
ಹಿಂದೂ ಹಬ್ಬಗಳಲ್ಲಿ ರಾಮನವಮಿಯೂ ಕೂಡ ಒಂದು ಪ್ರಮುಖವಾದ ಹಬ್ಬ. ರಾಮನವಮಿಯನ್ನು ಶ್ರೀ ರಾಮನ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಲ್ಲಿ ಅಂದರೆ ಚೈತ್ರ ಮಾಸದ ಒಂಬತ್ತನೇ ದಿನದಂದು ಶ್ರೀ ರಾಮನವಮಿ ಆಚರಿಸಲಾಗುತ್ತದೆ. ಅಥವಾ ಯುಗಾದಿ ಹಬ್ಬದ ಎಂಟು ದಿನಗಳ ನಂತರ ರಾಮನವಮಿ ಆಚರಿಸಲಾಗುತ್ತದೆ.

ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಜನಿಸಿದ್ದು, ಏ.5 ರಂದು ಸಂಜೆ 7: 26ಕ್ಕೆ ತಿಥಿ ಪ್ರಾರಂಭವಾಗಿ ಏ.6 ರಂದು ಸಂಜೆ 7:22 ಕ್ಕೆ ಕೊನೆಗೊಳ್ಳುತ್ತದೆ. ಕೆಲವು ಕಡೆ ಚೈತ್ರ ಮಾಸದ ಪ್ರತಿಪಾದದಿಂದ 9 ದಿನಗಳವರೆಗೆ ರಾಮನವಮಿ ಉತ್ಸವ ನಡೆಯುತ್ತದೆ. ಈ ಸಮಯದಲ್ಲಿ ಕೆಲವರು 9 ದಿನಗಳ ಕಾಲ ಉಪವಾಸ ಮಾಡುವ ಆಚರಣೆಯನ್ನು ಪಾಲಿಸುತ್ತಾರೆ.

ಇತಿಹಾಸ:
ರಾಮನವಮಿ ಶ್ರೀ ರಾಮಾಯಣದ ಪ್ರಮುಖ ಪಾತ್ರಧಾರಿ ಭಗವಾನ್ ಶ್ರೀರಾಮನ ಜನ್ಮದಿನ. ಅಯೋಧ್ಯಾಧಿಪತಿ ದಶರಥ ಹಾಗೂ ಕೌಸಲ್ಯ ಪುತ್ರನಾದ ಶ್ರೀರಾಮ ವಿಷ್ಣುವಿನ 7ನೆಯ ಅವತಾರದಲ್ಲಿ ಜನಿಸುತ್ತಾನೆ. ಪ್ರಾರಂಭದಲ್ಲಿ ದಶರಥ ಹಾಗೂ ಆತನ ಮೂವರು ಪತ್ನಿಯರಿಗೂ ಸಂತಾನ ಭಾಗ್ಯ ಇರಲಿಲ್ಲ. ಆಗ ಋಷಿ ವಶಿಷ್ಠರ ಸಲಹೆಯ ಮೇರೆಗೆ ದಶರಥ ಮಹಾರಾಜ ಪುತ್ರ ಕಾಮೇಷ್ಟಿ ಯಜ್ಞವನ್ನು ಮಾಡಿದನು. ಬಳಿಕ ರಾಣಿ ಕೌಸಲ್ಯಗೆ ರಾಮ, ಸುಮಿತ್ರಿಗೆ ಶತ್ರುಘ್ನ ಹಾಗೂ ಲಕ್ಷ್ಮಣ, ಕೈಕೆಯಿಗೆ ಭರತ ಜನಿಸಿದರು. ಹೀಗೆ ರಾಮ ಜನಿಸಿದ ದಿನವನ್ನು ಶ್ರೀರಾಮನವಮಿ ಎಂದು ಆಚರಿಸಲಾಗುತ್ತದೆ. ತ್ರೇತಾಯುಗದಲ್ಲಿ ಜನಿಸಿದ ರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ದೈವಿಕ ಶಕ್ತಿ ನೆಲೆಸುತ್ತದೆ ಎಂಬುದು ನಂಬಿಕೆಯಾಗಿದೆ.

ಆಚರಣೆ ಹೇಗೆ?
ಶ್ರೀರಾಮ ನವಮಿಯಂದು ಭಕ್ತರು ಉಪವಾಸ ಮಾಡಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಮಾಯಣ ಪಾರಾಯಣ ಮಾಡುವುದು ಈ ಹಬ್ಬದ ಇನ್ನೊಂದು ವಿಶೇಷ. ಜೊತೆಗೆ ಭಜನೆ ರಾಮನ ಕೀರ್ತನೆಗಳನ್ನು 30 ಪಠಿಸುತ್ತಾರೆ. ಅನೇಕ ಕಡೆಗಳಲ್ಲಿ ರಾಮನ ದೇಗುಲಗಳಲ್ಲಿ ಕೀರ್ತನೆ, ರಥೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಕೆಲವು ಕಡೆ 9 ದಿನದ ರಾಮನ ಉತ್ಸವವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಕ ಹಾಗೂ ರಾಮ ಪಂಚಾಯತನದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ. ರಾಮನವಮಿಯಂದು ಪಾನಕ ಕೋಸಂಬರಿ ನೈವೇದ್ಯ ಇಟ್ಟು ಪೂಜೆ ಮಾಡೋದು ವಿಶೇಷ. ಇನ್ನು ಕೆಲವರು ರಾಮನವಮಿಯಂದು ರಾಮ ನಾಮ ಬರೆಯುತ್ತಾರೆ.

ದೇಶದ ಕೆಲವು ಪ್ರದೇಶಗಳಲ್ಲಿ ವಿಜೃಂಭಣೆಗಳಿಂದ ರಾಮನವಮಿ ಆಚರಿಸಲಾಗುತ್ತದೆ.
ಅಯೋಧ್ಯೆ: ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮನವಮಿಯಂದು ವಿಜೃಂಭಣೆಯಿಂದ ಪೂಜೆ, ಪವಿತ್ರ ಸ್ನಾನ, ಭವ್ಯ ಮೆರವಣಿಗೆ, ರಾಮಾಯಣ ಪಾಠ ನಡೆಯುತ್ತದೆ.
ಸೀತಾಮಡಿ : ಸೀತಾದೇವಿಯ ಜನ್ಮಸ್ಥಳವಾದ ಸೀತಾಮಡಿಯಲ್ಲಿ ರಾಮನವಮಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ವಿಶೇಷ ಪೂಜೆ, ಜಾತ್ರೆ ಕೂಡ ನಡೆಯುತ್ತದೆ.
