ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿಯವರು ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ನೀಡಿದ್ದಾರೆ. ಆದರೆ, ಇದಕ್ಕಿಂತ ಉತ್ತಮವಾದ ಖಾತೆ ಬೇಕೆಂದು ಪಟ್ಟು ಹಿಡಿದು, ಹಾಲಿ ಹಂಚಿಕೆ ಮಾಡಿರುವ ಖಾತೆ ಸ್ವೀಕರಿಸದೇ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಪದೇ ಪದೇ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿ ಇರುತ್ತಿದ್ದಾರೆ. ಇದು ಸಹಜವಾಗಿಯೇ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.
ಆನಂದ್ ಸಿಂಗ್ ಅವರ 15 ವರ್ಷಗಳ ರಾಜಕೀಯ ಜೀವನ ಬಹಳಷ್ಟು ಏರಿಳಿತದಿಂದ ಕೂಡಿದೆ. ಆರಂಭದಲ್ಲಿ ಸಮಾಜ ಸೇವೆ ಮೂಲಕ ಜನರ ಮಧ್ಯೆ ಗುರುತಿಸಿಕೊಂಡರು. ಬಳಿಕ 2008ರಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿ ಚುನಾಯಿತರಾದರು. 2012ರಲ್ಲಿ ಜಗದೀಶ ಶೆಟ್ಟರ ಸಂಪುಟದಲ್ಲಿ ಸಚಿವರಾದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಕೂಡ ಅನುಭವಿಸಿದರು. ಇಷ್ಟೆಲ್ಲ ನಡೆದರೂ 2013ರ ಚುನಾವಣೆಯಲ್ಲಿ ನಿರಾಯಾಸವಾಗಿ ಪುನಃ ಶಾಸಕರಾಗಿ ಆಯ್ಕೆಯಾದರು.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದದ್ದರಿಂದ ಐದು ವರ್ಷ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಆಗಲಿಲ್ಲ’ ಎಂದು ಸ್ವತಃ ಅವರೇ ಅನೇಕ ಸಲ ಹೇಳಿಕೆ ಕೊಟ್ಟು ತಮ್ಮ ವೈಫಲ್ಯ ಒಪ್ಪಿಕೊಂಡರು. 2018ರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇದ್ದಾಗ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡರು. ‘ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ’ ಎಂದು ಕಾರಣ ಕೊಟ್ಟು ಪಕ್ಷ ತೊರೆದರು. ಇಷ್ಟಾದರೂ ಜನ ಚುನಾವಣೆಯಲ್ಲಿ ಕೈಬಿಡಲಿಲ್ಲ.
ಆದರೆ, ಒಂದು ವರ್ಷ ಕಳೆಯುವುದರೊಳಗೆ ಪುನಃ ಕಾಂಗ್ರೆಸ್‌ಗೆ ವಿದಾಯ ಹೇಳಿ ಮಾತೃಪಕ್ಷ ಬಿಜೆಪಿಗೆ ಮರಳಿದರು. ಉಪಚುನಾವಣೆಯಲ್ಲಿ ಗೆದ್ದರು. ‘ಕ್ಷೇತ್ರದ ಅಭಿವೃದ್ಧಿ, ವಿಜಯನಗರ ಜಿಲ್ಲೆ ರಚನೆಯ ಉದ್ದೇಶದಿಂದ ಕಾಂಗ್ರೆಸ್ ತೊರೆದಿರುವೆ. ನನಗೆ ಸಚಿವ ಸ್ಥಾನಕ್ಕಿಂತ ವಿಜಯನಗರ ಜಿಲ್ಲೆ ರಚನೆಯೇ ಮುಖ್ಯ’ ಎಂದು ಹೇಳಿಕೊಂಡರು. ಜಿಲ್ಲೆ ರಚನೆಗೂ ಮುನ್ನವೇ ಸಚಿವರಾದರು.
ಅರಣ್ಯ ಸಚಿವರಾದಾಗ ಬಹಳ ಹುಮ್ಮಸ್ಸಿನಿಂದ ಓಡಾಡಿ ಕೆಲಸ ಮಾಡಿದರು. ಆದರೆ, ಎರಡೆರಡೂ ಸಲ ಖಾತೆ ಬದಲಿಸಿದಾಗ ಉತ್ಸಾಹ ಕಳೆದುಕೊಂಡರು. ಹಜ್ ಮತ್ತು ವಕ್ಫ್ ಖಾತೆ ಕೊಟ್ಟಾಗಲಂತೂ ಅದರ ಬಗ್ಗೆ ಆಸಕ್ತಿಯೇ ತೋರಿಸಲಿಲ್ಲ. ಬದಲಾದ ರಾಜಕೀಯ ಸ್ಥಿತ್ಯಂತರಗಳಿಂದ ಬಸವರಾಜ ಬೊಮ್ಮಾಯಿ ಸಿ.ಎಂ. ಆದರು. ಖಾತೆ ಹಂಚಿಕೆ ಮಾಡುತ್ತಿದ್ದಂತೆ ಅವರ ಬಗ್ಗೆ ಮುನಿಸಿಕೊಂಡರು. ಅಷ್ಟೇ ಅಲ್ಲ, ತಮ್ಮ ಶಾಸಕರ ಕಚೇರಿ ಬಂದ್ ಮಾಡಿದರು. ರಾಜೀನಾಮೆಯ ಪ್ರಹಸನ, ರಾಜಕೀಯ ಜೀವನ ಅಂತ್ಯದ ಮಾತುಗಳನ್ನಾಡಿದರು. ಸಿ.ಎಂ ಕರೆಸಿ ಮಾತನಾಡಿದ ನಂತರ ಉಲ್ಟಾ ಹೊಡೆದರು.
ಹೀಗೆ ಒಂದಿಲ್ಲೊಂದು ಕಾರಣದಿಂದ ವಿಜಯನಗರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಜನ ಭಾವಿಸಿದರೆ, ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಬಿಜೆಪಿಯ ಮುಖಂಡರು ಹೇಳುತ್ತಿದ್ದಾರೆ.
‘ಅಭಿವೃದ್ಧಿ ಮಾಡುವ ಮನಸ್ಸು, ಇಚ್ಛಾಶಕ್ತಿ ಹೊಂದಿದ್ದರೆ ಯಾವ ಖಾತೆ ಕೊಟ್ಟರೂ ಮಾಡಬಹುದು. ಖಾತೆಗಾಗಿಯೇ ಪ್ರಹಸನ ಮಾಡುವುದು ಎಷ್ಟರಮಟ್ಟಿಗೆ ಸರಿ. ಇದರಿಂದ ವಿಜಯನಗರಕ್ಕೆ ಒಳ್ಳೆಯ ಹೆಸರು ಬರಬಹುದೇ?’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯ ಅನೇಕ ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.
‘ಆನಂದ್ ಸಿಂಗ್ ಅವರಿಗೆ ಪಕ್ಷ ನಿಷ್ಠೆ ಎನ್ನುವುದೇ ಇಲ್ಲ. ಅಧಿಕಾರದ ಆಸೆಯಿಂದ ಈ ಹಿಂದೆ ಕಾಂಗ್ರೆಸ್‌ಗೆ ಹೋಗಿ, ಪುನಃ ಬಿಜೆಪಿಗೆ ಮರಳಿದರು. ಈಗ ಸಚಿವ ಸ್ಥಾನ ಕೊಟ್ಟರೂ ಖಾತೆಗಾಗಿ ಪಕ್ಷದ ಹೆಸರಿಗೆ ಧಕ್ಕೆಯಾಗುವಂತೆ ವರ್ತಿಸುತ್ತಿರುವುದು ಎಷ್ಟು ಸರಿ. ಕ್ಷೇತ್ರದಲ್ಲಿ ಏನೆಲ್ಲ ನಡೆಯುತ್ತಿದೆ ಎನ್ನುವುದನ್ನು ಪಕ್ಷದ ವರಿಷ್ಠರು, ಸಂಘದ ಪ್ರಮುಖರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ’ ಎಂದು ಬಿಜೆಪಿಯ ಹಲವು ಮುಖಂಡರು ತಿಳಿಸಿದ್ದಾರೆ.
‘ಪ್ರವಾಸೋದ್ಯಮ ನಿರಾಕರಣೆ ಸೋಜಿಗ’
ಅವಳಿ ಜಿಲ್ಲೆಗಳಾದ ವಿಜಯನಗರ-ಬಳ್ಳಾರಿಯಲ್ಲಿ ಅತಿ ಹೆಚ್ಚು ಪ್ರವಾಸಿ ತಾಣಗಳಿವೆ. ಈ ಜಿಲ್ಲೆಗೆ ಪ್ರವಾಸೋದ್ಯಮದಂತಹ ಮಹತ್ವದ ಖಾತೆ ಒಲಿದಿದೆ. ಅದನ್ನು ಆನಂದ್ ಸಿಂಗ್ ನಿರಾಕರಿಸುತ್ತಿರುವುದು ಸೋಜಿಗ ಎನ್ನುತ್ತಾರೆ ಗೈಡ್‌ಗಳು.
‘ವಿಶ್ವ ಪ್ರಸಿದ್ಧ ಹಂಪಿ, ತುಂಗಭದ್ರಾ ಜಲಾಶಯ, ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ಗುಂಡಾ ಸಸ್ಯ ಉದ್ಯಾನ, ಅಂಕಸಮುದ್ರ ಪಕ್ಷಿಧಾಮ, ಬಂಡೆರಂಗನಾಥ ಸ್ವಾಮಿ ದೇಗುಲ, ದರೋಜಿ-ಗುಡೇಕೋಟೆ ಕರಡಿಧಾಮ, ಕೊಟ್ಟೂರು-ಉಜ್ಜಿನಿ, ಮೈಲಾರ, ಉಚ್ಚೆಂಗೆಮ್ಮ ದೇವಿ ದೇಗುಲ, ಸಂಡೂರು ಕುಮಾರಸ್ವಾಮಿ ದೇವಸ್ಥಾನ, ನಾರಿಹಳ್ಳ ಜಲಾಶಯ, ಬಳ್ಳಾರಿ ಕೋಟೆ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಅವುಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಬಹುದು. ಹಂಪಿಯಲ್ಲಿ ಈಗಲೂ ಕನಿಷ್ಠ ಮೂಲಸೌಕರ್ಯಗಳಿಲ್ಲ. ಈ ಬಗ್ಗೆ ಆನಂದ್ ಸಿಂಗ್ ಅವರೇ ಅನೇಕ ಸಲ ಹೇಳಿದ್ದಾರೆ. ಹೀಗಿರುವಾಗ ಪ್ರವಾಸೋದ್ಯಮ ಖಾತೆ ನಿರಾಕರಿಸಿ, ಬೇರೊಂದು ಖಾತೆಗೆ ಪಟ್ಟು ಹಿಡಿದಿರುವುದು ಸರಿಯಲ್ಲ’ ಎನ್ನುತ್ತಾರೆ ಪ್ರವಾಸಿ ಮಾರ್ಗದರ್ಶಿಗಳು.