
ಬೆಂಗಳೂರು: ವಿಜಯೇಂದ್ರನನ್ನು ತೆಗೆದರೆ, ನನ್ನನ್ನು ಹೊರಗೆ ಹಾಕದಿದ್ರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಅಮಿತ್ ಶಾಗೆ ಯಡಿಯೂರಪ್ಪ ಬ್ಲ್ಯಾಕ್‌ಮೇಲ್ ಮಾಡಿದ್ದರು. ಅದಕ್ಕಾಗಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕೆಳಮಟ್ಟದ ರಾಜಕೀಯ ಮಾಡಿ, ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ. ತಾನು ಸಾಯೋ ಮುಂಚೆ ವಿಜಯೇಂದ್ರನನ್ನು ಸಿಎಂ ಮಾಡೋದು ಅವರ ಆಸೆಯಾಗಿದೆ. ಹೀಗಾಗಿ ತಮ್ಮ ಮಗನ ರಕ್ಷಣೆಗಾಗಿ ಭಾಗಿಯಾಗಿದ್ದಾರೆ. ಜಗತ್ತಿನಲ್ಲಿಯೂ ಆಸ್ತಿ ಮಾಡೋಕೆ ಈ ಹೋರಾಟವನ್ನು ಯಡಿಯೂರಪ್ಪ, ವಿಜಯೇಂದ್ರ ಮಾಡುತ್ತಿದ್ದಾರೆ. ರೈತರು, ಬಡವರ ಪರವಾಗಿ ಯಡಿಯೂರಪ್ಪ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ತನ್ನ ಮಗನ ಕುರ್ಚಿ ಗಟ್ಟಿ ಮಾಡೋಕೆ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹೊಸ ಪಕ್ಷ ಕಟ್ಟುವ ವಿಚಾರವಾಗಿ ಮಾತನಾಡಿದ ಅವರು, ಯಾರು ಹೇಳಿದ್ರು ಹೊಸ ಪಕ್ಷ ಕಟ್ಟುತ್ತೇವೆ ಅಂತಾ? ನಾವು ಮೊದಲು ಸರ್ವೇ ಮಾಡುತ್ತೇವೆ. ಬಿಜೆಪಿಯಲ್ಲಿ ಈ ಕೆಟ್ಟ ಯಡಿಯೂರಪ್ಪ ಕುಟುಂಬ ಮುಂದುವರೆದರೆ ಹೊಸ ಪಕ್ಷದ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಕೆಟ್ಟ ಕುಟುಂಬ ತೆಗೆದರೆ ಮಾತ್ರ ಬಿಜೆಪಿಗೆ ಕರ್ನಾಟಕದಲ್ಲಿ ಭವಿಷ್ಯ ಇದೆ. ಇವರು ಭ್ರಷ್ಟಾಚಾರದಲ್ಲಿ ಇದ್ದಾರೆ. ಕೊರೊನಾ, ಡಿ-ನೋಟಿಫಿಕೇಶನ್ ಹಗರಣ ಇದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾತಾಡಲು ಇವರಿಗೇನು ನೈತಿಕತೆ ಇದೆ. ವಿಜಯೇಂದ್ರ ಚೇಲಾಗಳು ಯತ್ನಾಳ್ ರಾಜೀನಾಮೆ ಕೊಡಬೇಕು ಎಂದು ಹೇಳುತ್ತಾರೆ. ಡಿಕೆಶಿ ಕೊಟ್ಟ ಭಿಕ್ಷೆಯಿಂದ ಶಾಸಕ ಆಗಿರೋದು. ಹಾಗಾಗಿ ಮೊದಲು ವಿಜಯೇಂದ್ರ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ಶಿಕಾರಿಪುರದಿಂದ ಆರಿಸಿ ಬರಲಿ. ಚೇಲಾಗಳ ಕೈಯಲ್ಲಿ ಹೇಳಿಸುವುದನ್ನು ಬಿಟ್ಟು ಧಮ್ ಇದ್ದರೆ ವಿಜಯೇಂದ್ರ ನನ್ನ ಎದುರಿಗೆ ಮಾತಾಡಲಿ, 4 ಚೇಲಾಗಳನ್ನ ಇಟ್ಟುಕೊಂಡು ಹಂದಿಗಳಿಂದ ಮಾತಾಡಿಸಬೇಡ ಎಂದು ಕಿಡಿಕಾರಿದರು.