ಇನ್ನು ಮುಗಿಯದ ಗಂಗಾವಳಿ ನದಿ ಸೇತುವೆ ಕಾಮಗಾರಿ; 2 ವರ್ಷದಿಂದ ಆಮೆ ವೇಗದಲ್ಲೆ ನಡೆಯುತ್ತಿದೆ ಕೆಲಸ

Spread the love

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಗೋಕರ್ಣ ಮತ್ತು ಅಂಕೋಲಾ ತಾಲೂಕಿನ ಮಂಜಗುಣಿ‌ ಗ್ರಾಮ ಸಂಪರ್ಕಿಸುವ ಗಂಗಾವಳಿ ನದಿಗೆ (Gangavali River) ಅಡ್ಡಲಾಗಿ ಸೇತುವೆ ನಿರ್ಮಾಣ (Bridge Construction) ಪ್ರಾರಂಭವಾಗಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದೆ. ಆದರೆ ಇದುವರೆಗೂ ಸಹ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಆಮೆ ವೇಗದ ಕಾಮಗಾರಿಗೆ ಜನರು ಹೈರಾಣಾಗಿದ್ದಾರೆ.

ಎಲ್ಲಿಂದ ಎಲ್ಲಿಗೆ ಸಂಪರ್ಕಿಸುವ ಸೇತುವೆ?

ಗೋಕರ್ಣ ಮತ್ತು ಗಂಗಾವಳಿ ನದಿಗೆ ಹೊಂದಿಕೊಂಡ ನದಿಯ ಮತ್ತೊಂದೆಡೆ ನಾಡುಮಾಸ್ಕೇರಿ, ಅಗ್ರಗೋಣ ಸೇರಿದಂತೆ ಹತ್ತಾರು ಗ್ರಾಮಗಳಿವೆ. ಆ ಭಾಗದ ಜನರು ಅಂಕೋಲಾ ಪಟ್ಟಣಕ್ಕೆ ಆಗಮಿಸಲು ಗಂಗಾವಳಿ ನದಿ ದಾಟಿದಲ್ಲಿ ಮಾರ್ಗ ಸಮೀಪವಾಗಲಿದೆ. ಹೀಗಾಗಿ ಹಿಂದಿನಿಂದ ಈ ಮಾರ್ಗದಲ್ಲಿ ನದಿಯಲ್ಲಿ ಬಾರ್ಜ್ ಓಡಿಸಲಾಗುತ್ತಿತ್ತು. ಆದರೆ ಮಳೆಗಾಲದಲ್ಲಿ ನದಿ ಉಕ್ಕಿ ಹರಿಯುವ ಸಂದರ್ಭದಲ್ಲಿ ಬಾರ್ಜ್ ಓಡಾಟ ಸಾಧ್ಯವಿಲ್ಲವಾಗಿದ್ದು ಜನರ ಓಡಾಟಕ್ಕೆ ತೊಂದರೆ ಆಗುವುದರಿಂದ ಶಾಶ್ವತ ಸೇತುವೆಗೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಅದರಂತೆ ಕಳೆದ ಎರಡು ವರ್ಷಗಳ ಹಿಂದೆ ಸೇತುವೆ ಮಂಜೂರಾಗಿ ಕಾಮಗಾರಿ‌ ಸಹ ಪ್ರಾರಂಭವಾಗಿದೆ. ಆದ್ರೆ ಕಳೆದೆರಡು ವರ್ಷಗಳಿಂದ ವಕ್ಕರಿಸಿರುವ ಕೊರೋನಾ ಮಹಾಮಾರಿಯಿಂದಾಗಿ ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದುವರೆಗೂ ಕೇವಲ ಶೇ. 70 ರಷ್ಟು ಮಾತ್ರ ಸೇತುವೆ ಕಾಮಗಾರಿ ಮುಗಿದಿದೆ. ಇನ್ನು ಶೇ. 30 ರಷ್ಟು ಕೆಲಸ ಬಾಕಿ ಇದೆ. ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಬಾರ್ಜ್ ಓಡಾಟ ಸಹ ಸ್ಥಗಿತಗೊಂಡಿದೆ. ಆದರೆ ಇದರಿಂದ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದವರು ಪರದಾಡುವಂತಾಗಿದ್ದು ಬೇರೆ ದಾರಿ ಇಲ್ಲದೇ ಜೀವ ಕೈಯಲ್ಲಿ ಹಿಡಿದು ಬೋಟುಗಳಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಾರ್ಜ್ ಇಲ್ಲದೆ ದೋಣಿಯ ಮೇಲೆ ನಿತ್ಯ ಸಂಚಾರ

ಇನ್ನು ಗಂಗಾವಳಿ ದಾಟಿಕೊಂಡು ಮಂಜಗುಣಿ ಭಾಗಕ್ಕೆ ಸಾಕಷ್ಟು ಮಂದಿ ಉದ್ಯೋಗಕ್ಕಾಗಿ ಪ್ರತಿನಿತ್ಯ ಆಗಮಿಸುತ್ತಾರೆ. ನದಿ ದಾಟಿದಲ್ಲಿ ಅಂಕೋಲಾ ಪಟ್ಟಣಕ್ಕೆ ಕೇವಲ ಐದಾರು ಕಿಲೋಮೀಟರ್ ಸಮೀಪದಲ್ಲಿದ್ದು ಹೆದ್ದಾರಿಯಲ್ಲಿ ಆಗಮಿಸುವುದಾದಲ್ಲಿ 20 ರಿಂದ 25 ಕಿಲೋ‌ಮೀಟರ್ ಸುತ್ತುವರಿದು ಬರಬೇಕಿದೆ. ಹೀಗಾಗಿ ಗಂಗಾವಳಿ ಮಾರ್ಗವನ್ನ ಸಾಕಷ್ಟು ಮಂದಿ ಅವಲಂಬಿಸಿಕೊಂಡಿದ್ದು ಈ ಭಾಗದಲ್ಲಿ ಬ್ರಿಡ್ಜ್ ನಿರ್ಮಾಣವಾಗುವುದರಿಂದ ಸಾಕಷ್ಟು ಅನುಕೂಲವಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಬ್ರಿಡ್ಜ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಈ ವರ್ಷವೂ ಪೂರ್ಣಗೊಳ್ಳುವ ಸಾಧ್ಯತೆಗಳಿಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ಮತ್ತೆ ದೋಣಿ ಓಡಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾವಾಗಿದೆ. ಅಲ್ಲದೇ ಸೇತುವೆ ಕಾಮಗಾರಿಗಾಗಿ ನದಿಗೆ ಮಣ್ಣನ್ನ ತುಂಬಿಸಿ ಹರಿವನ್ನ‌ ಹಿಡಿದಿಟ್ಟಿದ್ದರಿಂದಾಗಿ ಈ ಬಾರಿ ಗಂಗಾವಳಿ ಪಾತ್ರದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನುವ ಆರೋಪಗಳು ಸಹ ಕೇಳಿಬಂದಿದೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಸೇತುವೆಯನ್ನ ಪೂರ್ಣಗೊಳಿಸಿ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.

ಗ್ರಾಮಸ್ಥರ ಬಹುವರ್ಷದ ಬೇಡಿಕೆಯಂತೆ ಗಂಗಾವಳಿಗೆ ಸೇತುವೆ ಮಂಜೂರಾಗಿದೆಯಾದ್ರೂ ಎರಡು ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದಿರುವುದು ನಿಜಕ್ಕೂ ದುರಂತವೇ ಸರಿ. ಇನ್ನಾದ್ರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸೇತುವೆ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿಕೊಡಬೇಕಾಗಿದೆ. ಇಲ್ಲವಾದಲ್ಲಿ ಮತ್ತೆ ಜನರು ಜೀವ ಕೈಯಲ್ಲಿ ಹಿಡಿದು ದೋಣಿ ಸಂಚಾರ ಮಾಡಬೇಕಾದ ಪರಿಸ್ಥಿತಿ ಮುಂದುವರೆಯಲಿದೆ.