ಅಸಮಾಧಾನ ನಿಭಾಯಿಸುವ ಶಕ್ತಿ ನನಗಿದೆ : ಸಿಎಂ

Spread the love

ಬೆಂಗಳೂರು : ಖಾತೆ ಹಂಚಿಕೆ ನಂತರ ಅಸಮಾಧಾನಗೊಂಡಿರುವ ಸಚಿವರನ್ನು ಕರೆದು ಮಾತನಾಡಿ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾದ ಆನಂದ್‍ಸಿಂಗ್ ಮತ್ತು ಎಂ.ಟಿ.ಬಿ.ನಾಗರಾಜ್ ಅಸಮಾಧಾನಗೊಂಡಿರುವುದು ನನ್ನ ಗಮನಕ್ಕೆ ಬಂದಿದೆ ಎಂಬುದನ್ನು ಒಪ್ಪಿಕೊಂಡರು.

ಬೆಳಗ್ಗೆ ನಮ್ಮ ಮನೆಗೆ ಆನಂದ್‍ಸಿಂಗ್ ಅವರು ಬಂದಿದ್ದರು. ಅವರು ತಮ್ಮ ಭಾವನೆಗಳನ್ನು ನನ್ನ ಬಳಿ ವ್ಯಕ್ತಪಡಿಸಿದ್ದಾರೆ. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಇದಕ್ಕೆ ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು. ಎಂ.ಟಿ.ಬಿ.ನಾಗರಾಜ್ ಅವರನ್ನು ಸಹ ಕರೆದು ಮಾತನಾಡುತ್ತೇನೆ.ಖಾತೆ ಹಂಚಿಕೆ ನಂತರ ಇದೆಲ್ಲ ಸಹಜವಾದ ಬೆಳವಣಿಗೆ. ಏನೇ ಗೊಂದಲ, ಸಮಸ್ಯೆ, ಬಿಕ್ಕಟ್ಟುಗಳಿದ್ದರೂ ಎಲ್ಲವನ್ನೂ ಪರಿಹರಿಸುವ ಶಕ್ತಿ ನಮಗಿದೆ ಎಂದರು.

ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಅವರ ಜೀವನ ಈಗಿನ ಜನಪ್ರತಿನಿಧಿಗಳಿಗೆ ಆದರ್ಶಪ್ರಾಯ ಎಂದು ಸ್ಮರಿಸಿದರು. ಎಸ್.ನಿಜಲಿಂಗಪ್ಪ ಅವರು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ರಾಷ್ಟ್ರ ನಾಯಕರಾಗಿಯೂ ಹೊರಹೊಮ್ಮಿದ್ದರು. ಅವರೊಬ್ಬ ಅತ್ಯುತ್ತಮ ಸಂಸದೀಯ ಪಟು. ಎಲ್ಲರ ಜತೆ ಉತ್ತಮವಾದ ಸ್ನೇಹವನ್ನು ಸಂಪಾದಿಸಿದ್ದರು. ಅವರು ಬಿಟ್ಟು ಹೋಗಿರುವ ಮೌಲ್ಯಗಳು 224 ಶಾಸಕರಿಗೂ ಆದರ್ಶವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷ್ಣ, ಕಾವೇರಿ ಸೇರಿದಂತೆ ಅನೇಕ ನೀರಾವರಿ ಯೋಜನೆಗಳ ಪ್ರಥಮ ರೂವಾರಿಯೂ ಅವರೇ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಭೇದ ಹೋಗಿಸಿ ಅಖಂಡ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಧೀಮಂತರು ಎಂದು ಹೇಳಿದರು. ಈ ಹಿಂದೆ ನಿಜಲಿಂಗಪ್ಪ ಅವರು ಅವಿಭಜಿತ ಶಿಗ್ಗಾಂವಿ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು. ಅದೃಷ್ಟವಶಾತ್ ಇಂದು ಅದೇ ಕ್ಷೇತ್ರದಿಂದ ನಾನು ಕೂಡ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದೇನೆ. ಇದು ನನ್ನ ಪೂರ್ವಜನ್ಮದ ಪುಣ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.