
ಬೆಂಗಳೂರು : ಸೈಬರ್ ಕ್ರೈಂ ಜಾಲಕ್ಕೆ ಸಿಲುಕಿದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ 89 ಸಾವಿರ ರೂ. ಕಳೆದುಕೊಂಡಿದ್ದಾರೆ. ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಕಳ್ಳರು 89 ಸಾವಿರ ರೂ. ದೋಚಿದ್ದಾರೆ. ಕರೆ ಮಾಡಿದ್ದ ವ್ಯಕ್ತಿಗೆ ಒಟಿಪಿ ಹೇಳಿದ್ದ ಶಂಕರ ಬಿದರಿ ಕೆಲವೇ ನಿಮಿಷಗಳಲ್ಲಿ ಹಣ ಕಳೆದುಕೊಂಡಿದ್ದಾರೆ.
ಪಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಶಂಕರ ಬಿದಿರಿಗೆ ಕರೆ ಮಾಡಿದ್ದರು. ಲಿಂಕ್ ಮಾಡದಿದ್ದರೆ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದರು.
ಮೊಬೈಲ್‌ಗೆ ಬರುವ ಸಂದೇಶದಲ್ಲಿನ ಒಟಿಪಿ ಹೇಳುವಂತೆ ಕೇಳಿದ್ದಾರೆ. ವ್ಯಕ್ತಿಯ ಮಾತು ನಂಬಿ ಒಟಿಪಿ ಹೇಳಿದ ಕೆಲವೇ ನಿಮಿಷದಲ್ಲಿ ಶಂಕರ ಬಿದರಿ ಬ್ಯಾಂಕ್ ಖಾತೆಯಿಂದ 89 ಸಾವಿರ ರೂ. ಕಡಿತಗೊಂಡಿದೆ.
ವಂಚನೆ ಮಾಡಿರುವ ಕುರಿತು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಶಂಕರ ಬಿದರಿ ದೂರು ನೀಡಿದ್ದಾರೆ. ದೂರಿನ ಅನ್ವಯ ಎಫ್‌ಐಆರ್ ಸಹ ದಾಖಲು ಮಾಡಿಕೊಳ್ಳಲಾಗಿದೆ. ಸೈಬರ್ ಕ್ರೈಂನ ಅನೇಕ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗುತ್ತದೆ. ಆದರೆ ವಂಚನೆಗೆ ಒಳಗಾದ ವ್ಯಕ್ತಿಗಳಿಗೆ ಹಣ ಮರಳಿ ಸಿಗುವುದು ತೀರಾ ವಿರಳವಾಗಿದೆ.
ಸದಾ ಎಚ್ಚರವಾಗಿರಿ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ನಡೆಸುವ ಸೈಬರ್ ಕ್ರೈಂ ಪೊಲೀಸ್ ಇಲಾಖೆಗೆ ಹೊಸ ಸವಾಲು ಆಗಿದೆ. ಯಾವುದೋ ಪ್ರದೇಶದಲ್ಲಿ ಕುಳಿತು, ಬ್ಯಾಂಕ್ ಖಾತೆಯಿಂದ ಹಣವನ್ನು ದೋಚಲಾಗುತ್ತದೆ.
ಎಟಿಎಂ ಕಾರ್ಡ್ ವ್ಯಾಲಿಡಿಟಿ ಮುಗಿದಿದೆ. ಬ್ಯಾಂಕ್ ಖಾತೆ ಅಪ್‌ಡೇಟ್ ಮಾಡಿ, ಬಹುಮಾನ ಬಂದಿದೆ, ಲಾಟರಿಯಲ್ಲಿ ಹಣ ಬಂದಿದೆ ಸೇರಿದಂತೆ ಅನೇಕ ಅಮಿಷಗಳನ್ನು ವೊಡ್ಡಿ ಹಣ ಪಡೆದು ವಂಚಿಸಲಾಗುತ್ತದೆ.
ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಮಾಹಿತಿ ನೀಡುವ ನೆಪದಲ್ಲಿ ಒಟಿಪಿ, ಬ್ಯಾಂಕ್ ಖಾತೆ ವಿವರ ಪಡೆದು ಹಣವನ್ನು ಎಗರಿಸುತ್ತಾರೆ. ಪೊಲೀಸರು ಸಹ ಸೈಬರ್ ಕ್ರೈಂ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಲೇ ಇದ್ದಾರೆ.
ಕಂಪ್ಯೂಟರ್ ಹಾಗೂ ಅಂತರ್ಜಾಲ ತಂತ್ರಜ್ಞಾನ ಬಳಸಿಕೊಂಡು ನಡೆಸುತ್ತಿರುವ ಸೈಬರ್ ಕ್ರೈಂ ಕೂಡ ಸಾಮಾಜಿಕ ಸಮಸ್ಯೆಯಾಗಿ ಉಲ್ಬಣಗೊಳ್ಳುತ್ತಿದೆ. ಇತ್ತೀಚೆಗೆ ಪೊಲೀಸ್ ಇಲಾಖೆಗೆ ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿಯಂತಹ ಉನ್ನತ ಶಿಕ್ಷಣ ಪಡೆದವರು ಸೇರುತ್ತಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಪಡೆದಂತಹ ಅಭ್ಯರ್ಥಿಗಳಿಗೆ ತಂತ್ರಜ್ಞಾನದ ಬಳಕೆ ಸುಲಭವಾಗುತ್ತಿದ್ದು, ಈ ನಿಟ್ಟಿನಲ್ಲಿ ಸೈಬರ್ ಕ್ರೈಂಗಳನ್ನು ತಡೆಗಟ್ಟಲು ತರಬೇತಿ ನೀಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ತುರ್ತಾಗಿ ಹಣ ಬೇಕಾಗಿದೆ ಎಂದು ಬೇಡಿಕೆ ಇಟ್ಟು ವಂಚಿಸುವ ಜಾಲವೂ ಸಕ್ರಿಯವಾಗಿದೆ. ಡಿಜಿಟಲೀಕರಣ ಯುಗದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ತಡೆ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ.
ಸೈಬರ್ ಅಪರಾಧಗಳಿಂದ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕಿದೆ. ಸಾಮಾಜಿಕ ತಾಣಗಳಿಂದ ಎಷ್ಟೇ ಒಳಿತಾಗಿದ್ದರೂ, ಸಹ ಅಷ್ಟೇ ಕೆಡುಕು ಸಹ ಇದೆ ಎಂಬುದನ್ನು ಜನರು ಮರೆಯಬಾರದು. ಕ್ಯೂ ಆರ್ ಕೋಡ್ ನಿರ್ವಹಿಸುವಾಗ ಮುನ್ನೆಚ್ಚರಿಕೆ ವಹಿಸಬೇಕು.
ಸೈಬರ್ ಕಾನೂನು ಉಲ್ಲಂಘಿಸಿದಲ್ಲಿ 3 ವರ್ಷದವರೆಗೆ ಜೈಲು ಶಿಕ್ಷೆ, 10 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ. ಮೊಬೈಲ್ ಮತ್ತು ಲ್ಯಾಪ್‍ಟಾಪ್‌ಗಳಲ್ಲಿ ಇರುವ ವಿವಿಧ ಅಪ್ಲಿಕೇಷನ್‌ಗಳ ಮೂಲಕ ವಂಚನೆ ಮಾಡಲಾಗುತ್ತಿದೆ.
ಅಪರಿಚಿತರು ನಿಮಗೆ ಕರೆ ಮಾಡಿ ನಿಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಬಂಧಿತ ಮಾಹಿತಿಗಳನ್ನು ಕೇಳಿದಲ್ಲಿ ಯಾವುದೇ ಕಾರಣಕ್ಕೂ ನೀಡಬೇಡಿ. ಯಾವುದೇ ಬ್ಯಾಂಕಿನ ಅಧಿಕಾರಿಗಳು ನಿಮಗೆ ಕರೆ ಮಾಡಿ ನಿಮ್ಮ ಮಾಹಿತಿಗಳನ್ನು ಕೇಳುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ.
ನಿಮ್ಮ ಕ್ರೆಡಿಟ್/ ಡೆಬಿಟ್ ಕಾರ್ಡ್ ಮಾಹಿತಿ ಪಡೆದು ನಿಮಗೆ ಬರುವ ಓಟಿಪಿಯನ್ನು ತಿಳಿದುಕೊಂಡು ವಂಚನೆ ಮಾಡಲಾಗುತ್ತದೆ. ಒಂದು ವೇಳೆ ಆ ರೀತಿ ವಂಚನೆಗೊಳಗಾದಲ್ಲಿ ಕೂಡಲೆ 112 ಅಥವಾ ನಿಮ್ಮ ಹತ್ತಿರದ ಸೈಬರ್ ಕ್ರೈಂ ಠಾಣೆ ಅಥವಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿಯನ್ನು ಹಂಚಿಕೊಳ್ಳಿ.