
ಕಾರವಾರ : ಸಿಬರ್ಡ್ ನಿರಾಶ್ರಿತರಿಗೆ ಯುಗಾದಿಯ ಸಂದರ್ಭದಲ್ಲಿ ಶುಭ ಸುದ್ದಿಯಾಗಿ 2008-09 ರಿಂದ ಬಾಕಿ ಉಳಿದಿದ್ದ 28/A ಕೇಸ್ನಲ್ಲಿ 10.47 ಕೋಟಿರೂ.ಗಳ ಪರಿಹಾರ ಮಂಜೂರಾಗಿದೆ ಎಂದು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸಿಬರ್ಡ್ ಯೋಜನೆ ಅಡಿಯಲ್ಲಿ ಸೇನಾ ನೆಲೆ ನಿರ್ಮಾಣಕ್ಕಾಗಿ ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಈ ಸ್ಥಳಾಂತರಕ್ಕೆ ಸೂಕ್ತ ಪರಿಹಾರ ನೀಡುವ ಪ್ರಕ್ರಿಯೆ ವಿಳಂಬವಾಗಿತ್ತು. ಇದರಿಂದಾಗಿ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದವು. ಈ ಪ್ರಕರಣಗಳು ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದು ಅದನ್ನು ಸಂಸದನಾಗಿ ಆಯ್ಕೆ ಆದಮೇಲೆ ಈ ಕುರಿತು ತಕ್ಷಣ ನೌಕಾ ನೆಲೆ ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮತ್ತು ಸ್ಥಳೀಯ ರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಕೇಂದ್ರ ರಕ್ಷಣಾ ಮಂತ್ರಿಗಳ ಗಮನಕ್ಕೆ ತಂದು, ನಿರಂತರ ಪ್ರಯತ್ನದಿಂದ 57 ಪ್ರಕರಣಗಳಿಗೆ ಪರಿಹಾರ ದೊರಕಿದೆ.
ಅಮದಳ್ಳಿ, ಕೊಡರ, ಹಟ್ಟಿಕೇರಿ, ಬಿಣಗ, ಚೆಂಡಿಯಾ, ಬಿರಾಡೆ ಈ ಗ್ರಾಮಗಳ ಕೆಲವು ನಿರಾಶ್ರಿತರ ಪ್ರಕರಣಗಳು ಅನೇಕ ವರ್ಷಗಳಿಂದ ಪರಿಹಾರಕ್ಕಾಗಿ ನಿರಂತರವಾಗಿ ಸರ್ಕಾರದ ಬಾಗಿಲು ತಟ್ಟುತ್ತಾ ಬಂದಿದ್ದರು . ಕೇಂದ್ರ ಸರಕಾರದ ಈ ಆದೇಶದಿಂದ ಈಗ 10.47 ಕೋಟಿ ರೂಪಾಯಿಗಳ ಈ ಪರಿಹಾರ ನಿಧಿಯ ಮಂಜೂರಾತಿಯಿಂದ ಸಂಕಷ್ಟದಲ್ಲಿದ್ದ ಕುಟುಂಬಗಳು ದೀರ್ಘಕಾಲದ ನಿರೀಕ್ಷೆಯಿಂದ ಮುಕ್ತಿಗೊಳ್ಳಲಿದೆ. ಕೆಲವೇ ದಿನಗಳಲ್ಲಿ ಈ 57 ಪ್ರಕರಣಗಳಿಗೆ ಪರಿಹಾರ ಅವರ ಖಾತೆಗಳಿಗೆ ಜಮಾ ಆಗಲಿದೆ. ಉಳಿದ ಪ್ರಕರಣಗಳಲ್ಲಿ ಹಂತ ಹಂತವಾಗಿ ಪರಿಹಾರವನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಆದೇಶಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಕೇಂದ್ರ ರಕ್ಷಣಾ ಮಂತ್ರಿಗಳಾದ ರಾಜನಾಥ ಸಿಂಗ್ ಅವರನ್ನು ಮತ್ತು ಜಿಲ್ಲಾಡಳಿತ, ಕೇಂದ್ರ ಹಾಗೂ ರಾಜ್ಯ ಸರಕಾರದ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.