
ಶಿರಸಿ : ರಾಜ್ಯದ ಪ್ರತಿಷ್ಠಿತ ಉತ್ಸವಗಳಲ್ಲಿ ಒಂದಾದ ಕದಂಬೋತ್ಸವ ಏಪ್ರಿಲ್ 12 ಮತ್ತು 13ರಂದು ಶಿರಸಿ ತಾಲೂಕಿನ ಬನವಾಸಿಯಲ್ಲಿ ಜರುಗಲಿದೆ.

ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಗರದ ಆಡಳಿತ ಸೌಧದಲ್ಲಿ ಶನಿವಾರ ಕದಂಬೋತ್ಸವ ದಿನ ನಿಗದಿ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಉತ್ಸವದ ದಿನಾಂಕ ಘೋಷಿಸಿದರು.
ನಂತರ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, ಎರಡು ದಿನ ಕದಂಬೋತ್ಸವ ನಡೆಯಲಿದೆ. ಇದಕ್ಕೆ ಪೂರಕವಾಗಿ ಏ.10ರಂದು ಗುಡ್ನಾಪುರ ರಾಣಿ ನಿವಾಸದಲ್ಲಿ ಕದಂಬ ಜ್ಯೋತಿಗೆ ಚಾಲನೆ ನೀಡಲಾಗುವುದು. ಇದರ ಭಾಗವಾಗಿ ಗುಡ್ನಾಪುರ ಉತ್ಸವ ಕೂಡ ನಡೆಸಲಾಗುವುದು. ಎರಡು ದಿನ ವಿವಿಧ ಕಡೆ ಸಂಚರಿಸಿ ಬನವಾಸಿಗೆ ಆಗಮಿಸುವ ಕದಂಬ ಜ್ಯೋತಿಯಿಂದ ಕದಂಬೋತ್ಸವಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡುವರು. ಅದೇ ವೇದಿಕೆಯಲ್ಲಿ ಸಾಹಿತಿ ಬಿ.ಎ.ವಿವೇಕ ರೈ ಅವರಿಗೆ ‘ಪಂಪ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದರು.
ಉತ್ಸವದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಶಾಸಕ ಭೀಮಣ್ಣ ನಾಯ್ಕ, ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಇತರರಿದ್ದರು.