ಬಿಜೆಪಿಗೆ ಅಗ್ನಿಪರೀಕ್ಷೆ : ಬಿಎಸ್‍ವೈ ಪ್ರಚಾರದ ಮೇಲೆ ಎಲ್ಲಾ ಅವಲಂಬನೆ

Spread the love

ಬೆಂಗಳೂರು : ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಚ್ಚು ಪ್ರಚಾರ ನಡೆಸಿದರೆ ಮಾತ್ರ ನಿರೀಕ್ಷಿತ ಫಲಿತಾಂಶ ಬರಬಹುದೆಂದು ಆಂತರಿಕ ವರದಿ ಮಾಹಿತಿ ನೀಡಿದೆ.

ದೆಹಲಿ ಮೂಲದ ಖಾಸಗಿ ಸಂಸ್ಥೆಯೊಂದು ನಡೆಸಿರುವ ಆಂತರಿಕ ವರದಿಯಲ್ಲಿ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಕ್ರಿಯವಾಗಿ ಪಾಲ್ಗೊಂಡರೆ ಮಾತ್ರ ಫಲಿತಾಂಶ ಸಕಾರಾತ್ಮಕವಾಗಿರುತ್ತದೆ ಎಂದು ಬಿಜೆಪಿಗೆ ಮಾಹಿತಿ ಕೊಟ್ಟಿದೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಪಕ್ಷ ನಡೆಸುವ ಆಂತರಿಕ ವರದಿಯಂತೆ ಯಡಿಯೂರಪ್ಪ ಸಕ್ರಿಯವಾಗಿ ಪ್ರಚಾರ ನಡೆಸುವುದು ಹಾಗೂ ಜೆಡಿಎಸ್ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಹೆಚ್ಚಿನ ಮತ ಗಳಿಸಿದರೆ ಕಾಂಗ್ರೆಸ್‍ಗೆ ನಷ್ಟವಾಗಿ ಬಿಜೆಪಿಗೆ ವರದಾನವಾಗಲಿದೆ ಎಂದು ಹೇಳಿದೆ.

ಎರಡು ಕ್ಷೇತ್ರಗಳಲ್ಲಿ ಲಿಂಗಾಯಿತ ವೀರಶೈವ ಸಮುದಾಯ ನಿರ್ಣಾಯಕವಾಗಿದ್ದು, ಈ ಸಮುದಾಯದ ಮತಗಳನ್ನು ಸೆಳೆಯುವ ಸಾಮಥ್ರ್ಯ ಇರುವುದು ಯಡಿಯೂರಪ್ಪನವರಿಗೆ ಮಾತ್ರ. ಹಾಗಾಗಿ ಅವರನ್ನು ಪಕ್ಷವು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚು ಮನ್ನಣೆ ನೀಡಬೇಕೆಂದು ಸಲಹೆ ನೀಡಿದೆ.

ಯಡಿಯೂರಪ್ಪ ಪ್ರಚಾರಕ್ಕೆ ಬಂದರೆ ಕೇವಲ ಒಂದು ಸಮುದಾಯ ಮಾತ್ರವಲ್ಲದೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳನ್ನು ಸೆಳೆಯುವ ಚಾಕಚಕ್ಯತೆ ಹೊಂದಿದ್ದಾರೆಂದು ಹೇಳಿದೆ. ಜೆಡಿಎಸ್ ಅಭ್ಯರ್ಥಿಗಳಿಗೆ ಅಲ್ಪಸಂಖ್ಯಾತ ಮತಗಳು ಸ್ವಲ್ಪ ಮಟ್ಟಿಗೆ ಒಲವಾಗಬಹುದು ಎಂದು ಹೇಳಲಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಯಡಿಯೂರಪ್ಪನವರ ಹೊರತಾಗಿ ಹಿರಿಯ ನಾಯಕರು ಮತ್ತು ಸಂಪುಟ ಸಚಿವರು ಕೂಡ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಪಕ್ಷದ ಭವಿಷ್ಯಕ್ಕೆ ಒತ್ತು ನೀಡಲು ಬೊಮ್ಮಾಯಿ ಅವರು, ಬಂಡಾಯ ನಾಯಕ ಚನ್ನಪ್ಪ ಆರ್ ಬಳ್ಳಾರಿಯವರ ಮನವೊಲಿಸಿದ್ದು ಅವರು ನಿನ್ನೆ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಇನ್ನು ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬೊಮ್ಮಾಯಿಯವರ ತವರು ಜಿಲ್ಲೆಗೆ ಬರುವುದರಿಂದ ಅವರಿಗೆ ಇದು ಪ್ರತಿಷ್ಠೆಯ ವಿಷಯವಾಗಿದೆ.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಮೊನ್ನೆ ಮಂಗಳವಾರ ಸಿಂಧಗಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ನಜಿಯಾ ಶಕೀಲ್ ಅಹ್ಮದ್ ಅಂಗಡಿ ಪರ ಪ್ರಚಾರ ಕಾರ್ಯ ಆರಂಭಿಸಿದರು. ಸಿಂಧಗಿ ಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್‍ನ ಎಂ ಸಿ ಮನಗೂಳಿ ಶಾಸಕರಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರು ತೀರಿಕೊಂಡ ನಂತರ ಉಪ ಚುನಾವಣೆ ಅನಿವಾರ್ಯವಾಯಿತು.

ಮಾಜಿ ಸಚಿವ ದಿ.ಎಂ.ಸಿಮನಗುಳಿ ಅವರು ಪುತ್ರ ಅಶೋಕ್ ಮನಗೂಳಿ ಅವರನ್ನು ಪಕ್ಷಕ್ಕೆ ಕರೆದುಕೊಂಡು ಉಪ ಚುನಾವಣೆಗೆ ನಿಲ್ಲಿಸಿರುವುದರಿಂದ ಜೆಡಿಎಸ್ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಬೇಕೆಂದು ಅಂದುಕೊಂಡಿದೆ. ಹಾನಗಲ್‍ನಲ್ಲಿ ಜೆಡಿಎಸ್ ಹಿರಿಯ ನಾಯಕ ಹೆಚ್ ಡಿ ಕುಮಾರಸ್ವಾಮಿ ನಿಯಾಜ್ ಶೇಖ್ ಪರ ಪ್ರಚಾರ ನಡೆಸಲಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು, ಯಡಿಯೂರಪ್ಪನವರು ಹಾನಗಲ್ ಮತ್ತು ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.