್ನುವಂತೆ ವೈದ್ಯಕೀಯ ಭತ್ಯೆ ದರಗಳನ್ನು ಪರಿಷ್ಕರಿಸಿ ಆದೇಶಿಸಿದೆ.

ಈ ಕುರಿತಂತೆ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಯವರು ನಡವಳಿಯನ್ನು ಹೊರಡಿಸಿದ್ದು, ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ 05-09-2022ರ ಸರ್ಕಾರಿ ಆದೇಶದಲ್ಲಿ ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ, ಸರ್ಕಾರದ ನೀತಿಯಲ್ಲಿ ವಿವರಿಸಿರುವಂತೆ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಸ್ತೃತವಾದ ಮಾರ್ಗಸೂಚಿಗಳನ್ನು ಸಹ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.

ದಿನಾಂಕ 22-07-2024ರ ಸರ್ಕಾರಿ ಆದೇಶದಲ್ಲಿ ವೇತನ ಶ್ರೇಣಿಗಳ ಮತ್ತು ವೇತನಕ್ಕೆ ಹೊಂದಿಕೊಂಡಿರುವ ನಿರ್ದಿಷ್ಟ ಭತ್ಯೆಗಳ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ ದಿನಾಂಕ 23-08-2024ರ ಸರ್ಕಾರಿ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಗಳನ್ನು ಅನುಷ್ಠಾನಗೊಳಿಸಿ ವಿಸ್ತೃತವಾದ ಆದೇಶಗಳನ್ನು ಹೊರಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಗ್ರೂಪ್ -ಸಿ ಮತ್ತು ಗ್ರೂಪ್-ಡಿ ವೃಂದದ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆ ದರಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಸರ್ಕಾರವು ಅಂಗೀಕರಿಸಿರುತ್ತದೆ. ಅದರಂತೆ, ಈ ಕೆಳಕಂಡ ಆದೇಶವನ್ನು ಹೊರಡಿಸಿದೆ ಎಂದು ಹೇಳಿದ್ದಾರೆ.

ಗ್ರೂಪ್-‘ಸಿ’ ಮತ್ತು ಗ್ರೂಪ್-‘ಡಿ’ ವೃಂದದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆಯ ದರಗಳನ್ನು ಮಾಸಿಕ ರೂ.200/- ಗಳಿಂದ ಮಾಸಿಕ ರೂ.500/- ಗಳಿಗೆ 1ನೇ ಆಗಸ್ಟ್ 2024ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲು ಸರ್ಕಾರವು ಹರ್ಷಿಸುತ್ತದೆ ಎಂದಿದ್ದಾರೆ.

2. ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ (ಕೆ.ಎ.ಎಸ್.ಎಸ್) ಸೌಲಭ್ಯವು ಅನುಷ್ಠಾನಗೊಳ್ಳುವವರೆಗೆ ಈ ವೈದ್ಯಕೀಯ ಸೌಲಭ್ಯವು ಲಭ್ಯವಿರುತ್ತದೆ.

3. ನಗದುರಹಿತ ವೈದ್ಯಕೀಯ ಸೌಲಭ್ಯ ಯೋಜನೆಯು ಅನುಷ್ಠಾನಗೊಂಡ ನಂತರದಲ್ಲಿ ವೈದ್ಯಕೀಯ ಭತ್ಯೆಯ ಮಂಜೂರಾತಿಯ ಈ ಆದೇಶವು ಜಾರಿಯಲ್ಲಿರುವುದು ಕೊನೆಗೊಳ್ಳುತ್ತದೆ ಮತ್ತು ನಗದುರಹಿತ (ಕೆ.ಎ.ಎಸ್.ಎಸ್) ಯೋಜನೆಯು ಅನುಷ್ಠಾನಗೊಂಡ ಬಳಿಕ ಯಾವುದೇ ಸರ್ಕಾರಿ ನೌಕರನು ಈ ಸೌಲಭ್ಯವನ್ನು ಪಡೆಯಲು ಅರ್ಹನಿರುವುದಿಲ್ಲ.
4. ಈ ಭತ್ಯೆಯನ್ನು ಕ್ರಮಬದ್ಧಗೊಳಿಸಲು ವಿಧಿಸಿರುವ ಇತರೆ ಷರತ್ತುಗಳು ಮುಂದುವರೆದು ಅನ್ವಯಿಸುತ್ತವೆ ಎಂದು ತಿಳಿಸಿದ್ದಾರೆ.