ಮೈಸೂರು ಗ್ಯಾಂಗ್​ರೇಪ್​ ಪ್ರಕರಣ: ತನಿಖಾಧಿಕಾರಿಗಳಿಗೆ ತಲೆನೋವಾದ ಸಂತ್ರಸ್ತೆಯ ನಡೆ!

Spread the love

ಮೈಸೂರು: ಚಾಮುಂಡಿ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಪ್ರಕ್ರಿಯೆಗೆ ಸಂತ್ರಸ್ತೆ ಅಸಹಕಾರ ನೀಡುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.

ಪೊಲೀಸ್ ಹೇಳಿಕೆ ನೀಡಲೂ ಸಹ ಸಂತ್ರಸ್ತೆ ನಿರಾಕರಿಸುತ್ತಿದ್ದಾಳೆ. ಇದುವರೆಗೂ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಮಾತ್ರ ಆಕೆ ಸಂಭಾಷಣೆ ನಡೆಸಿದ್ದಾಳೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ಪ್ರಮೀಳಾ ನಾಯ್ಡು ಅವರ ಭೇಟಿಗೂ ಸಂತ್ರಸ್ತೆ ಒಪ್ಪುತ್ತಿಲ್ಲ.

ಸಂತ್ರಸ್ತೆ ನನ್ನನ್ನು ಯಾರೂ, ಏನನ್ನೂ ಕೇಳಬೇಡಿ ಎನ್ನುತ್ತಿದ್ದಾಳೆ. ಆಕೆಯ ತಂದೆ-ತಾಯಿಯಿಂದಲೂ ಕೂಡ ನಿರೀಕ್ಷಿತ ನೆರವು ಸಿಗುತ್ತಿಲ್ಲ. ಅವರ ಮನವೊಲಿಕೆಗೆ ಪ್ರಯತ್ನಿಸಿ ಹೈರಾಣಾಗಿರುವ ತನಿಖಾಧಿಕಾರಿಗಳು ಅನಿವಾರ್ಯವಾಗಿ ಸಂತ್ರಸ್ತೆಯ ಸ್ನೇಹಿತನಿಗೆ ದುಂಬಾಲು ಬಿದ್ದಿದ್ದಾರೆ. ಈ ವಿಚಾರಗಳನ್ನು ಪರೋಕ್ಷವಾಗಿ ಎಡಿಜಿಪಿ ಪ್ರತಾಪ್ ರೆಡ್ಡಿ ಒಪ್ಪಿಕೊಂಡಿದ್ದಾರೆ.

ಸಂತ್ರಸ್ತೆಯಿಂದ ನಮಗೆ ಯಾವುದೇ ಮಾಹಿತಿ ಸಿಕಿಲ್ಲ. ಸಂತ್ರಸ್ತೆಯ ಸ್ನೇಹಿತನಿಂದ ಮಾಹಿತಿ ಪಡೆದಿದ್ದೇವೆ. ಅವುಗಳ ಆಧಾರದ ಮೇಲೆ ಇಲಾಖೆ ವತಿಯಿಂದಲೇ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ.