ನೆಲ-ಜಲ, ಭಾಷೆ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

Spread the love

ಬೆಂಗಳೂರು : ನೆಲ-ಜಲ, ಭಾಷೆ ವಿಷಯದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಯಾರೊಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾರು ಆತಂಕಪಡುವ ಅಗತ್ಯವೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಮತ್ತು ಮಹದಾಯಿ ನದಿನೀರು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜೆಡಿಎಸ್ ನಾಯಕರು ಪಾದಯಾತ್ರೆ ಮಾಡುವುದರ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ, ನಮ್ಮ ನೆಲ-ಜಲ, ಭಾಷೆ ವಿಷಯದಲ್ಲಿ ಯಾರೇ ಪ್ರತಿರೋಧ ವ್ಯಕ್ತಪಡಿಸಿದರೂ ನಾವು ಯೋಜನೆ ಕಾರ್ಯ ಗತಗೊಳಿಸುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿರೋಧ ವ್ಯಕ್ತಪಡಿಸುವುದು ಅವರ ಹಕ್ಕಾದರೆ ಯೋಜನೆಗಳನ್ನು ಅನುಷ್ಠಾನ ಮಾಡುವುದು ನಮ್ಮ ಹಕ್ಕು. ಇದಕ್ಕೆ ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದರು. ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಸಾಕು ರಾಜ್ಯದ ವಿಷಯಗಳಲ್ಲಿ ಯಾವ ಯಾವ ಸರ್ಕಾರಗಳು ಹೇಗೆ ನಡೆದುಕೊಂಡಿವೆ ಎಂಬುದಕ್ಕೆ ಸಾಕ್ಷಿ ಇದೆ. ರಾಜ್ಯದ ವಿಷಯ ಬಂದಾಗ ಪಕ್ಷಬೇಧ ಮರೆತು ಹೋರಾಟ ಮಾಡಿದ್ದೇವೆ. ಈಗಲೂ ಹೋರಾಟ ಮಾಡುತ್ತೇವೆ ಎಂದರು.

ನೆಲಜಲ ವಿಚಾರದಲ್ಲಿ ನಾವು ನಮ್ಮ ಹಕ್ಕನ್ನು ಪಡೆಯುತ್ತೇವೆ. ಹಿಂದಿನ ಸಂದರ್ಭಗಳಲ್ಲಿ ಏನೇನಾಗಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಹಿಂದೆ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಿದ್ದೇವೆ. ಇಂಥ ವಿಷಯದಲ್ಲಿ ಯಾರೊಬ್ಬರೂ ರಾಜಕಾರಣ ಮಾಡಬಾರದು. ಜೆಡಿಎಸ್‍ನವರು ಪಾದಯಾತ್ರೆ ಮಾಡಲು ಸ್ವತಂತ್ರರು ಎಂದು ಎಂದರು.

ನಾಳೆ ದೆಹಲಿಗೆ: ಕೃಷಿ, ಹಣಕಾಸು, ನೀರಾವರಿ, ರಕ್ಷಣಾ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಲು ನಾಳೆ ಸಂಜೆ ದೆಹಲಿಗೆ ತೆರಳುತ್ತಿರುವುದಾಗಿ ಬೊಮ್ಮಾಯಿ ಅವರು ತಿಳಿಸಿದರು. ಈ ಸಚಿವರನ್ನು ಭೇಟಿಯಾಗಲು ನಾನು ಸಮಯಾವಕಾಶ ಕೇಳಿದ್ದೆ. ಗುರುವಾರ ಬೆಳಗ್ಗೆ ಎಲ್ಲರನ್ನು ಭೇಟಿಯಾಗಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಚರ್ಚೆ ಮಾಡುವೆ ಎಂದರು.

ಇದೇ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಕೂಡ ಭೇಟಿಯಾಗಲಿದ್ದೇನೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಾಗಿ ಚರ್ಚಿಸುವುದಾಗಿ ವಿವರಿಸಿದರು. ಅದು ಸಂಪುಟ ರಚನೆಯೇ ಇರಬಹುದು, ನಿಗಮ ಮಂಡಳಿಯ ಅಧ್ಯಕ್ಷರ ನೇಮಕಾತಿಯೇ ಇರಬಹುದು ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವುದರ ಬಗ್ಗೆಯೂ ಸಲಹೆ ಪಡೆಯಲಿದ್ದೇನೆ ಎಂದರು.

ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ 3ನೇ ಅಲೆ ಬರಬಹುದೆಂದು ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ. ಹೀಗಾಗಿ ಮುಂದೆ ಕೈಗೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಇದೇ 30ರಂದು ತಜ್ಞರು ಮತ್ತು ಕಾರ್ಯಪಡೆ ಸದಸ್ಯರ ಸಭೆಯನ್ನು ಕರೆಯಲಾಗುವುದು.

ಈಗಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೇ ಮುಂದುವರೆಯಲು ಸೂಚನೆ ಕೊಟ್ಟಿದ್ದೇನೆ. ಸಚಿವರ ನೇತೃತ್ವದ ಕಾರ್ಯಪಡೆಗೆ ಹೊಸಬರನ್ನು ಸೇರಿಸಿಕೊಳ್ಳಬೇಕೇ ಅಥವಾ ಹಳಬರನ್ನೇ ಮುಂದುವರೆಸಬೇಕೆ ಎಂಬುದರ ಬಗ್ಗೆ ಚರ್ಚೆಮಾಡಲಾಗುವುದು. 3ನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಸಾರ್ವಜನಿಕರು ಆತಂಕಕ್ಕ ಒಳಗಾಗಬಾರದೆಂದು ಸಿಎಂ ಮನವಿ ಮಾಡಿದರು.