ಪ್ರಯಾಗ್ ರಾಜ್ ಕಾಲ್ತುಳಿತ ; 30 ಭಕ್ತರು ಸಾವು, 60 ಜನರಿಗೆ ಗಾಯ ; ಉ.ಪ್ರದೇಶ ಡಿಐಜಿ ಅಧಿಕೃತ ಮಾಹಿತಿ

Spread the love

ಪ್ರಯಾಗ್ ರಾಜ್ ; ಬುಧವಾರ ಮುಂಜಾನೆ ಮಹಾಕುಂಭದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತದಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. 25 ಸಂತ್ರಸ್ತರನ್ನ ಗುರುತಿಸಲಾಗಿದ್ದು, ಉಳಿದ ಐವರನ್ನು ಇನ್ನೂ ಗುರುತಿಸಲಾಗುತ್ತಿದೆ ಎಂದು ಮಹಾಕುಂಭದ ಡಿಐಜಿ ವೈಭವ್ ಕೃಷ್ಣ ದೃಢಪಡಿಸಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಡಿಐಜಿ ವೈಭವ್ ಕೃಷ್ಣ, ಕಾಲ್ತುಳಿತದಲ್ಲಿ 30 ಭಕ್ತರು ಗಾಯಗೊಂಡಿದ್ದು, ಇದುವರೆಗೆ 25 ಮೃತದೇಹಗಳ ಗುರುತು ಪತ್ತೆ ಹಚ್ಚಿದ್ದೇವೆ. ಇನ್ನು 60 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಇನ್ನು ಇಂದು ಯಾರಿಗೂ ವಿಐಪಿ,ವಿವಿಐಪಿ ವ್ಯವಸ್ಥೆ ಮಾಡಿರಲಿಲ್ಲ ಎಂದು ತಿಳಿಸಿದರು.

ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ತಾಯಿ, ಮಗಳು ಸೇರಿ ಬೆಳಗಾವಿಯ ನಾಲ್ವರ ದುರ್ಮರಣ

ಬೆಳಗಾವಿ: ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ತಾಯಿ-ಮಗಳು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ. 

ಮೃತರನ್ನು ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ್ (50) ಮೇಘಾ ಹತ್ತರವಾಠ್, ಅರುಣ್ ಕೋಪರ್ಡೆ ಹಾಗೂ ಮಹಾದೇವಿ ಎಂದು ಗುರುತಿಸಲಾಗಿದೆ. ಕುಂಬಮೇಳದಲ್ಲಿ ಕಾಲ್ತುಳಿತದ ಬಳಿಕ ನಾಲ್ವರನ್ನು ಪ್ರಯಾಗ್‍ರಾಜ್‍ನ (Prayagraj) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.

ಬೆಳಗಾವಿಯಲ್ಲಿರುವ ಕುಟುಂಬಸ್ಥರಿಗೆ ಇಂದು (ಬುಧವಾರ) ಬೆಳಗ್ಗೆಯಿಂದ ಇಬ್ಬರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಫೋನ್‌ ರಿಂಗ್ ಆಗುತ್ತಿದ್ದರೂ, ರಿಸೀವ್ ಮಾಡದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದರು.

ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ 13 ಜನರ ತಂಡದಲ್ಲಿ ಅವರು ತೆರಳಿದ್ದರು ಎಂದು ತಿಳಿದು ಬಂದಿದೆ. ಕಾಲ್ತುಳಿತದಲ್ಲಿ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋಪಾರ್ಡೆ ಸೇರಿದಂತೆ ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.