ಬ್ಯಾನಳ್ಳಿ ಬಳಿ ಅಡಿಕೆ ತೋಟಕ್ಕೆ ಕಾಡಾನೆಗಳ ದಾಳಿ : 35ಕ್ಕೂ ಹೆಚ್ಚು ಅಡಿಕೆ ಗಿಡಗಳಿಗೆ ಹಾನಿ

Spread the love

ಮುಂಡಗೋಡ : ತಾಲೂಕಿನ ಬ್ಯಾನಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯ ಅಡಿಕೆ ತೋಟಕ್ಕೆ ಕಾಡಾನೆಗಳು ಶನಿವಾರ ರಾತ್ರಿ ದಾಳಿ ಮಾಡಿ, 35ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮುರಿದು ಹಾಕಿವೆ.
ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಒಂದು ದಿನ ಬಿಟ್ಟು ಮತ್ತೊಂದು ದಿನ ತೋಟ, ಗದ್ದೆಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಅಡಿಕೆ, ಭತ್ತದ ಬೆಳೆ ಹಾಳು ಮಾಡುತ್ತಿವೆ. ಅರಣ್ಯ ಅತಿಕ್ರಮಣ ಪ್ರದೇಶದ ರೈತರು ಹೆಚ್ಚು ಹಾನಿಗೊಳಗಾಗಿದ್ದಾರೆ. ಕಳೆದ ವರ್ಷ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತುಸು ಕಡಿಮೆಯಾಗಿತ್ತು. ಆದರೆ, ಈ ಸಲ ಬೆಳೆ ಕೊಯ್ದು ಆರಂಭದಲ್ಲಿಯೇ, ಕಾಡಾನೆಗಳು ಪ್ರತ್ಯಕ್ಷವಾಗುತ್ತಿವೆ.
ಗಜಪಡೆಯ ಹಿಂಡಿನಲ್ಲಿ ಮರಿ ಆನೆಗಳೂ ಇರುವುದರಿಂದ, ಆನೆಗಳನ್ನು ಓಡಿಸಲು ಹೆದರಿಕೆ ಆಗುತ್ತದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ, ಅವರು ಬರುವಷ್ಟರಲ್ಲಿ ಅಪಾರ ಪ್ರಮಾಣದ ಬೆಳೆ ಧರೆಗೆ ಒರಗಿರುತ್ತದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಬ್ಯಾನಳ್ಳಿ ಗ್ರಾಮದ ನಾಗರಾಜ ಕಾತ್ರಟ್, ಬಾಗು ಲಾಂಬೋರೆ ಎಂಬುವರ ತೋಟದಲ್ಲಿ ಕಾಡಾನೆಗಳು ದಾಳಿ ಮಾಡಿ ಬೆಳೆ ಹಾನಿ ಮಾಡಿವೆ. ಎರಡೂ ತೋಟಗಳಲ್ಲಿ 35ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮುರಿದು ಹಾಕಿದೆ.
ಅಗಳ ದುರಸ್ತಿಗೆ ಆಗ್ರಹ: ಬ್ಯಾನಳ್ಳಿ ಪ್ರದೇಶ ಸುತ್ತಮುತ್ತ ಆನೆಗಳ ಸಂಚಾರಕ್ಕೆ ಕಡಿವಾಣ ಹಾಕಲು ಕಳೆದ ನಾಲೈದು ವರ್ಷಗಳ ಹಿಂದೆ ಆನೆ ಅಗಳ ತೆಗೆದಿದ್ದು, ಮಳೆಗಾಲದಿಂದ ಮಣ್ಣು ಕುಸಿದು ಕೆಲವೆಡೆ ಸಮತಟ್ಟು ಆಗಿವೆ. ಇಂತಹ ಸ್ಥಳದಿಂದ ಆನೆಗಳು ಸುಲಭವಾಗಿ ತೋಟ, ಗದ್ದೆಗಳಿಗೆ ನುಗ್ಗಿ ಬರುತ್ತಿವೆ. ಆನೆ ಅಗಳ ಅಥವಾ ಕಂದಕವನ್ನು ದುರಸ್ತಿ ಮಾಡಿಸಿದರೆ, ತಕ್ಕ ಮಟ್ಟಿಗೆ ಬೆಳೆ ಉಳಿಸಿಕೊಳ್ಳಬಹುದು. ಇಲ್ಲವಾದರೆ ಕಾಡಂಚಿನ ರೈತರ ಬದುಕು ದುಸ್ತರವಾಗಲಿದೆ. ಪ್ರತಿ ವರ್ಷ ಕಾಡಾನೆಗಳು ಈ ಭಾಗದಲ್ಲಿ ಕಾಣಿಸಿಕೊಂಡರೂ, ಆನೆ ಅಗಳದಿಂದ ಪ್ರತ್ಯೇಕ ಮಾರ್ಗದಲ್ಲಿ ಸಂಚಾರ ನಡೆಸುತ್ತವೆ. ಆನೆ ಕಂದಕ ಸಮತಟ್ಟು ಆಗಿರುವುದರಿಂದ ಬೆಳೆ ಮಾಡುತ್ತಿವೆ ಎಂದು ಹಲವು ರೈತರು ದೂರಿದ್ದಾರೆ.