ಮುಂಡಗೋಡ : ಇನ್ನರ್ ವೀಲ್ ಕ್ಲಬ್ ಮುಂಡಗೋಡ ವತಿಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೫ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ರಾಜ್ಯಕ್ಕೆ ೩ನೇ ರ‍್ಯಾಂಕ್ ಗಳಿಸಿದ ವಿಜೇತಾ ಕಲ್ಮಟ್ಲೇರ್, ೫ನೇ ರ‍್ಯಾಂಕ್ ಗಳಿಸಿದ ಮುಸ್ಕಾನ ಬಂಡಿ ಹಾಗೂ ಮುಂಡಗೋಡ ತಾಲೂಕಿಗೆ ೩ನೇ ಸ್ಥಾನ ಗಳಿಸಿದ ಅಸ್ಮಿರಖಾನ್ ಮತ್ತು ೪ನೇ ಸ್ಥಾನ ಪಡೆದಿರುವ ಶಿಫಾನ್ ಖಾನ್ ಹಾಗೂ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.
ಈ ಕಾರ‍್ಯಕ್ರಮದಲ್ಲಿ ೫ ವಿದ್ಯಾರ್ಥಿಗಳನ್ನು ಹಾಗೂ ಇವರ ಸಾಧನೆಗೆ ಸ್ಪೂರ್ತಿಯಾಗಿ, ಬೆನ್ನೆಲುಬಾಗಿ ನಿಂತಿರುವ ರೋಟರಿ ಶಾಲಾ ಮುಖ್ಯಾಧ್ಯಾಪಕ ಎಸ್.ಎಸ್.ಅಂಗಡಿ ಹಾಗೂ ಅಂದಲಗಿಯ ಸರಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಮಂಜುನಾಥ ಯಾಜಿ ಅವರನ್ನು ಸಹ ಸನ್ಮಾನಿಸಲಾಯಿತು.
ರೋಟರಿ ಶಾಲಾ ಮುಖ್ಯಾಧ್ಯಾಪಕ ಎಸ್.ಎಸ್.ಅಂಗಡಿ ಮಾತನಾಡುತ್ತಾ, ಯಾವಾಗಲೂ ನಮ್ಮ ರೋಟರಿ ಶಾಲೆಯ ವಿದ್ಯಾರ್ಥಿಗಳು ತಾಲುಕಿಗೆ ಪ್ರಥಮ ಸ್ಥಾನ ಪಡೆಯುತ್ತಾ ಬಂದಿದ್ದಾರೆ. ಮುಂದೆ ಸಹ ಇದನ್ನು ಬಿಟ್ಟು ಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ೬೨೫ಕ್ಕೆ ೬೨೫ ಪಡೆಯುವ ಹಾಗೆ ಪ್ರಯತ್ನಿಸುತ್ತೇವೆ ಎಂದರು. ಅಂದಲಗಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ಯಾಜಿ ಮಾತನಾಡಿ, ಅತಿ ಬಡತನದಲ್ಲಿ ಇದ್ದ ಮಂಜುನಾಥ ಹೆಚ್ಚು ಅಂಕ ಗಳಿಸಲು ಕಾರಣ ನಮ್ಮ ಶಿಕ್ಷಕರ ವೃಂದ. ಅವರ ಪ್ರಯತ್ನದಿಂದ ಇವನು ಈ ಸಾಧನೆ ಮಾಡಲು ಸಾಧ್ಯವಾಯಿತು. ಓದಿಗೆ ಬಡತನ ಸಿರಿತನ ಎಂಬ ಭೇದವಿಲ್ಲ. ಮಕ್ಕಳು ಚನ್ನಾಗಿ ಶ್ರದ್ಧೆಯಿಂದ ಓದಿದರೆ ಏನನ್ನಾದರೂ ಸಾಧನೆ ಮಾಡಬಹುದು ಎಂದರು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಶಶಿರೇಖಾ ಬೈಜು ಅಧ್ಯಕ್ಷತೆ ವಹಿಸಿ, ಎಲ್ಲರನ್ನು ಸ್ವಾಗತಿಸಿದರು. ಗಿರಿಜಾ ನಾಯ್ಕ ಕಾರ‍್ಯಕ್ರಮ ನಿರೂಪಿಸಿದರು. ಮಂಜುಳಾ ಇಂಗಳೆ ವಂದಿಸಿದರು. ಇನ್ನರ್ ವೀಲ್ ಕ್ಲಬ್ ಸದಸ್ಯರು, ರೋಟರಿ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಇದ್ದರು.