ನ್ಯಾಸರ್ಗಿ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡಲು ನಿರ್ಧಾರ

Spread the love

ಮುಂಡಗೋಡ : ಹೋಬಳಿ ಮಟ್ಟದಲ್ಲಿ ಒಂದೊಂದು ಅಂಗನವಾಡಿಗಳನ್ನು ಮಾದರಿ ಅಂಗನವಾಡಿಯನ್ನಾಗಿ ಮಾಡಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮುಂದಾಗಿದ್ದು  ಅದರಂತೆ ಮುಂಡಗೋಡ ತಾಲೂಕಿನ  ನ್ಯಾಸರ್ಗಿ ಅಂಗನವಾಡಿ ಕೆಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರ ಮಾಡಲು ನಿರ್ಧರಿಸಿದ್ದಾರೆ.

   ನ್ಯಾಸರ್ಗಿ ಅಂಗನವಾಡಿ ಕೇಂದ್ರ ಈಗಾಗಲೆ ಮಾದರಿ ಅಂಗನವಾಡಿಯಾಗಿದ್ದು  ಅಂಗನವಾಡಿ ಕೇಂದ್ರದ ಒಳಗೆ ಹೋದರೆ ಮಕ್ಕಳ ಕಲಿಕೆಗೆ ಬೇಕಾಗುವ ಪೂರಕ ವಾತಾವರಣ ಹೊಂದಿದ್ದು ಆಟ ಹಾಗೂ ಪಾಠಗಳಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲ ಪರಿಕರಗಳು ಈ ಅಂಗನವಾಡಿಯಲ್ಲಿವೆ. ಅಂಗನವಾಡಿ ಸುತ್ತಮುತ್ತಲು ಹೂವಿನ ಗಿಡಗಳು ಸೇರಿದಂತೆ ತರಕಾರಿ ಗಿಡಗಳನ್ನು ಬೆಳೆಸಲಾಗಿದೆ. ಮಕ್ಕಳಿಗೆ ಪೌಷ್ಠಿಕ ಆಹಾರಕ್ಕೆ ಬೇಕಾಗಿರುವ ತರಕಾರಿಯನ್ನು ಸಹ ಬೆಳೆಯಲಾಗಿದೆ. ಇದನ್ನು ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ನೀಡಲಾಗುತ್ತದೆ. ಮಾದರಿ ಅಂಗನವಾಡಿಗೆ ಬೇಕಾಗುವ ಎಲ್ಲ ಅರ್ಹತೆಯೂ ಈ ಅಂಗನವಾಡಿ ಹೊಂದಿದೆ.

   ಅಲ್ಲಿಯ ಅಂಗನವಾಡಿ ಕಾರ್ಯಕರ್ತೆ ಶಾರದಾ ನಾಯರ್ ಅವರು ಕಳೆದ ಇಪ್ಪತೈದು ವರ್ಷಗಳಿಂದ  ಕಾರ್ಯನಿರ್ವಹಿಸುತ್ತಿದ್ದು ಈ ಅಂಗನವಾಡಿಯನ್ನು ಮಾದರಿ ಮಾಡುವುದರಲ್ಲಿ ಶ್ರಮ ವಹಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಹೇಳುವ ಪ್ರಕಾರ ಈ ಅಂಗನವಾಡಿಯನ್ನು ಅಭಿವೃದ್ಧಿ ಪಡಿಸಲು ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಹಕಾರದಿಂದ  ಈ ಅಂಗನವಾಡಿಯನ್ನು ಅಭಿವೃದ್ಧಿ ಮಾಡಲು ಅನುಕೂಲವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೇಟಿ : ಸೋಮವಾರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ್ ಅವರು ತಾಲೂಕಿನ ನ್ಯಾಸರ್ಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ಅಂಗನವಾಡಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಹದಿನಾಲ್ಕನೇ ಹಣಕಾಸು ಯೋಜನೆಯಲ್ಲಿ ಮೂಲಭೂತ ಸೌಕರ್ಯಯನ್ನು ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಹೇಳಿಕೆ : ಮುಂಡಗೋಡ ತಾಲೂಕಿನ ನ್ಯಾಸರ್ಗಿ ಹಾಗೂ ಕೋಡಂಬಿ ಗ್ರಾಮದ ಅಂಗನವಾಡಿಗಳನ್ನು ಮಾದರಿ ಅಂಗನವಾಡಿಯನ್ನಾಗಿ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಇದಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಗ್ರಾಮ ಪಂಚಾಯತ ಹಾಗೂ ಜಿಲ್ಲಾ ಪಂಚಾಯತದಿಂದ ಒದಗಿಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪ್ರಭಾರ ಸಿಡಿಪಿಒ ದೀಪಾ ಬಂಗೇರಾ ಹೇಳಿದ್ದಾರೆ.

ಹೇಳಿಕೆ: ಜಿಲ್ಲೆಯ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಒಂದೊಂದು ಅಂಗನವಾಡಿಗಳನ್ನು ತೆಗೆದುಕೊಂಡು ಅವುಗಳನ್ನು ಮಾದರಿ ಅಂಗನವಾಡಿಗಳನ್ನಾಗಿ ಪರಿವರ್ತಿಸಲಾಗುವುದು. ಅದಕ್ಕಾಗಿ  ಗ್ರಾಮ ಪಂಚಾಯತ ಅಭಿವೃದ್ಧಿ ಹಣದಿಂದ ಹಾಗೂ ಜಿಲ್ಲಾ ಪಂಚಾಯತ ಹಣದಿಂದ ಈ ಅಂಗನವಾಡಿಗಳಿಗೆ ಮೂಲ ಭೂತ ಸೌಕರ್ಯ ಕಲ್ಪಿಸಲಾಗುವುದು ಇಂದು ನ್ಯಾಸರ್ಗಿ ಅಂಗನವಾಡಿಗೆ ಸಹ ಭೇಟಿ ನೀಡಿದ್ದೇನೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ್  ತಿಳಿಸಿದರು.