ಮೂರು ವರ್ಷಗಳ ಡಿಪ್ಲೊಮಾ ಇನ್ಮುಂದೆ ಪಿಯುಸಿಗೆ ತತ್ಸಮಾನ; ಶಿಕ್ಷಣ ಇಲಾಖೆ ಆದೇಶ, ಆದ್ರೆ ಎರಡು ಷರತ್ತು.

Spread the love

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಷರತ್ತಿನ ಮೇಲೆ ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಿಪ್ಲೊಮಾ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಸರ್ಕಾರದ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಏಕೆಂದರೆ, ಇದು ಪಿಯುಸಿಗೆ ತತ್ಸಮಾನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತತ್ಸಮಾನ ಎಂದು ಘೋಷಿಸುವಂತೆ ಅಭ್ಯರ್ಥಿಗಳು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.

ಈ ಹಿನ್ನೆಲೆಯಲ್ಲಿ ಸರ್ಕಾರ ಇದಕ್ಕಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಅದರಿಂದ ವರದಿ ಪಡೆದು ಇದೀಗ ಎರಡು ಷರತ್ತುಗಳನ್ನು ವಿಧಿಸಿ ತತ್ಸಮಾನ ಎಂದು ಘೋಷಣೆ ಮಾಡಿದೆ.
ನೇರ ನೇಮಕಾತಿ, ಅನುಕಂಪದ ಆಧಾರದ ನೇಮಕಾತಿ ಹೊಂದಲು ಮತ್ತು ಉನ್ನತ ಶಿಕ್ಷಣ ಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಯು ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸುವುದು.

2015ಕ್ಕಿಂತ ಹಿಂದಿನ ವರ್ಷಗಳಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯು ಮೂರು ವರ್ಷಗಳ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಕರ್ನಾಟಕ ಲೋಕ ಸೇವಾ ಆಯೋಗ(ಕೆಪಿಎಸ್‌ಸಿ) ನಡೆಸುವ ಇಲಾಖಾ ಪರೀಕ್ಷೆಗಳ ಜತೆಗೆ ಕನ್ನಡ ಭಾಷಾ ಪರೀಕ್ಷೆಯನ್ನು ತೇರ್ಗಡೆ ಹೊಂದುವುದು ಕಡ್ಡಾಯ ಎಂದು ಷರತ್ತು ವಿಧಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಇದರಿಂದ ಲಕ್ಷಾಂತರ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಎಲ್ಲ ಸರ್ಕಾರಿ ಇಲಾಖೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ.