ಈಗಲೂ ವಿಜಯೇಂದ್ರ ಹಸ್ತಕ್ಷೇಪ: ಬಸವರಾಜ ಯತ್ನಾಳ್‌

Spread the love

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೆರಳು ಆಗವುದಿಲ್ಲ ಎಂಬ ವಿಶ್ವಾಸವಿದೆ. ಅವರು ನೆರಳಾಗಿದ್ದರೆ ಯಡಿ ಯೂರಪ್ಪ ಅವರು ನೇಮಕ ಮಾಡಿದ ಸಿಬಂದಿಯೇ ಮುಂದುವರಿಯುತ್ತಿದ್ದರು. ಆದರೆ ವಿಜಯೇಂದ್ರ ಅವರು ಈಗಲೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಳಿಕ ಯಡಿಯೂರಪ್ಪ ಒತ್ತಡದಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಅವರು ಅವಧಿ ಪೂರ್ಣಗೊಳಿಸಲಿ ಎಂದು ಚಾಮುಂಡೇಶ್ವರಿಗೆ ಬೇಡಿಕೊಳ್ಳುವೆ. ಮುಖ್ಯಮಂತ್ರಿಯವರಿಗೆ ಮೂರ್‍ನಾಲ್ಕು ತಿಂಗಳು ಕಾಲಾವಕಾಶ ನೀಡಬೇಕು. ಅನಂತರ ಅವರ ಆಡಳಿತ ನಿರ್ವಹಣೆ ಬಗ್ಗೆ ವ್ಯಾಖ್ಯಾನಿಸಬಹುದು ಎಂದರು.

ಜಗದೀಶ ಶೆಟ್ಟರ್‌ ತ್ಯಾಗದ ಪ್ರತಿರೂಪ ವಾಗಿ ಬಸವರಾಜ ಬೊಮ್ಮಾಯಿ ಸಿಎಂ ಆಗಿ ದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರಸ್ತುತ ಸರಕಾರದಲ್ಲೂ ಸ್ವಲ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾವೇರಿ ನಿವಾಸದಲ್ಲಿನ ಕೆಲವು ದೃಶ್ಯಗಳ ಬಗ್ಗೆ ಮಾಹಿತಿ ಇದೆ. ಇನ್ನೊಂದು ವಾರ ತಡೆಯಿರಿ, ಎಲ್ಲವನ್ನೂ ಹೇಳುವೆ ಎಂದರು.