
ಗುಣಾ (ಮಧ್ಯಪ್ರದೇಶ): ರಾಮಾಯಣ ಕತೃ ಮಹರ್ಷಿ ವಾಲ್ಮೀಕಿಯನ್ನು ತಾಲಿಬಾನಿಗಳೊಂದಿಗೆ ಹೋಲಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಆರೋಪದ ಮೇಲೆ ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ಮಧ್ಯಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಿಜೆಪಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಕಾರ್ಯದರ್ಶಿ ಸುನೀಲ್ ಮಾಲ್ವಿಯಾ ಮತ್ತು ವಾಲ್ಮೀಕಿ ಸಮುದಾಯದ ಇತರರು ನೀಡಿದ ದೂರಿನ ಅನ್ವಯ ಸೋಮವಾರ ರಾಣಾ ವಿರುದ್ಧ ಗುಣಾ ಜಿಲ್ಲೆಯ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ರಾಣಾ ಸುದ್ದಿವಾಹಿನಿಯೊಂದಿಗೆ ಮಾತನಾಡುವ ವೇಳೆ, ‘ವಾಲ್ಮೀಕಿ ರಾಮಾಯಣ ಬರೆದ ನಂತರ ಜನರ ಪಾಲಿಗೆ ದೇವರಾದರು. ಅದಕ್ಕೂ ಮುನ್ನ ಅವರು ಡಕಾಯಿತರಾಗಿದ್ದರು. ಹೀಗೆ ವ್ಯಕ್ತಿಯ ಗುಣ ಬದಲಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ತಾಲಿಬಾನಿಗಳು ಈಗ ಉಗ್ರರಾಗಿರಬಹುದು. ಕ್ರಮೇಣ ಅವರ ನಡತೆಯೂ ಬದಲಾಗಬಹುದು’ ಎಂದು ಹೇಳಿದ್ದರು.
ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದ ಮಾಲ್ವಿಯಾ, ‘ರಾಣಾ, ಮಹರ್ಷಿ ವಾಲ್ಮಿಕಿಯವರನ್ನು ತಾಲಿಬಾನಿಗಳಿಗೆ ಹೋಲಿಸುವ ಮೂಲಕ ಅವರಿಗೆ ಅಗೌರವ ತೋರಿದ್ದಾರೆ. ಇದರೊಂದಿಗೆ ಹಿಂದೂಗಳು ಮತ್ತು ಮಹರ್ಷಿ ವಾಲ್ಮೀಕಿ ಸಮುದಾಯದವರ ಭಾವನಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ದೂರು ದಾಖಲಿಸಿದ್ದೇವೆ’ಎಂದು ಹೇಳಿದ್ದರು.
‘ರಾಣಾ ವಿರುದ್ಧ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಉತ್ತರ ಪ್ರದೇಶದ ಲಖನೌ ಜಿಲ್ಲೆಯ ಹಜರತ್‌ಗಂಜ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ’ಎಂದು ಗುಣಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ತಿಳಿಸಿದರು.